ಹೇಮಾವತಿ ನಾಲೆ ರಸ್ತೆ ದುರಸ್ತಿಗೆ ಕೋಟಿ ಕೋಟಿ ಮಣ್ಣುಪಾಲು: 243 ಕೋಟಿ ರೂ. ಗುಳುಂ?

ಹಾಸನ:ಜೂ-14: ಮಂಡ್ಯ ಜಿಲ್ಲೆಗೆ ನೀರು ಹರಿಸುವ ಹೇಮಾವತಿ ಎಡದಂಡೆ ನಾಲೆ (ಸಾಹುಕಾರ್ ಚನ್ನಯ್ಯ ನಾಲೆ) ಆಧುನೀಕರಣ ಕಾಮಗಾರಿಯಡಿ ಸರ್ವೀಸ್ ಮತ್ತು ನಾಲಾ ತಪಾಸಣಾ ರಸ್ತೆಗಳಿಗೆ ಮಣ್ಣು ಸುರಿಯುವ ಹೆಸರಿನಲ್ಲಿ ನೂರಾರು ಕೋಟಿ ರೂ. ಗುಳುಂ ಶಂಕೆ ಮೂಡಿದ್ದು, ಭಾರೀ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ.

ಇಲಾಖೆ ಹಿರಿಯ ಅಧಿಕಾರಿಗಳೇ ಬೆರಗಾಗುವಷ್ಟು ಪ್ರಮಾಣದಲ್ಲಿ ರಸ್ತೆಗೆ ಮಣ್ಣು ಸುರಿಯುವ ಕಾಮಗಾರಿಗಾಗಿ ನೂರಾರು ಕೋಟಿ ರೂ. ವ್ಯಯಿಸಲಾಗಿದೆ. ಯಾವುದೇ ರೀತಿಯಲ್ಲೂ ಅಸಾಧ್ಯ ಎನ್ನುವಷ್ಟು ಮಣ್ಣು ಸುರಿಯುವ ಲೆಕ್ಕವನ್ನು ಇಂಜಿನಿಯರ್​ಗಳು ದಾಖಲೆಯಲ್ಲಿ ನಮೂದಿಸಿ ಕೋಟಿ ಕೋಟಿ ದೋಚಿದ್ದು, ಹಿರಿಯ ಅಧಿಕಾರಿಯೇ ಆಕ್ಷೇಪವೆತ್ತಿದರೂ ಕಿರಿಯ ಅಧಿಕಾರಿಗಳು ಕ್ಯಾರೇ ಎನ್ನದೇ ಬಿಲ್ ಪಾವತಿಸಿರುವುದನ್ನು ಗಮನಿಸಿದರೆ ‘ಪ್ರಭಾವೀ’ ವ್ಯಕ್ತಿಗಳ ಆಶೀರ್ವಾದದ ಬಲ ಇರುವ ಸಂಶಯ ಮೂಡುತ್ತಿದೆ. ಅಲ್ಲದೇ ಹಣ ದೋಚಲೆಂದೇ ಕಾಮಗಾರಿ ಅಂದಾಜುಪಟ್ಟಿ ತಯಾರಿಸಿ ಅನುಮೋದನೆ ಪಡೆದುಕೊಂಡಿರುವ ಶಂಕೆಯೂ ಮೂಡುತ್ತಿದೆ. ಈ ಲೂಟಿಯನ್ನು ಗಮನಿಸಿದರೆ ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ರೂ.ಗಳ ಅಪಾರ ಹಣ ವಿವಿಧ ಯೋಜನೆ ಹೆಸರಿನಲ್ಲಿ ಮಂಜೂರಾಗುತ್ತಿರುವುದರ ಹಿನ್ನೆಲೆಯನ್ನೂ ಶಂಕಿಸುವಂತಾಗಿದೆ.

ಸಾಹುಕಾರ್ ಚನ್ನಯ್ಯ ನಾಲೆ ಆಧುನೀಕರಣಕ್ಕೆ 2017ರ ನ. 14ರಂದು ನಿಗದಿಪಡಿಸಿದ್ದ 817,73,04,517 ರೂ.ಗೆ ಶೇ. 8 ಹೆಚ್ಚುವರಿ ಸೇರಿಸಿ 883,14,88,878 ರೂ.ಗೆ ಮೋನಯ್ಯ ಕಟ್ಟಿಮನಿ ಎಂಬ ಪ್ರಥಮದರ್ಜೆ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು 2018ರ ಫೆಬ್ರವರಿ 21ರಂದು ಕಾರ್ಯಾದೇಶ ನೀಡಲಾಗಿದೆ. ಅಧಿಕಾರಿಗಳು ಕೆಲವು ಕೆಲಸಗಳನ್ನು ಪುನರಾವರ್ತಿಸಿ, ವಾಸ್ತವಕ್ಕಿಂತಲೂ ಹೆಚ್ಚು ಮೊತ್ತ ನಮೂದಿಸಿದ್ದಾರೆ ಹಾಗೂ ಸರ್ವೀಸ್, ನಾಲಾ ತಪಾಸಣಾ ರಸ್ತೆಗೆ ಭಾರಿ ಪ್ರಮಾಣದ ಮಣ್ಣು ತುಂಬಿಸುವ ಬಗ್ಗೆ ಲೆಕ್ಕ ತೋರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಾಮಗಾರಿ ಸಂಖ್ಯೆ 15ರಲ್ಲಿ ಸರ್ವೀಸ್ ಮತ್ತು ನಾಲಾ ತಪಾಸಣಾ ರಸ್ತೆಗೆ ಕೇಸಿಂಗ್ ಮಣ್ಣು ಹಾಕಿ ಅಭಿವೃದ್ಧಿಪಡಿಸುವ ಕೆಲಸಕ್ಕೆ 235,83,59,165 ರೂ.ಗೆ ಅನುಮೋದನೆ ಪಡೆಯಲಾಗಿದೆ. ವಿವರ ತಿರುಚಿ ಕಾಮಗಾರಿ ಸಂಖ್ಯೆ 61ರಲ್ಲಿ ಮತ್ತೆ 7,48,94,760 ರೂ. ಅನುಮೋದನೆ ಪಡೆಯಲಾಗಿದೆ.

ಮಣ್ಣಿನ ಲೆಕ್ಕ ಅಯೋಮಯ: ಹೇಮಾವತಿ ಎಡದಂಡೆ ನಾಲೆಯ ಸರ್ವೀಸ್ ಹಾಗೂ ತಪಾಸಣಾ ರಸ್ತೆ ಸುಸ್ಥಿತಿಯಲ್ಲಿವೆ. ಹಲವು ಕಿಮೀವರೆಗೆ ಜಲ್ಲಿ ಹಾಗೂ ಡಾಂಬರ್ ರಸ್ತೆಯಾಗಿ ಪರಿವರ್ತಿಸಲಾಗಿದೆ. ಅದೇ ರಸ್ತೆಗೆ ಕೇಸಿಂಗ್ ಮಣ್ಣು ಹಾಕಿ ಅಭಿವೃದ್ಧಿಪಡಿಸುವ ಕಾಮಗಾರಿಗೆ 243 ಕೋಟಿ ರೂ.ಗೆ ಅನುಮೋದನೆ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ರಸ್ತೆಗೆ 37.4 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣು ಬಳಕೆಯಾಗಲಿದೆ ಎಂದು ಅಂದಾಜು ವೆಚ್ಚದಲ್ಲಿ ನಮೂದಿಸಲಾಗಿದೆ. ಪ್ರತಿ ಕ್ಯೂಬಿಕ್ ಮೀಟರ್ ಮಣ್ಣಿಗೆ 672.13 ರೂ. ದರ ನಿಗದಿಪಡಿಸಲಾಗಿದೆ. 10 ಚಕ್ರದ ಟಿಪ್ಪರ್ ಪ್ರತಿ ಲೋಡ್​ಗೆ 18 ಕ್ಯೂಬಿಕ್ ಮೀಟರ್ ಮಣ್ಣು ಸಾಗಿಸಬಹುದು. 37.4 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣು ಸಂಗ್ರಹಿಸಲು ಅಂತಹ ಟಿಪ್ಪರ್ ಒಟ್ಟು 2,01,122 ಲೋಡ್ ಮಣ್ಣು ತಂದು ಸುರಿಯಬೇಕು! ಮಣ್ಣನ್ನು ನಾಲೆ ಸುತ್ತಲಿನ 40 ಕಿಮೀ. ವ್ಯಾಪ್ತಿಯಿಂದ ತರಲು ಅನುಮೋದನೆ ನೀಡಿದ್ದು, ಈವರೆಗೂ ಅಷ್ಟು ವ್ಯಾಪ್ತಿಯ ಯಾವ ಗ್ರಾಮದಿಂದಲೂ ಮಣ್ಣು ತೆಗೆಯಲು ಗುತ್ತಿಗೆದಾರ, ಕಂದಾಯ ಇಲಾಖೆಗೆ ಅರ್ಜಿಯನ್ನೂ ಸಲ್ಲಿಸಿಲ್ಲ, ಒಪ್ಪಿಗೆಯನ್ನೂ ಪಡೆದಿಲ್ಲ. ಆದರೂ 243 ಕೋಟಿ ರೂ. ಮಣ್ಣಿನ ರಸ್ತೆ ನಿರ್ವಣದ ಕಾಮಗಾರಿಗೆ ಅನುಮೋದನೆ ಪಡೆದು ಕಾಮಗಾರಿ ಚಾಲ್ತಿಯಲ್ಲಿದ್ದು, ಅರ್ಧಕ್ಕಿಂತಲೂ ಹೆಚ್ಚು ಮೊತ್ತದ ಬಿಲ್ ಈಗಾಗಲೇ ಪಾವತಿಯಾಗಿದೆ.

ಕಿ.ಮೀ.ಗೆ 1.5 – 2 ಕೋಟಿ ರೂ. : ರಸ್ತೆಗೆ ಕೇಸಿಂಗ್ ಮಣ್ಣು ಹಾಕಿ ಅಭಿವೃದ್ಧಿಪಡಿಸಲು ಪ್ರತಿ ಕಿಮೀ.ಗೆ ಸುಮಾರು 1.5 – 2 ಕೋಟಿ ರೂ. ವೆಚ್ಚ ನಿಗದಿಪಡಿಸಿ ಅನುಮೋದನೆ ಪಡೆಯಲಾಗಿದೆ. ರಸ್ತೆಗಳನ್ನು ಹೇಮಾವತಿ ಯೋಜನೆ ವತಿಯಿಂದಲೇ ಪ್ರತಿ ವರ್ಷ ನಿರ್ವಹಿಸಲಾಗುತ್ತಿತ್ತು. ನಾಲೆ ಮೇಲಿನ ರಸ್ತೆಗಳಿಗೆ ಕನಿಷ್ಠ ಹೊಸ ಮಣ್ಣು ಸುರಿಯುವ ಕೆಲಸವೂ ಆಗಿಲ್ಲ.

ಮಣ್ಣಿನಲ್ಲಿಯೂ ಕೋಟ್ಯಂತರ ರೂ. ಸಾರ್ವಜನಿಕರ ಹಣ ಗುಳುಂ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳು ಮಾತ್ರವೇ ಭಾಗಿಯಾಗಿದ್ದಾರೆಯೇ ಅಥವಾ ರಾಜಕಾರಣಿಗಳು, ಶಾಸಕರು, ಸಚಿವರೂ ಶಾಮೀಲಾಗಿದ್ದಾರೆಯೇ ಎನ್ನುವುದು ತನಿಖೆಯಿಂದ ಗೊತ್ತಾಗಬೇಕು. ಮೇಲ್ನೋಟಕ್ಕೆ ಅಧಿಕಾರಿಗಳ ಮಟ್ಟದಲ್ಲಿ ಭಾರಿ ಗೋಲ್‍ಮಾಲ್ ಆಗಿರುವಂತೆ ಕಾಣಿಸುತ್ತಿದೆ. ಈ ವಿಷಯವಾಗಿ ತನಿಖೆ ಯಾಗಬೇಕು ಎಂದು ಉಸ್ತುವಾರಿ ಸಚಿವರನ್ನು ಒತ್ತಾಯಿಸುತ್ತೇನೆ. ನಮ್ಮ ಪಕ್ಷದ ರಾಜ್ಯಮಟ್ಟದ ನಾಯಕರಿಗೆ ಎಲ್ಲ ಮಾಹಿತಿ ಒದಗಿಸುತ್ತೇನೆ. ಸತ್ಯಶೋಧನಾ ಸಮಿತಿ ರಚಿಸಿ ರಾಜ್ಯ ನಾಯಕರನ್ನು ಕಾಮಗಾರಿ ಪರಿಶೀಲನೆಗೆ ಕರೆತರುತ್ತೇನೆ. ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯಪಾಲರಿಗೂ ದೂರು ನೀಡುತ್ತೇನೆ.

| ಪ್ರೀತಂ ಜೆ.ಗೌಡ, ಹಾಸನ ಕ್ಷೇತ್ರದ ಬಿಜೆಪಿ ಶಾಸಕ

ಅಧಿಕಾರಿಗಳಿಗೂ ಆಗಿತ್ತು ಅಚ್ಚರಿ
ಕಾಮಗಾರಿಗೆ ಸಂಬಂಧಿಸಿದಂತೆ 2018ರ ಫೆಬ್ರವರಿ 27ರಂದು ಹೇಮಾವತಿ ನಾಲಾ ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಟಿ.ಕೆ. ವೆಂಕಟಾದ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿ ಪ್ರತಿ ವಿಜಯವಾಣಿ ಬಳಿಯಿದೆ. ಕಾಮಗಾರಿ ಪಟ್ಟಿಯಲ್ಲಿ ಕೇಸಿಂಗ್ ಮಣ್ಣು ಹಾಕಿ ರಸ್ತೆ ನಿರ್ವಿುಸುವ ಕೆಲಸಗಳು ಪುನರಾವರ್ತಿತವಾಗಿರುವ ಹಾಗೂ ಈಗಾಗಲೇ ಸೇವೆಯಲ್ಲಿರುವ ರಸ್ತೆಗಳಿಗೆ ಅಗಾಧ ಪ್ರಮಾಣದ ಮಣ್ಣು ಅಗತ್ಯವೆಂದು ಅನುಮೋದನೆ ಪಡೆದಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಇಷ್ಟೊಂದು ಪ್ರಮಾಣದ ಕೇಸಿಂಗ್ ಮಣ್ಣು ಬಳಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ಕಾರ್ಯಪಾಲಕ ಇಂಜಿನಿಯರ್​ಗಳು ಆಶ್ಚರ್ಯ ವ್ಯಕ್ತಪಡಿಸಿದ್ದರು ಎನ್ನುವುದು ಸಭೆಯ ನಡಾವಳಿಯಲ್ಲಿ ನಮೂದಾಗಿದೆ. ಇದನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವಂತೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಟಿ.ಕೆ. ವೆಂಕಟಾದ್ರಿ ಚನ್ನರಾಯಪಟ್ಟಣದ ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್​ಗೆ ಸೂಚಿಸಿದ್ದರು.

ಕಾರ್ಯಪಾಲಕ ಇಂಜಿನಿಯರ್​ನಿಂದ ಪ್ರತಿಕ್ರಿಯೆ ಬಾರದಿದ್ದಾಗ 2018ರ ಮಾರ್ಚ್ 24ರಂದು ಹೇಮಾವತಿ ಯೋಜನೆ ಮುಖ್ಯ ಇಂಜಿನಿಯರ್​ಗೆ ವೆಂಕಟಾದ್ರಿ ಪತ್ರ ಬರೆದಿದ್ದರು. ಕಾರ್ಯಪಾಲಕ ಇಂಜಿನಿಯರ್​ರಿಂದ ಯಾವುದೇ ಮಾಹಿತಿ ಬಂದಿಲ್ಲ. ಮುಂದಿನ ಆಗುಹೋಗುಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ. ಇಷ್ಟಾದರೂ ಯೋಜನೆ ವೆಚ್ಚದಲ್ಲಿ ಯಾವುದೇ ಬದಲಾವಣೆ ಮಾಡದೆ ಕಾಮಗಾರಿ ಮುಂದುವರಿದಿದ್ದು, ಗುತ್ತಿಗೆದಾರರಿಗೆ ಬಿಲ್ ಪಾವತಿಯೂ ಆಗುತ್ತಿದೆ.
ಕೃಪೆ:ವಿಜಯವಾಣಿ

ಹೇಮಾವತಿ ನಾಲೆ ರಸ್ತೆ ದುರಸ್ತಿಗೆ ಕೋಟಿ ಕೋಟಿ ಮಣ್ಣುಪಾಲು: 243 ಕೋಟಿ ರೂ. ಗುಳುಂ?
irregularities-found-in-hemavathi-channel-renovation-work