ಕಡಕೊಳ ಬಳಿಯ ಟೋಲ್ ಪ್ಲಾಜಾದಲ್ಲಿ ನಿಯಮ ಬಾಹಿರವಾಗಿ ಟೋಲ್ ಸಂಗ್ರಹ: ರೈತ ಸಂಘ ಆರೋಪ

ಮೈಸೂರು, ಮಾರ್ಚ್ 03, 2023 (www.justkannada.in): ನಂಜನಗೂಡು ರಸ್ತೆಯಲ್ಲಿರುವ ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿ ಪ್ರಾಧಿಕಾರದ ಟೋಲ್’ನಲ್ಲಿ ನಿಯಮ ಬಾಹಿರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ರೈತ ಸಂಘ ಆರೋಪಿಸಿದೆ.

ಸೆಕ್ಸನ್ 8 ನ್ಯಾಷನಲ್ ಹೈವೇ ಫೀಸ್ (ಡಿಟರ್ ಮಿನೇಷನ್ ಆಫ್ ರೇಟ್ಸ್ ಆನ್ ಕಲೆಕ್ಸನ್ ರೂಲ್ಸ್2008)ರ ಪ್ರಕಾರ ಟೋಲ್ ಪ್ಲಾಜಾ ಮುನ್ಸಿಪಾಲಿಟಿ ವ್ಯಾಪ್ತಿಯಿಂದ 10 ಕಿ.ಮೀ ದೂರದಲ್ಲಿರಬೇಕು. ಆದರೆ 2021ರಲ್ಲಿ ಕೊಡಕೊಳ ಪಟ್ಟಣ ಪಂಚಾಯಿತಿ ಸ್ಥಾಪನೆಯಾಗಿದೆ. ಹೀಗಾಗಿ ಈ ಟೋಲ್ ಪ್ಲಾಜಾ ನಿಯಮಬಾಹಿರವಾಗಿದೆ.

ಸ್ಥಳೀಯರ ಅನುಕೂಲಕ್ಕಾಗಿ ಟೋಲ್ ಪ್ಲಾಜಾದಿಂದ ಪ್ರತ್ಯೇಕವಾದ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕಿದೆ. ಆದರೆ ಕಡಕೊಳ ಬಳಿ ಇರುವ ಟೋಲ್ ಪ್ಲಾಜಾ ಬಳಿ ಪ್ರತ್ಯೇಕ ಸರ್ವೀಸ್ ರಸ್ತೆ ಇಲ್ಲ. ಹೀಗಾಗಿ ಕಡಕೊಳಕಕ್ಕೆ ತೆರಳುವವರು ಎರಡೂವರೆ ಕಿ.ಮಿ. ಹೆದ್ದಾರಿಯಲ್ಲಿಯೇ ಹೋಗಬೇಕು. ಇದಕ್ಕಾಗಿ ಪ್ರತ್ಯೇಕ ಪಾಸ್ ತೆಗೆದುಕೊಳ್ಳಬೇಕು. ಇಲ್ಲ ಹಣ ಪಾವತಿಸಬೇಕು. ಇದು ನಿಯಮ ಬಾಹಿರವಾಗಿದೆ ಎಂದು ರೈತ ಸಂಘ ರಾಜ್ಯಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಆರ್ ಟಿಐ ಕಾರ್ಯಕರ್ತ ರವೀಂದ್ರ ದೂರಿದ್ದಾರೆ.

ಹೆದ್ದಾರಿ ಗುಣಮಟ್ಟ ಹಾಳಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಕರೆಯುವ ಯಾವುದೇ ಸೌಕರ್ಯ, ಲಕ್ಷಣಗಳಿಲ್ಲ. ಜನರಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ಕೂಡಲೇ ಇದನ್ನು ಸ್ಥಳಾಂತರಿಸಬೇಕು. ಹಾಗೂ ಹೆದ್ದಾರಿಯನ್ನು ದುರಸ್ತಿ ಪಡಿಸಬೇಕು. ಇಲ್ಲದಿದ್ದರೆ ರೈತ ಸಂಘದಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.