ದೇಶ ವಿರೋಧಿ ಚಟುವಟಿಕೆ ಮೇಲೆ ತೀವ್ರ ನಿಗಾ- ಸಿಎಂ ಬಸವರಾಜ ಬೊಮ್ಮಾಯಿ‌.

kannada t-shirts

ಹುಬ್ಬಳ್ಳಿ,ಸೆಪ್ಟಂಬರ್,1,2021(www.justkannada.in):   ದೇಶವಿರೋಧಿ ಚಟುವಟಿಕೆ ಕುರಿತು ರಾಜ್ಯ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ. ಎನ್ ಐ ಎ ಜೊತೆ ನಿಕಟ ಸಂಪರ್ಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಆಧಾರದಲ್ಲಿಯೇ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಹಲವರನ್ನು ಎನ್ ಐ ಎ ಬಂಧಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌  ತಿಳಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ನಮ್ಮ ಪೊಲೀಸರು ನಿರಂತರವಾಗಿ ಕರಾವಳಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ. ಅದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ. ಎನ್ ಐಎ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ದೇಶ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲಾಗುತ್ತಿದೆ  ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಗಣೇಶೋತ್ಸವ ಆಚರಣೆ ಸಂಬಂಧ ಸೆ.5 ರಂದು ತೀರ್ಮಾನ.

ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಕೋವಿಡ್ ಸ್ಥಿತಿಗತಿ ಮತ್ತಿತರ ಮಾಹಿತಿ ಪಡೆದುಕೊಂಡು, ಸೆಪ್ಟೆಂಬರ್ 5 ರಂದು ತಜ್ಞರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ‌  ತಿಳಿಸಿದರು.

ಗಣೇಶೋತ್ಸವ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತಿದೆ. ಹೀಗಾಗಿ ಕಳೆದ ಬಾರಿ ಹೇಗೆ ನಿರ್ವಹಣೆ ಮಾಡಲಾಗಿದೆ. ಈ ವರ್ಷದ ಪರಿಸ್ಥಿತಿಯಲ್ಲಿ ಹೇಗೆ ಆಚರಿಸಬೇಕು ಎಂಬ ಬಗ್ಗೆ ಜಿಲ್ಲೆಗಳಿಂದ  ಸಂಪೂರ್ಣ ವರದಿ ಪಡೆದು, ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು  ತಿಳಿಸಿದರು.

ಕೋವಿಡ್ 19 ಪರಿಸ್ಥಿತಿ ಸುಧಾರಿಸಿರುವ ಗಡಿ ಜಿಲ್ಲೆಗಳಲ್ಲಿ ಈಗಾಗಲೇ ವಾರಾಂತ್ಯ ಕರ್ಫ್ಯೂ ಹಿಂಪಡೆಯಲಾಗಿದೆ. ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು. ಪರಿಸ್ಥಿತಿ ಸುಧಾರಿಸಿದಂತೆಲ್ಲ, ನಿರ್ಬಂಧಗಳನ್ನು ಸಡಿಲಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಾಳೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ದಾವಣಗೆರೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇತರ ಹಲವು ಕೇಂದ್ರ ಸಚಿವರು ಸಹ ರಾಜ್ಯಕ್ಕೆ ಆಗಮಿಸಲಿದ್ದು, ಅವರೊಂದಿಗೆ ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಹಾಗೂ ರಾಜ್ಯದಲ್ಲಿ ಹಲವು ಕೇಂದ್ರದ ಯೋಜನೆಗಳಿಗೂ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ನಗರಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಬಡ ಜನರ ಜೀವನ ಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ  ಗೆಲುವು ಸಾಧಿಸಲಿದೆ. ಅಭಿವೃದ್ಧಿಗೆ ಜನ ಮತ ನೀಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Key words: Intensive- action-anti-living –activity-  CM Basavaraja Bommai

website developers in mysore