ತಪ್ಪಾದ ಕ್ಷೌರ: ಮಹಿಳಾ ರೂಪದರ್ಶಿಗೆ ರೂ.2 ಕೋಟಿ ಪರಿಹಾರ ಕಟ್ಟಿಕೊಡುವಂತೆ ಐಟಿಸಿ ಮೌರ್ಯಗೆ ಆದೇಶಿಸಿದ ಗ್ರಾಹಕರ ಪರಿಹಾರ ವೇದಿಕೆ.

ನವದೆಹಲಿ, ಸೆಪ್ಟೆಂಬರ್ 27, 2021 (www.justkannada.in): ನವದೆಹಲಿಯ ಐಷಾರಾಮಿ ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನ ಬ್ಯೂಟಿ ಪಾರ್ಲರ್‌ನ ಸೂಕ್ತ-ತರಬೇತಿ ಇಲ್ಲದಿರುವಂತಹ ಸಿಬ್ಬಂದಿಗಳು, ಅತ್ಯುತ್ತಮ ರೂಪದರ್ಶಿಯಾಗುವ ಕನಸು ಕಾಣುತ್ತಿದ್ದಂತಹ ಮಹಿಳಾ ರೂಪದರ್ಶಿಯೊಬ್ಬರಿಗೆ ಒದಗಿಸಿದ ಕ್ಷೌರ ಸೇವೆಯಲ್ಲಿ ಮಾಡಿದ ತಪ್ಪಿನಿಂದಾಗಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬರೋಬ್ಬರಿ ರೂ.2 ಕೋಟಿ ಪರಿಹಾರ ಕಟ್ಟಿಕೊಡುವಂತೆ ಆದೇಶ ಹೊರಡಿಸಿದೆ.

ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆರ್.ಕೆ. ಅಗರ್‌ ವಾಲ್ ಹಾಗೂ ಸದಸ್ಯ ಎಸ್.ಎಂ. ಕಾನಿಟ್ಕರ್ ಅವರನ್ನೊಳಗೊಂಡ ಪೀಠವು ಗ್ರಾಹಕರ ರಕ್ಷಣಾ ಕಾಯ್ದೆ ಹಾಗೂ ಕೂದಲಿನ ಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯತೆಯ ಸೇವಾ ನ್ಯೂನತೆಗಾಗಿ ಈ ಪರಿಹಾರ ಮೊತ್ತವನ್ನು ರೂಪದರ್ಶಿ ಆಶ್ನಾ ರಾಯ್ ಅವರಿಗೆ ಕಟ್ಟಿಕೊಡುವಂತೆ ಐಟಿಸಿ ಮೌರ್ಯಗೆ ಸೂಚಿಸಿದೆ. ರೂಪದರ್ಶಿಗೆ ಒದಗಿಸಿದ ಕೂದಲಿನ ಚಿಕಿತ್ಸೆಯಲ್ಲಿ ಸಿಬ್ಬಂದಿಗಳು ಮಾಡಿದ ತಪ್ಪಿನಿಂದಾಗಿ ಆಕೆಯ ಕೂದಲು ಸುಟ್ಟುಹೋಯಿತು ಹಾಗೂ ಇನ್ನೂ ಆಕೆಗೆ ಅಲರ್ಜಿ ಇದ್ದು, ಕಡಿತವೂ ಮುಂದುವರೆದಿದೆಯಂತೆ.

ಆಯೋಗ ಒದಗಿಸಿದ ಮಾಹಿತಿಯ ಪ್ರಕಾರ ವಿಶೇಷವಾಗಿ ರೂಪದರ್ಶಿಯರು ತಮ್ಮ ಕೂದಲನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತಾರೆ. ಅದಕ್ಕಾಗಿ, ಅಂದರೆ ಕೂದಲ ಉತ್ತಮ ಆರೈಕೆಗಾಗಿ ರೂಪದರ್ಶಿಗಳು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತಾರೆ. ಜೊತೆಗೆ ತಮ್ಮ ಕೂದಲಿನ ಬಗ್ಗೆ ಭಾವನಾತ್ಮಕ ಸಂಬಂಧವನ್ನೂ ಹೊಂದಿರುತ್ತಾರೆ.

ಆಶ್ನಾ ರಾಯ್ ಅವರು ಉದ್ದನೆಯ ಸೊಂಪಾದ ಕೂದಲನ್ನು ಹೊಂದಿದ್ದ ಕಾರಣದಿಂದಾಗಿಯೇ ಹಲವು ಕೂದಲಿನ ಉತ್ಪನ್ನಗಳಿಗೆ ರೂಪದರ್ಶಿಯಾಗಿದ್ದರು. ಆಕೆ ಪ್ರಸಿದ್ಧ ವಿಎಲ್‌ಸಿಸಿ ಹಾಗೂ ಪ್ಯಾಂಟೀನ್‌ ಗೆ ರೂಪದರ್ಶಿಯಾಗಿದ್ದಾರೆ. ಆದರೆ ಆಕೆಯ ಸೂಚನೆಗೆ ವಿರುದ್ಧವಾಗಿ ಮಾಡಿದಂತಹ ಹೇರ್‌ಕಟ್‌ ನಿಂದಾಗಿ ಆಕೆ ತನ್ನ ಎಲ್ಲಾ ನಿರೀಕ್ಷಿತ ಕೆಲಸಗಳನ್ನು ಕಳೆದುಕೊಂಡು ದೊಡ್ಡ ಮಟ್ಟದ ನಷ್ಟವನ್ನು ಎದುರಿಸಬೇಕಾಯಿತು. ಅದರಿಂದಾಗಿ ಆಕೆಯ ಜೀವನಶೈಲಿಯೇ ಬದಲಾಗಿ, ನಂ. 1 ರೂಪದರ್ಶಿಯಾಗುವ ಆಕೆಯ ಕನಸು ಭಗ್ನಗೊಂಡಿದೆ.

“ಜೊತೆಗೆ ಆಕೆ ಹಿರಿಯ ನಿರ್ವಹಣಾ ವೃತ್ತಿಗಾರ್ತಿಯಾಗಿ ಕೆಲಸ ನಿರ್ವಹಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದರು. ತಪ್ಪಾದ ಕ್ಷೌರ ಸೇವೆಯಿಂದಾಗಿ ಆಕೆ ಮಾನಸಿಕವಾಗಿ ಬಹಳ ನೊಂದು ಆಘಾತಕ್ಕೀಡಾದರು ಮತ್ತು ತಮ್ಮ ಕೆಲಸದ ಮೇಲಿನ ಏಕಾಗ್ರತೆಯನ್ನು ಕಳೆದುಕೊಂಡು ತಮ್ಮ ಉದ್ಯೋಗವನ್ನೇ ಕಳೆದುಕೊಂಡರು,” ಎಂದು ಪೀಠ ತಿಳಿಸಿದೆ.

ರಾಯ್ ಅವರು ತಾವು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಸಲೂನ್ ಸಿಬ್ಬಂದಿಗಳ ತಪ್ಪಿನಿಂದಾಗಿ ಆಕೆಯ ತಲೆಯಲ್ಲಿ ಬಹಳ ಕಡಿಮೆ ಕೂದಲು ಉಳಿದುಕೊಂಡಿದೆ. ಈ ಘಟನೆಯಾದ ನಂತರ ಆಕೆ ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳುವುದು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದಾರೆ.

ತಮ್ಮ ಮನವಿಯಲ್ಲಿ ಆಶ್ನಾ ರಾಯ್ ಅವರು ತಿಳಿಸಿರುವಂತೆ, ಆಕೆ ಒಂದು ಸಂದರ್ಶನಕ್ಕೆ ಹಾಜರಾಗಬೇಕಿದ್ದ ಒಂದು ವಾರದ ಮುಂಚೆ ಏಪ್ರಿಲ್ ೧೨, ೨೦೧೮ರಂದು ಸಲೂನ್‌ಗೆ ತೆರಳಿದರಂತೆ. ಆಕೆ ಸುಂದರವಾಗಿ ಕಾಣಲು, ಕೂದಲು ಚೆನ್ನಾಗಿ ಕಾಣಲೆಂಬ ಕಾರಣದಿಂದಾಗಿ ಆ ಸಲೂನ್‌ಗೆ ೨೦೦೪ರಿಂದಲೂ ಹೋಗುತ್ತಿದ್ದರಂತೆ. ಆಕೆ ಸರಳವಾದ ಹೇರ್‌ಕಟ್ ಮಾಡುವಂತೆ ತಿಳಿಸಿದರಂತೆ. ಆದರೆ ಆಕೆಯ ಕೂದಲನ್ನು ಮೇಲಿನಿಂದ ಕೇವಲ ನಾಲ್ಕು ಇಂಚುಗಳಷ್ಟು ಬಿಟ್ಟು ಉಳಿದ ಎಲ್ಲಾ ಕೂದಲನ್ನು ಸಿಬ್ಬಂದಿ ಕತ್ತರಿಸಿದರಂತೆ.

ಈ ಕುರಿತು ಆಕೆ ಸಂಬಂಧಪಟ್ಟವರಿಗೆ ದೂರು ನೀಡಿದಾಗ ಪುನಃ ಕೂದಲಿನ ಚಿಕಿತ್ಸೆಗಾಗಿ ಮೇ ೩, ೨೦೧೮ರಂದು ಬನ್ನಿ ಎಂದಿದ್ದಾರೆ. ಆದರೆ ಆಗ ಅಧಿಕ ಅಮೊನಿಯಾ ಬಳಕೆ ಮಾಡಿದ ಕಾರಣದಿಂದಾಗಿ ಆಕೆಯ ಕೂದಲು ಸಂಪೂರ್ಣವಾಗಿ ನಾಶವಾಗಿ ತಲೆಯಲ್ಲೆಲ್ಲಾ ಕಡಿತ ಆರಂಭವಾಗಿದೆ.

ತನ್ನ ಕೂದಲಿಗೆ ಬಹಳ ಕಠಿಣವಾದ ರಾಸಾಯನಿಕಗಳ ಚಿಕಿತ್ಸೆಯನ್ನು ನೀಡಲಾಗಿದ್ದು, ಅದರಿಂದಾಗಿ ಆಕೆಯ ಕೂದಲು ಬೂದು ಬಣ್ಣಕ್ಕೆ ತಿರುಗಿ, ಒಂದು ರೀತಿಯ ಕೂದಲಿನ ಸೋಂಕು ಉಂಟಾಗಿ, ಒಣಗಿ ಕಡಿತ ಉಂಟಾಗಿರುವುದರ ಜೊತೆಗೆ ಕೂದಲಿನ ನಷ್ಟವೂ ಉಂಟಾಗಿದೆ ಎಂದು ವಿವರಿಸಿದ್ದಾರೆ. ಈ ಘಟನೆಯನ್ನು ಆಕೆ ಹೋಟೆಲ್‌ ನ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಆಕೆಯೊಂದಿಗೆ ತಪ್ಪಾಗಿ ವರ್ತಿಸಿ, ಆಕೆಗೆ ಬೆದರಿಕೆಯನ್ನೂ ಹಾಕಿದ್ದರಂತೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Incorrect- haircut- ITC Maurya -Consumer -Compensation -Forum- ordered – Rs 2 crore-compensation