ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಮೈಸೂರು ವಿವಿಯಿಂದ ಟಾಸ್ಕ್ ಫೋರ್ಸ್ ರಚನೆ….

ಮೈಸೂರು, ಸೆಪ್ಟೆಂಬರ್,14,2020(www.justkannda.in) : ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮೈಸೂರು ವಿವಿಯು ಸಲಹಾ ಸಮಿತಿ ಹಾಗೂ ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದೆ.jk-logo-justkannada-logo

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಸೋಮವಾರ ವಿಜ್ಞಾನ ಭವನದಲ್ಲಿ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.

ಮಾಜಿ ಕುಲಪತಿ, ಶಿಕ್ಷಣ ತಜ್ಞರು ಸೇರಿದಂತೆ 22 ಮಂದಿ ಈ ಸಮಿತಿಯಲ್ಲಿರುತ್ತಾರೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಬಂಧ ಈ ಟಾಸ್ಕ್ ಪೋರ್ಸ್ ಅಥವಾ ಸಲಹಾ ಸಮಿತಿ ಅಗತ್ಯ ಕ್ರಮ ಕೈಗೊಳ್ಳಲಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿಯಾಗಿ ಜಾರಿಗೊಳಿಸಲು ಮೈಸೂರು ವಿವಿ ಕಾರ್ಯೋನ್ಮುಖವಾಗಿದೆ.

ಇಂಜಿನಿಯರಿಂಗ್ ನಿಕಾಯ…

ಈಗಾಗಲೇ ಮೈಸೂರು ವಿವಿ ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ. 2021-22ನೇ ಸಾಲಿಗೆ ಇಂಜಿನಿಯರಿಂಗ್ ನಿಕಾಯ ಆರಂಭಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಈ ಮೊದಲು 2000 ಇಸವಿಗೂ ಮುನ್ನ ಮೈಸೂರು ವಿವಿ ವ್ಯಾಪ್ತಿಯಲ್ಲಿ ಎಂಜಿನಿಯರಿಂಗ್ ನಿಕಾಯ ಇತ್ತು. ಆದರೆ, ಪ್ರತ್ಯೇಕವಾದ ಬಳಿಕ ಇರಲಿಲ್ಲ. ಹೀಗಾಗಿ, ವಿಜ್ಞಾನ, ಕಲಾ, ವಾಣಿಜ್ಯ ವಿಷಯಗಳ ನಿಕಾಯದಂತೆ ಎಂಜಿನಿಯರಿಂಗ್ ನಿಕಾಯವನ್ನು ಆರಂಭಿಸುವ ನಿಟ್ಟಿನಲ್ಲಿ ಮೈಸೂರು ವಿವಿ ಮುಂದಾಗಿದೆ. ನಿಕಾಯದ ಜೊತೆಗೆ ಸಂಬಂಧಪಟ್ಟ ಪಠ್ಯ ರಚನೆಗೂ ಸಿದ್ಧತೆ ನಡೆಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.

ಹಾಸನದ ಹೆಬ್ಸೂರು, ಚಾಮರಾಜನಗರ ತೆರಕಣಾಂಬಿ ಕಾಲೇಜುಗಳನ್ನು ಮೈಸೂರು ವಿವಿ ಘಟಕ ಕಾಲೇಜುಗಳಾಗಿ ಜವಾಬ್ದಾರಿ ತೆಗೆದುಕೊಳ್ಳುವಂತೆ ಸರಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆ ಎರಡು ಕಾಲೇಜುಗಳನ್ನು ಮೈಸೂರು ವಿವಿ ಘಟಕ ಕಾಲೇಜುಗಳಾಗಿ ತೆಗೆದುಕೊಂಡು ಅಭಿವೃದ್ಧಿಪಡಿಸುವುದಕ್ಕೆ ಸಭೆಯಲ್ಲಿ ಅನುಮೋದನೆ ನಿಡಲಾಯಿತು. ಈ ಕಾಲೇಜುಗಳಲ್ಲಿ ಸ್ಥಳೀಯ ವೃತ್ತಿಪರ ಕೋರ್ಸ್ ಗಳ ಆರಂಭಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಶಾಸಕ ಎಲ್ .ನಾಗೇಂದ್ರ, ಶಿಕ್ಷಣ ಮಂಡಳಿ ಸದಸ್ಯರು ಹಾಗೂ ಹಿರಿಯ ಶಿಕ್ಷಣ ತಜ್ಞರು ಭಾಗಿಯಾಗಿದ್ದರು.

Key words: Implementation – New -National Education Policy-Task Force – Mysore university