ಐಎಂಎ ಬಹುಕೋಟಿ ವಂಚನೆ ಪ್ರಕರಣ: ಎಸ್​ಐಟಿ ನೋಟಿಸ್​ಗೆ ಹೆದರಿ ಸಿಐಡಿ ಡಿವೈಎಸ್ಪಿ ನಾಪತ್ತೆ!

ಬೆಂಗಳೂರು:ಜುಲೈ-26: ದೇಶದಲ್ಲೆಡೆ ಸದ್ದು ಮಾಡಿರುವ ಐಎಂಎ ಕಂಪನಿಯ ಕೋಟ್ಯಂತರ ರೂ. ವಂಚನೆ ಪ್ರಕರಣದ ತನಿಖೆ ನಡೆಸಿದ ಸಿಐಡಿ ಡಿವೈಎಸ್ಪಿ, ಎಸ್​ಐಟಿಗೆ ಹೆದರಿ ದಾಖಲೆ ನಾಶ ಮಾಡಿ ತಪು್ಪ ಮುಚ್ಚಿಕೊಳ್ಳಲು ಯತ್ನಿಸಿದ್ದಲ್ಲದೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡುತ್ತಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದ ಐಎಂಎ ಕಂಪನಿ ಮೇಲೆ ಅನುಮಾನಗೊಂಡು 2016ರಲ್ಲಿ ಆರ್​ಬಿಐ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೋಸ್ನಾ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದರು. ಸರ್ಕಾರ ಕೆಪಿಐಡಿ ಕಾಯ್ದೆ ಪ್ರಕಾರ ತನಿಖೆ ನಡೆಸುವಂತೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಗೆ ವಹಿಸಿದ್ದರು. ತನಿಖೆ ನಡೆಸಿ ವರದಿ ನೀಡುವಂತೆ ಸಿಐಡಿಗೆ ಉಪ ವಿಭಾಗಾಧಿಕಾರಿ ಪತ್ರ ಬರೆದಿದ್ದರು.

ಈ ಮೇರೆಗೆ ತನಿಖೆ ಕೈಗೊಂಡ ಸಿಐಡಿಯ ಡಿವೈಎಸ್ಪಿ, ಪೂರ್ಣ ತನಿಖೆ ನಡೆಸಿ ಮೇಲಧಿಕಾರಿಗೆ ವರದಿ ಸಲ್ಲಿಸಿದ್ದರು. ಬಳಿಕ ಕವರಿಂಗ್ ಲೆಟರ್ ಮಾಡಿ ಸಹಿ ಮಾಡಿ ಮೇಲಧಿಕಾರಿಯಾದ ಉಪವಿಭಾಗಾಧಿಕಾರಿಗೆ ಸಲ್ಲಿಸಿದ್ದರು. ಇದಾದ ಕೆಲವೇ ದಿನಕ್ಕೆ ಐಎಂಎ ಕಂಪನಿ ಮುಖ್ಯಸ್ಥ ಮಹಮ್ಮದ್ ಮನ್ಸೂರ್

ಖಾನ್ ತಲೆಮರೆಸಿಕೊಂಡಾಗ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಸ್​ಐಟಿ ರಚನೆ ಮಾಡಿ ಆದೇಶಿಸಿತ್ತು.

ತನಿಖೆ ಕೈಗೊಂಡ ಎಸ್​ಐಟಿ ಅಧಿಕಾರಿಗಳು ವರದಿಯಲ್ಲಿ ಲೋಪ ಮತ್ತು ಲಂಚ ಪಡೆದು ಕಂಪನಿ ಪರವಾಗಿ ವರದಿ ನೀಡಿ ಪ್ರಕರಣ ಮುಚ್ಚಿ ಹಾಕಿದ ಆರೋಪದ ಮೇಲೆ ಬೆಂಗಳೂರು ನಗರ ಉತ್ತರ ಉಪ ವಿಭಾಗಾಧಿಕಾರಿ ಎಸ್.ಸಿ. ನಾಗರಾಜು ಮತ್ತು ಜಿಲ್ಲಾಧಿಕಾರಿ ವಿಜಯಶಂಕರ್​ರನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ಇದಾದ ಮೇಲೆ ಸಿಐಡಿಯಲ್ಲಿ ತನಿಖೆ ನಡೆಸಿದ್ದ ಡಿವೈಎಸ್ಪಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಬೆದರಿದ ಡಿವೈಎಸ್​ಪಿ ಇದೀಗ ವಿಚಾರಣೆಗೆ ಹಾಜರಾಗದೆ ಕಚೇರಿ ಮತ್ತು ಮನೆಗೂ ಹೋಗದೆ ಎಸ್​ಐಟಿಗೆ ಸಬೂಬು ಹೇಳಿಕೊಂಡು ತಲೆಮರೆಸಿಕೊಂಡಿದ್ದಾರೆ.

2ನೇ ಶನಿವಾರ ಮತ್ತು ಭಾನುವಾರ ಸಿಐಡಿ ಕಚೇರಿಗೆ ರಜೆ ಇರುವುದನ್ನು ಮನಗೊಂಡ ಡಿವೈಎಸ್ಪಿ, ತನ್ನ ಸಹಾಯಕನೊಂದಿಗೆ ಕಚೇರಿಗೆ ತೆರಳಿ ಐಎಂಎ ಕಂಪನಿಗೆ ಸಂಬಂಧ ಸರ್ಕಾರಕ್ಕೆ ತಾನು ಸಲ್ಲಿಸಿದ್ದ ವರದಿಯಲ್ಲಿ ಕೆಲ ದಾಖಲೆಗಳನ್ನು ನಾಶ ಮಾಡಿ ಅದಕ್ಕೆ ಹೊಸದಾಗಿ ದಾಖಲೆ ಸೇರಿಸಿದ್ದಾರೆ. ಇಂಡೆಕ್ಸ್ ಪಟ್ಟಿಯಲ್ಲೂ ಬದಲಾವಣೆ ಮಾಡಿರುವುದು ಕಂಡುಬಂದಿದೆ. ಸಿಕ್ಕಿಬೀಳುವ ಭಯಕ್ಕೆ ವರದಿಯನ್ನೇ ಬದಲಾಯಿಸುವ ದುಸ್ಸಾಹಸಕ್ಕೆ ಯತ್ನಿಸಿರುವುದು ಕಂಡುಬಂದಿದೆ, ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಡಿವೈಎಸ್ಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಎಸ್​ಐಟಿ ಮೂಲಗಳು ತಿಳಿಸಿವೆ.

ಲೋಪ ತಪ್ಪಲ್ಲ, ಲಂಚ ಪಡೆದರೆ ಅಪರಾಧ

ತನಿಖೆ ವೇಳೆ ಲೋಪ ಆಧಾರಿತ ವರದಿ ನೀಡುವುದು ತಪ್ಪಲ್ಲ. ಕ್ರಿಮಿನಲ್ ಅಥವಾ ಆರ್ಥಿಕ ಅಪರಾಧಗಳ ತನಿಖೆ ವೇಳೆ ತನಿಖಾಧಿಕಾರಿಗಳು ಗೊತ್ತಿಲ್ಲದೆ ಇನ್ನಿತರ ಕಾರಣಕ್ಕೆ ಲೋಪ ಎಸಗುವುದು ಸಾಮಾನ್ಯ. ಅಂತಹ ವರದಿ ತಿರಸ್ಕರಿಸಿ ಮತ್ತೊಮ್ಮೆ ತನಿಖೆಗೆ ಆದೇಶ ನೀಡಿರುವ ಬಹಳಷ್ಟು ಉದಾಹರಣೆಗಳಿವೆ. ಲಂಚ ಪಡೆದು ಸುಳ್ಳು ವರದಿ ನೀಡಿ ಇಡೀ ಪ್ರಕರಣ ಮುಚ್ಚಿ ಹಾಕುವುದು ಅಪರಾಧ. ಐಎಂಎ ಕೇಸಿನಲ್ಲಿ ತನಿಖಾಧಿಕಾರಿಗಳನ್ನು ಬಂಧಿಸುವ ಮುನ್ನ ಮೂರ್ನಾಲ್ಕು ಬಾರಿ ನೋಟಿಸ್ ಕೊಟ್ಟು ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಲಂಚ ಪಡೆದಿರುವುದಕ್ಕೆ ಪೂರಕ್ಕೆ ದಾಖಲೆ ಸಂಗ್ರಹಿಸಿ ಬಳಿಕ ಬಂಧಿಸಲಾಗಿದೆ ಎಂದು ಎಸ್​ಐಟಿ ಮೂಲಗಳು ತಿಳಿಸಿವೆ.

ಮನೆಗೂ ಹೋಗಿಲ್ಲ.. ಕಚೇರಿಗೂ ಬಂದಿಲ್ಲ..

ಎಸ್​ಐಟಿ ನೋಟಿಸ್ ನೀಡಿದ ಬೆನ್ನಲ್ಲೇ ಡಿವೈಎಸ್ಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಯಾರನ್ನೂ ಸಂಪರ್ಕ ಮಾಡಿಲ್ಲ. ಒಂದು ಬಾರಿ ಮಾತ್ರ ಪೊಲೀಸ್ ಅಧಿಕಾರಿಯನ್ನು ಸಂಪರ್ಕ ಮಾಡಿರುವುದು ಗೊತ್ತಾಗಿದೆ. ಇನ್ನು ಮನೆಗೂ ಹೋಗಿಲ್ಲ. ಕಚೇರಿಗೂ ಬಾರದೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಐಡಿ ಆವರಣದಲ್ಲೇ ಇದೆ ಎಸ್​ಐಟಿ ಕಚೇರಿ

ಅರಮನೆ ರಸ್ತೆಯ ಕಾರ್ಲ್ ಟನ್ ಹೌಸ್​ನಲ್ಲಿರುವ ಸಿಐಡಿ ಕಚೇರಿ ಆವರಣದಲ್ಲೇ ಎಸ್​ಐಟಿ ಕಚೇರಿಯೂ ಇದೆ. ಯಾವುದೇ ಭಯ ಇಲ್ಲದೆ ಎಲ್ಲರ ಕಣ್ಣು ತಪ್ಪಿಸಿ 2ನೇ ಶನಿವಾರ ಮತ್ತು ಭಾನುವಾರ ಸಿಐಡಿ ಕಚೇರಿಗಳಿಗೆ ರಜೆ ಇರುವುದನ್ನು ಅರಿತ ಡಿವೈಎಸ್ಪಿ ದಾಖಲೆ ನಾಶ ಮಾಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೃಪೆ:ವಿಜಯವಾಣಿ

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಎಸ್​ಐಟಿ ನೋಟಿಸ್​ಗೆ ಹೆದರಿ ಸಿಐಡಿ ಡಿವೈಎಸ್ಪಿ ನಾಪತ್ತೆ!
ima-multi-crore-fraud-case-cid-dysp-is-missing-for-fear-of-it-notice