ಎತ್ತಿನಹೊಳೆ ಕಾಮಗಾರಿಯಲ್ಲಿ ಅಕ್ರಮ?

ಬೆಂಗಳೂರು:ಆ-30: ಕುಡಿಯುವ ನೀರು ಪೂರೈಕೆ ಉದ್ದೇಶದ ಎತ್ತಿನಹೊಳೆ ಯೋಜನೆ ಕಾಮಗಾರಿ ವೆಚ್ಚವನ್ನು ದಿಢೀರ್‌ ಏರಿಸಿ ಎಂಟು ತಿಂಗಳ ಬಳಿಕ ನಿಯಮ ಮೀರಿ ಮರು ಟೆಂಡರ್‌ ಪ್ರಕ್ರಿಯೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಾಸನದ ಅರಸೀಕೆರೆ ವಿಭಾಗದ ಅಕ್ವಾಡಕ್ಟ್ (ಕಾಲುವೆ), ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ವೆಚ್ಚವನ್ನು ಹೆಚ್ಚಿಸಿ ಮರು ಟೆಂಡರ್‌ ಕರೆಯಲಾಗಿದೆ. ಅಲ್ಲದೆ, ಹಿಂದಿನ ಗುತ್ತಿಗೆ ಸಂಸ್ಥೆಗೆ ಟೆಂಡರ್‌ ಹಂಚಿಕೆ ಮಾಡಲಾಗಿದೆ ಎನ್ನಲಾಗಿದ್ದು, ಇದು ಅನು ಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಟೆಂಡರ್‌ ಹಂಚಿಕೆ  ಯಾಗಿ 8 ತಿಂಗಳ ಬಳಿಕ ಹಾಗೂ ಕೆಲವು ಭಾಗಗಳ ಕಾಮಗಾರಿ ಮುಗಿದ ಬಳಿಕ ಉಳಿದ ಕಾಮಗಾರಿಗೆ ಹೊಸ ಟೆಂಡರ್‌ ಆಹ್ವಾನಿಸಿ ಹಂಚಿಕೆ ಮಾಡಿರು ವುದು ನಿಯಮಬಾಹಿರ. ಹೊಸ ಸರಕಾರ ಈ ಬಗ್ಗೆ ಗಮನ ಹರಿಸುವುದೇ ಎಂಬ ಪ್ರಶ್ನೆ ಮೂಡಿದೆ.

ಎಂಟು ತಿಂಗಳ ಬಳಿಕ “ಕಾಮಗಾರಿಗೆ ಹೆಚ್ಚುವರಿ ಆರ್ಥಿಕ ಅಗತ್ಯ’ದ (ಎಕ್ಸ್‌ಟ್ರಾ ಫೈನಾನ್ಶಿಯಲ್‌ ಇಂಪ್ಲಿಕೇಶನ್‌) ರೂಪದಲ್ಲಿ ಶೇ.50ರಷ್ಟು (ಸುಮಾರು 170 ಕೋಟಿ ರೂ.) ಹೆಚ್ಚುವರಿ ಹಣ ಅಗತ್ಯವಿದೆ ಎಂದು ಪ್ರಸ್ತಾವಿಸಲಾಯಿತು. ಯಾವುದೇ ಕಾಮಗಾರಿಗೆ ಟೆಂಡರ್‌ ಆಹ್ವಾನಿಸುವ ಮೊದಲು ಸ್ಥಳ ಪರಿಶೀಲನೆ, ವಿವಿಧ ರೀತಿಯ ಪೂರ್ವ ಪರೀಕ್ಷೆ, ಪರಿಶೀಲನೆ ನಡೆಸಿದ ಅನಂತರವಷ್ಟೇ ನಿಖರ ವಾಗಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತದೆ. ಒಂದೊಮ್ಮೆ “ಹೆಚ್ಚುವರಿ ಆರ್ಥಿಕ ಅಗತ್ಯ’ದ ಪ್ರಸ್ತಾವ ವಾದರೆ ಅಂದಾಜು ಪಟ್ಟಿ ತಯಾರಿಕೆಯಲ್ಲೇ ಲೋಪ  ಎಂದರ್ಥ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅಧಿಕಾರಿ ಗಳು ಹೇಳುತ್ತಾರೆ.

2018ರ ಡಿ.7ರಂದು ಹೊಸ ಟೆಂಡರ್‌ ಪ್ರಕ್ರಿಯೆ ನಡೆಸಲು ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯ ಟಿಸಿಎಸ್‌ ಸಮಿತಿ ನಿರ್ಧರಿಸಿತ್ತು. ಪ್ಯಾಕೇಜ್‌ 1ರಡಿ 126 ಕೋಟಿ ರೂ. ಮೊತ್ತದ ಕಾಮಗಾರಿ ಹಾಗೂ ಪ್ಯಾಕೇಜ್‌ 1ಎ ಅಡಿ 394 ಕೋಟಿ ರೂ.ಗೆ ಮೊತ್ತ ನಿಗದಿಪಡಿಸಿ ಪ್ಯಾಕೇಜ್‌ 1ಎಗೆ ಟೆಂಡರ್‌ ಆಹ್ವಾನಿಸಲಾಯಿತು.

ಯಾವ ಕಾಮಗಾರಿ?
ಎತ್ತಿನಹೊಳೆ ಯೋಜನೆಯಡಿ ಸಕಲೇಶಪುರ ಭಾಗದಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಪ್ರಸ್ತಾವವಿತ್ತು. ವಿಶ್ವೇಶ್ವರಯ್ಯ ಜಲ ನಿಗಮದಿಂದ (ಎತ್ತಿನ ಹೊಳೆ-ಅರಸೀಕೆರೆ ವಿಭಾಗ) ಪ್ಯಾಕೇಜ್‌-1ರಡಿ 1.156 ಕಿ.ಮೀ.ನಿಂದ ಏಳು ಕಿ.ಮೀ.ವರೆಗೆ ನಾಲಾ ನಿರ್ಮಾಣ ಮಾರ್ಗದಲ್ಲಿ 1.240 ಕಿ.ಮೀ. ಉದ್ದದ ಅಕ್ವಾಡಕ್ಟ್ ಹಾಗೂ 1.156 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಲಾಗಿತ್ತು. ಟೆಂಡರ್‌ ಮೊತ್ತ 277 ಕೋಟಿ ರೂ.ಇದ್ದರೂ ಅಂತಿಮವಾಗಿ 335 ಕೋಟಿ ರೂ.ಗೆ 2017ರ ಡಿ.20ರಂದು ಟೆಂಡರ್‌ ಒಪ್ಪಂದವಾಗಿತ್ತು. ಇದರಲ್ಲಿ ಹಿಂದಿನ ವ್ಯಾಟ್‌ ಮೊತ್ತವೂ ಸೇರಿತ್ತು. ಕಾಮಗಾರಿಯು 18 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು.
ಕೃಪೆ:ಉದಯವಾಣಿ

ಎತ್ತಿನಹೊಳೆ ಕಾಮಗಾರಿಯಲ್ಲಿ ಅಕ್ರಮ?
illegal-work-in-ettinahole