ನಂದಿ ಬೆಟ್ಟದಲ್ಲಿ ಇತ್ತೀಚೆಗೆ ಘಟಿಸಿದ ಭೂಕುಸಿತಕ್ಕೆ ಕಾನೂನುಬಾಹಿರ ಗಣಿಗಾರಿಕೆಗಳೇ ಕಾರಣ: ಪರಿಸರವಾದಿಗಳ ಆರೋಪ.

ಬೆಂಗಳೂರು, ಆಗಸ್ಟ್ 30, 2021 (www.justkannada.in): ಬೆಂಗಳೂರು ಬಳಿಯ ಚಿಕ್ಕಬಳ್ಳಾಪುರದಲ್ಲಿರುವ ಪ್ರಖ್ಯಾತ ಗಿರಿಧಾಮ ನಂದಿ ಬೆಟ್ಟದಲ್ಲಿ ಆಗಸ್ಟ್ 24ರಂದು ಗುಡ್ಡಕುಸಿತವುಂಟಾಯಿತು. ಇದಕ್ಕೆ ಅತಿಯಾದ ಮಳೆಯೇ ಕಾರಣ ಎನ್ನುವುದು ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸಮಜಾಯಿಷಿಯಾಗಿತ್ತು. ಆದರೆ ಸುತ್ತಲಿನ ಪ್ರದೇಶದಲ್ಲಾಗುತ್ತಿರುವ ಕಾನೂನುಬಾಹಿರ ಕಲ್ಲುಗಣಿಗಾರಿಕೆಯಿಂದಾಗಿ ಈ ಗುಡ್ಡ ಕುಸಿತವುಂಟಾಗಿರಬಹುದು ಎನ್ನುವುದು ಪರಿಸರವಾದಿಗಳ ವಾದವಾಗದೆ.

ಅತಿಯಾದ ಮಳೆಯಿಂದಾಗಿಯೂ ಗುಡ್ಡ, ಭೂಕುಸಿತಗಳು ಸಂಭವಿಸುತ್ತವೆ. ಜೊತೆಗೆ, ಗಣಿಗಾರಿಕೆ ಚಟುವಟಿಕೆಗಳೂ ಸಹ ಈ ರೀತಿಯ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತವೆ ಎನ್ನುವುದು ಪರಿಸರವಾದಿಗಳ ಅಭಿಪ್ರಾಯವಾಗಿದೆ. ಬ್ರಹ್ಮಗಿರಿ ಬೆಟ್ಟದ ಸಾಲಿನಲ್ಲಿ ಉಂಟಾದ ಗುಡ್ಡಕುಸಿತದಿಂದಾಗಿ ನಂದಿ ಬೆಟ್ಟಕ್ಕೆ ತೆರಳುವ ರಸ್ತೆಯ ಒಂದು ಭಾಗ ಕೊಚ್ಚಿ ಹೋಗಿದೆ.

ಭಾರತೀಯ ಅರಣ್ಯ ಸೇವೆಯ ಮಾಜಿ ಅಧಿಕಾರಿ ಎ.ಎನ್. ಯಲ್ಲಪ್ಪ ರೆಡ್ಡಿ ಅವರು ಹೇಳುವಂತೆ ಇತ್ತೀಚಿನ ಈ ಗುಡ್ಡಕುಸಿತಕ್ಕೆ ಈ ಪ್ರದೇಶದ ಸುತ್ತಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ನಿರಂತರ ಸ್ಫೋಟಗಳು ಕಾರಣವಂತೆ. ಈ ಕುರಿತು ಮಾತನಾಡಿರುವ ಅವರು, “ನಂದಿ ಬೆಟ್ಟದ ಸುತ್ತುಮುತ್ತಲಿನಲ್ಲಿ ಸುಮಾರು 100 ಸ್ಥಳಗಳಲ್ಲಿ ಕಲ್ಲುಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ. ಅತ್ಯಂತ ವೇಗವಾಗಿ ಹಬ್ಬುತ್ತಿರುವ ನಗರೀಕರಣದಿಂದಾಗಿ ಬೆಂಗಳೂರಿನ ಸುತ್ತಲಿನಲ್ಲಿದ್ದಂತಹ ಅನೇಕ ಬೆಟ್ಟಗಳು ನೆಲಸಮಗೊಂಡಿವೆ. ನಂದಿ ಬೆಟ್ಟ ದೇಶದ ಅತ್ಯಂತ ಪುರಾತನ ಬೆಟ್ಟಗಳಲ್ಲಿ ಒಂದಾಗಿದೆ. ಹಾಗಾಗಿ ಈ ಪ್ರದೇಶವನ್ನು ನಿಯಂತ್ರಿಸಬೇಕು. ಆದರೆ ದುರಾದೃಷ್ಟವಶಾತ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ,” ಎಂದರು.

ನಂದಿ ಬೆಟ್ಟದಲ್ಲಿ ನಡೆದಿರುವಂತಹ ಈ ಗುಡ್ಡಕುಸಿತಕ್ಕೆ ಅತಿ ಮಳೆಯೇ ಕಾರಣ ಎನ್ನುವುದು ಸರ್ಕಾರಿ ಅಧಿಕಾರಿಗಳ ನಿಲುವಾಗಿದೆ. ಮೇಲಾಗಿ ನಂದಿ ಬೆಟ್ಟ ಹಾಗೂ ಸುತ್ತಲಿನ ಪ್ರದೇಶದಲ್ಲಿರುವ ಇನ್ನೂ ಕೆಲವು ಬೆಟ್ಟಗಳು, ಅರ್ಕಾವತಿ, ಪೆನ್ನ, ಪಾಪಗ್ನಿ, ಪನ್ನೆಯರ್ ಹಾಗೂ ಪಾಲರ್ ನದಿಗಳು ಸೇರಿದಂತೆ ಒಟ್ಟು ಐದು ಪ್ರಮುಖ ನದಿಗಳ ಉಗಮಸ್ಥಾನವಾಗಿದೆ.

ಪರಿಸರತಜ್ಞ ಚಿದಾನಂದ ಮೂರ್ತಿ ಅವರ ಪ್ರಕಾರ ಇಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಹಳ ಕಾಲದಿಂದಲೂ ಕಲ್ಲುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. “ನಂದಿ ಹಾಗೂ ಹತ್ತಿರದಲ್ಲಿರುವ ಇನ್ನಿತರೆ ಬೆಟ್ಟಗಳು, ಭೂಮಿಯ ಹೊರಪದರದ ಅತ್ಯಂತ ಪ್ರಾಚೀನವಾದಂತಹ ‘ಧಾರವಾರ ಕ್ರೇಟನ್ ‘ನ ಭಾಗವಾಗಿದೆ. ಪರಿಸರ-ಪ್ರವಾಸೋದ್ಯಮದ ಸೋಗಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳೂ ಸಹ ನಂದಿ ಬೆಟ್ಟದ ಪರಿಸರವನ್ನು ನಾಶಪಡಿಸುತ್ತಿದೆ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಅನೇಕ ಮರಗಳನ್ನು ಕಡಿದು ಹಾಕಲಾಗಿದ್ದು, ಇದರಿಂದಾಗಿ ಮಣ್ಣಿನ ಸವಕಳಿ ಉಂಟಾಗಿದೆ,” ಎಂದು ವಿವರಿಸಿದರು.

2020ರಲ್ಲಿ ರಾಜ್ಯ ಸರ್ಕಾರ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿತು. ಇದರಿಂದಾಗಿ ಕಲ್ಲು ಗಣಿಗಾರಿಕೆಗಳ ಪರವಾನಗಿಗಳು ಖಾಸಗಿ ಕಂಪನಿಗಳಿಗೆ ಮಾರಾಟ ಅಥವಾ ವರ್ಗಾವಣೆಗೆ ಅನುಮತಿ ಲಭಿಸಿ ಪರವಾನಿಗಳ ಅವಧಿ ಐದರಿಂದ ೨೦ ವರ್ಷಗಳವರೆಗೆ ವಿಸ್ತರಣೆಗೊಂಡವು.

ಚಿಕ್ಕಬಳ್ಳಾಪುರದ ಪರಿಸರ ಕಾರ್ಯಕರ್ತ ಆಂಜನೇಯ ರೆಡ್ಡಿ ಅವರ ಪ್ರಕಾರ ಸುತ್ತಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟಗಳು ಈ ಪ್ರದೇಶದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ. “ಮೇಲಾಗಿ ವೈಜ್ಞಾನಿಕ ಅಧ್ಯಯನ ನಡೆಸದೆ ಪ್ರವಾಸೋದ್ಯಮ ಯೋಜನೆಗಳಿಗೆ ವೇಗ ನೀಡುವುದು ಜಿಲ್ಲೆಯನ್ನು ನಾಶಪಡಿಸುತ್ತದೆ. ಈ ಗುಡ್ಡಕುಸಿತ ಒಂದು ಎಚ್ಚರಿಕೆಯನ್ನು ನೀಡಿದೆ. ಸರ್ಕಾರ ಕೂಡಲೇ ಇದರಿಂದ ಎಚ್ಚೆತ್ತುಕೊಂಡ ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕು. ಕಾನೂನುಬಾಹಿರ ಗಣಿಗಾರಿಕೆಯಿಂದ ಉದ್ಭವಿಸುವ ಧೂಳು ಇಲ್ಲಿನ ನಿವಾಸಿಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ,” ಎನ್ನುತ್ತಾರೆ.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Illegal mining – responsible – recent – Nandi Hills-Allegations -environmentalists