ಸಮಾಜದಲ್ಲಿ ಮಹಿಳೆಗೆ ‘ಐಡೆಂಟಿಟಿ’ ಮುಖ್ಯ- ಡಾ.ಎಸ್.ಶೈಲಜಾ

ಬೆಂಗಳೂರು,ಮಾರ್ಚ್,8,2023(www.justkannada.in):  ‘ಮಹಿಳೆ ಸಮಾಜದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದರೂ ಕೂಡ ಅದರ ‘ಗುರುತಿಸುವಿಕೆ’ಗಾಗಿ ಆಕೆ ಇನ್ನೂ ಕಾಯಬೇಕಾಗಿದೆ. ಈ ‘ಕಾಯುವಿಕೆ’ ನಿಂತಾಗಲೇ ಮಹಿಳಾ ದಿನಾಚರಣೆಗೊಂದು ಅರ್ಥ ಬರಲಿದೆ’ ಎಂದು ಬೆಂಗಳೂರು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಎಸ್.ಶೈಲಜಾ ಅಭಿಪ್ರಾಯಪಟ್ಟರು.

ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಸಾಂಸಾರಿಕ ಜವಾಬ್ದಾರಿಗಳ ಜೊತೆಗೆ ಪ್ರತಿ ಹೆಣ್ಣು ತನ್ನದೇ ಆದ ‘ಐಡೆಂಟಿಟಿ’ ಹೊಂದುವುದು ಅಗತ್ಯ’ ಎಂದರು.

ಇದೇ ವೇಳೆ, ಸಾಗರ ಚಂದ್ರಮ್ಮ ಆಸ್ಪತ್ರೆಯ ಖ್ಯಾತ ಪ್ರಸೂತಿ ತಜ್ಞರಾದ ಡಾ. ವಿದ್ಯಾಮಣಿ ಹೆಣ್ಣುಮಕ್ಕಳ ಆರೋಗ್ಯದ ಕುರಿತು ಅರಿವು ಮೂಡಿಸಿದರು. ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ. ಎಚ್. ಎನ್. ಸುಬ್ರಹ್ಮಣ್ಯ ಮಾತನಾಡಿ ‘ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಮಹಿಳೆಯ ಕೊಡುಗೆ ಅಪಾರ ಮತ್ತು ಅವಿಸ್ಮರಣೀಯ’ ಎಂದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ವೈ.ಜಿ.ಮಧುಸೂಧನ್, ಕಾರ್ಯದರ್ಶಿಗಳಾದ ವಿ.ವೆಂಕಟಶಿವಾ ರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಪ್ರಾಂಶುಪಾಲರಾದ ಪ್ರೊ.ಪಿ.ಎಲ್.ರಮೇಶ್, ಜಯನಗರ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ಸಿ. ಕಮಲ ಹಾಗೂ ಎಲ್ಲಾ ಅಧ್ಯಾಪಕ ವರ್ಗ ಭಾಗವಹಿಸಿದ್ದರು.

key words: Identity- important – woman – society