ನಾನು ಯಾವತ್ತೂ ಹಿಂದೂ ಧರ್ಮದ ವಿರೋಧಿಯಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ.

ಕಲ್ಬುರ್ಗಿ,ಫೆಬ್ರವರಿ,6,2023(www.justkannada.in):  ನಾನು ಹಿಂದುತ್ವ ವಿರೋಧಿ. ಆದರೆ ನಾನು ಯಾವತ್ತೂ ಹಿಂದೂ ಧರ್ಮದ ವಿರೋಧಿಯಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನೂ ಕೂಡ ಹಿಂದೂನೇ.  ಆದರೆ ನಾನು ಮನುವಾದ. ಹಿಂದುತ್ವವಾದಿ ವಿರೋಧಿ.  ಮನುವಾದ,  ಹಿಂದುತ್ವ ಕೊಲೆ ಹಿಂಸೆಗೆ ಉತ್ಸಾಹ ನೀಡುತ್ತದೆ. ಯಾವುದಾದರೂ ಧರ್ಮದಲ್ಲಿ ಹಿಂಸೆ ಇದೆಯಾ..? ಎಂದು ಪ್ರಶ್ನಿಸಿದರು.

ಪ್ರಹ್ಲಾದ್ ಜೋಶಿ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಹೆಚ್ಡಿಕೆ ಹೇಳಿದ್ದೆಲ್ಲವನ್ನ ಒಪ್ಪಲ್ಲ. ಸಿಎಂ ಯಾರಾಗುತ್ತಾರೆ ಅಂತಾ ಆರ್ ಎಸ್ಎಸ್ ನಿರ್ಧಾರ ಮಾಡುತ್ತೆ ಎಂದರು.

ಇನ್ನು ನರೇಂದ್ರ ಮೋದಿ ಅವರು ನಾವು ಮಾಡಿದ ಕೆಲಸಗಳನ್ನೇ ಉದ್ಘಾಟನೆ ಮಾಡಲು ರಾಜ್ಯಕ್ಕೆ ಬಂದಿದ್ದಾರೆ. ಹೆಚ್.ಎ.ಎಲ್ ಅನ್ನು ಯು.ಪಿ.ಎ ಅವಧಿಯಲ್ಲಿ ಮಾಡಿದ್ದು ಅದನ್ನು ಉದ್ಘಾಟಿಸುತ್ತಿದ್ದಾರೆ. ಲಂಬಾಣಿ ಜನರಿಗೆ ಮೋದಿಯವರು ಹಕ್ಕುಪತ್ರ ನೀಡಿದ್ರು, ಆ ಕಾನೂನನ್ನು ಮಾಡಿದ್ದು ನಮ್ಮ ಸರ್ಕಾರ. ನಾನು ಮುಖ್ಯಮಂತ್ರಿ ಆಗಿದ್ದಾಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ವಾಸಿಸುವನೆ ಮನೆಯೊಡೆಯ ಎಂಬ ಕಾಯ್ದೆ ತಂದವರು ನಾವು. ನಾನು ಒಂದು ಸಮಿತಿ ಮಾಡಿ, ಅಧಿಕಾರಿಯನ್ನು ನೇಮಿಸಿ, ಅವರಿಂದ ವರದಿ ಪಡೆದು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ನಾವು ಅಡುಗೆ ಮಾಡಿದ್ವಿ, ಮೋದಿ ಅವರು ಬಂದು ಬಡಿಸುತ್ತಿದ್ದಾರೆ.

ಬಿಜೆಪಿಯವರಿಗೆ ನರೇಂದ್ರ ಮೋದಿ ಅವರೇ ಬಂಡವಾಳ. ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಹಗರಣದಲ್ಲಿ ಮುಳುಗಿದೆ, ಏನೂ ಕೆಲಸ ಮಾಡಿಲ್ಲ. ವಚನ ಭ್ರಷ್ಟತೆಯಿಂದ ಜನರ ನಂಬಿಕೆ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಹೋದರೆ ತಮಗೆ ಲಾಭವಾಗುತ್ತೆ ಎಂದು ಬಿಜೆಪಿಯವರು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಈಗಾಗಲೇ ರಾಜ್ಯದ ಜನ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಬಹುಮತ ಬಂದರೆ ತಾನೆ ಆ ನಂತರ ಆರ್.ಎಸ್.ಎಸ್ ನವರು ತೀರ್ಮಾನ ಮಾಡೋದು. ಯಾವಾಗ ಅವರಿಗೆ ಬಹುಮತ ಬಂದಿತ್ತು ಹೇಳಿ? 2008 ರಲ್ಲಿ 110 ಸ್ಥಾನ, 2018 ರಲ್ಲಿ 104 ಸ್ಥಾನ, 2013ರಲ್ಲಿ 40 ಸ್ಥಾನ ಬಂದಿತ್ತು, ಈಗ 2023 ರಲ್ಲಿ 50 ರಿಂದ 60 ಸ್ಥಾನ ಬರಬಹುದು ಎಂದು ಭವಿಷ್ಯ ನುಡಿದರು.

ಬಿಜೆಪಿ ಸರ್ಕಾರದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಅವರು ಸತ್ಯ ಹೇಳಿದ್ದಾರೆ. ಬಿಜೆಪಿಯವರು ಕಳ್ಳರು. ವಜ್ಜಲ್ ಅವರು ನಾರಾಯಣಪುರ ಎಡದಂಡೆ ಕಾಲುವೆಯ ಕೆಲಸವನ್ನೇ ಮಾಡದೆ ದುಡ್ಡು ತಗೊಂಡಿದ್ದಾರೆ. 40% ಕಮಿಷನ್ ಹೊಡೆದಿದ್ದಕ್ಕೆ ಕೆಲಸ ಮಾಡದಿದ್ರು ಬಿಲ್ ಕೊಡುತ್ತಾರೆ.

ನಾನು ಆರ್.ಅಶೋಕ್ ಗಿಂತ ಮೊದಲು ರಾಜಕೀಯಕ್ಕೆ ಬಂದಿದ್ದು, 1978 ರಿಂದ ರಾಜಕಾರಣದಲ್ಲಿದ್ದೀನಿ, ಈಗ 45 ವರ್ಷ ಆಯ್ತು. ನನಗಿದು ಕೊನೆ ಚುನಾವಣೆ ಎಂದು ಹೇಳಲು ಅಶೋಕ್ ಗೆ ಯಾವ ನೈತಿಕತೆ ಇದೆ? ನಾನು ಅಶೋಕ್ ಇಂದು ಪಾಠ ಹೇಳಿಸಿಕೊಳ್ಳಬೇಕ? ಬಿಜೆಪಿ ಮತ್ತು ಆರ್.ಎಸ್.ಎಸ್ ನವರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿ ಮನೆಗೆ ಕಳಿಸಿದ್ರು. ಬಸವರಾಜ ಬೊಮ್ಮಾಯಿಗೂ ಮತ್ತು ಯಡಿಯೂರಪ್ಪ ಅವರಿಗೂ ಈಗ ಆಗಲ್ಲ. ಯಡಿಯೂರಪ್ಪ ಅವರ ಮಗನ್ನ ಮಂತ್ರಿ ಮಾಡಬೇಕಾಗುತ್ತೆ ಅಂತಲೇ ಮಂತ್ರಿಮಂಡಲ ವಿಸ್ತರಣೆ ಮಾಡುತ್ತಿಲ್ಲ. ಲಂಚ ಜಾಸ್ತಿ ಸಿಗುತ್ತೆ ಅಂತಲೇ ಒಂದೂವರೆ ವರ್ಷದಿಂದ ಸಂಪುಟ ವಿಸ್ತರಣೆ ಮಾಡದೆ ಸುಮಾರು ಇಲಾಖೆಗಳನ್ನು ಮುಖ್ಯಮಂತ್ರಿಯೇ ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಈ ತಿಂಗಳ ಕೊನೆಯ ಹೊತ್ತಿಗೆ 120 ರಿಂದ 150 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಆಗುತ್ತದೆ. ಬಿಜೆಪಿ ಇಂದ ಕಾಂಗ್ರೆಸ್ ಗೆ ಸೇರುವವರು ಸಾಕಷ್ಟು ಜನ ಇದ್ದಾರೆ. ಮುಂದೆ ನೋಡೋಣ ಎಂದರು.

Key words: I am- never –against- Hinduism-Former CM -Siddaramaiah.