ರಾಜ್ಯದಲ್ಲಿ ಅಭಿವೃದ್ದಿ ಹಾಗೂ ಸಮೃದ್ದಿ ಕರ್ನಾಟಕ ನಿರ್ಮಿಸಲು ಬಿಜೆಪಿಯೊಂದಿಗೆ ಕೈ ಜೋಡಿಸಿ-ಹುಣಸೂರಿನಲ್ಲಿ ಬಿಜೆಪಿ ರಾಜ್ಯ ಸಹ-ವಕ್ತಾರರಾದ ಆರ್. ರಘು  ಮನವಿ

kannada t-shirts

ಮೈಸೂರು,ನ,20,2019(www.justkannada.in): ರಾಜ್ಯದಲ್ಲಿ ಅಭಿವೃದ್ದಿ ಹಾಗೂ ಸಮೃದ್ದಿ ಕರ್ನಾಟಕವನ್ನು ನಿರ್ಮಿಸಲು, ಬಿಜೆಪಿಯೊಂದಿಗೆ ಕೈ ಜೋಡಿಸುವಂತೆ ಹುಣಸೂರು ಕ್ಷೇತ್ರದ ಮತದಾರರಿಗೆ ಬಿಜೆಪಿ ರಾಜ್ಯ ಸಹ-ವಕ್ತಾರರಾದ ಆರ್. ರಘು  ಮನವಿ ಮಾಡಿದರು.

ಹುಣಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಸಹ-ವಕ್ತಾರರಾದ ಆರ್. ರಘು , ಕಾಯಕ ಸಮಾಜಗಳಿಗೆ ಬದುಕು ಕಟ್ಟಿಕೊಡುವ, ಸ್ವಾಭಿಮಾನದ ಭವಿಷ್ಯ ರೂಪಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿದ್ದು, ದಿವಂಗತ ಡಿ. ದೇವರಾಜ್ ಅರಸ್. ಆ ನಂತರ ಅಂತಹುದ್ದೇ ಯೋಜನೆಗಳನ್ನ ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಕಾಯಕ ಸಮಾಜಗಳ ಆಶೋತ್ತರಗಳನ್ನು ಈಡೇರಿಸುತ್ತಿದೆ ಎಂದು ಹೇಳಿದರು.

2018ರ ವಿಧಾನ ಸಭಾ ಚುನಾವಣಾ ಫಲಿತಾಂಶದ ಜನಾದೇಶಕ್ಕೆ ವಿರೋಧವಾಗಿ, ಅಪವಿತ್ರ ಮೈತ್ರಿ ಮಾಡಿಕೊಂಡ ಸಮ್ಮಿಶ್ರಸರ್ಕಾರ, ತನ್ನ ಆಂತರಿಕ ಬೇಗುದಿ ಸಹಿಸಿಕೊಳ್ಳಲಾರದೇ, ತನಗೆ ತಾನೇ ಕುಸಿದು ಹೋಯಿತು. ಇದರ ಪರಿಣಾಮವಾಗಿ ಇದೀಗ ಉಪಚುನಾವಣೆಯನ್ನು ರಾಜ್ಯದ ಜನತೆ ಎದುರಿಸುವಂತಾಗಿದೆ. ದೇವರಾಜ ಅರಸರ ದೂರದೃಷ್ಟಿತ್ವದ ಯೋಚನೆಯಿಂದ ಹೊರಹೊಮ್ಮಿದ ಹೆಚ್. ವಿಶ್ವನಾಥ್ ಅವರು, ದೇವರಾಜ ಅರಸರ ಕರ್ಮ ಭೂಮಿಯಾಗಿರುವ ಹುಣಸೂರಿನಲ್ಲಿ, ನೈತಿಕ ರಾಜಕಾರಣದ ಮರುಸ್ಥಾಪನೆಗಾಗಿ ನಿಮ್ಮ ಮುಂದೆ ನಿಂತಿದ್ದಾರೆ.

ಈ ನಿಟ್ಟಿನಲ್ಲಿ, ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಕಾಯಕ ಸಮುದಾಯಗಳನ್ನು ಹೊಂದಿರುವ ಕ್ಷೇತ್ರವಾಗಿರುವ ಹುಣಸೂರಿನಲ್ಲಿ, ಆದರ್ಶ ರಾಜಕಾರಣದ ಸಾಕ್ಷಿಯಾಗಿರುವ ಭಾರತೀಯ ಜನತಾ ಪಾರ್ಟಿಯನ್ನ ಬೆಂಬಲಿಸಬೇಕೆಂದು ವಿನಂತಿಸುತ್ತೇನೆ. ಅಂತೆಯೇ ಅರಸರ ನಂತರ ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾದ ಬಿ.ಎಸ್. ಯಡಿಯೂರಪ್ಪನವರ ಕೈ ಬಲಪಡಿಸಿ, ರಾಜ್ಯದಲ್ಲಿ ಅಭಿವೃದ್ದಿ ಹಾಗೂ ಸಮೃದ್ದಿ ಕರ್ನಾಟಕವನ್ನು ನಿರ್ಮಿಸಲು, ಬಿಜೆಪಿಯೊಂದಿಗೆ ಕೈ ಜೋಡಿಸುವಂತೆ ವಿನಂತಿಸುತ್ತೇನೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದ ಯೋಜನೆಗಳು ‘ಬಡವರನ್ನು’ ಇನ್ನಷ್ಟು ಬಡವರನ್ನಾಗಿಸಿ, ಸದಾ ಬೇಡುವ ಕೈಗಳನ್ನಾಗಿಸುವ ಮತ ಬ್ಯಾಂಕ್ ರಾಜಕಾರಣದ ಅಗ್ಗದ ಜನಪ್ರಿಯತೆಯ ಯೋಜನೆಗಳಾದರೇ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಲಸಗಳು ಬಡವರನ್ನು ಮೇಲೆತ್ತುವ, ರೈತರಿಗೆ ಶಕ್ತಿ ತುಂಬುವ, ಮಹಿಳೆಯರಿಗೆ ಆತ್ಮ ವಿಶ್ವಾಸ ಮೂಡಿಸುವ, ಯುವ ಜನರನ್ನು ಉತ್ತೇಜನ ನೀಡುವ ಸಮೃದ್ದ ನಾಡನ್ನು ಕಟ್ಟಿ, ದೇಶವನ್ನು ಎತ್ತರಕ್ಕೆ ಬೆಳೆಸುವ, ಬಲಿಷ್ಟ ರಾಷ್ಟ್ರ ಕಟ್ಟುವ ಯೋಜನೆಗಳಾಗಿವೆ ಎಂದು ರಘು ಅವರು ಪ್ರಧಾನಿ ಮೋದಿ ಮತ್ತು ಸಿಎಂ ಬಿಎಸ್ ವೈರನ್ನ ಶ್ಲಾಘಿಸಿದರು.

ಪ್ರತಿಕಾಗೋಷ್ಠಿಯಲ್ಲಿ ರಘು ಅವರು ಹೇಳಿದ್ದಿಷ್ಟು…

ಇದರ ಜೊತೆ ಜೊತೆಗೇ ಶತ, ಶತಮಾನಗಳಿಂದ ಕುಲ ಕಸುಬು ಆಧಾರಿತ ವೃತ್ತಿಯನ್ನು ನಂಬಿಕೊಂಡು, ಇವತ್ತಿಗೂ ಅತಂತ್ರ ಹಾಗೂ ಅಭದ್ರತೆಯಲ್ಲಿರುವ ಸಮುದಾಯಗಳಿಗೆ, ಮೇಕ್ ಇನ್ ಇಂಡಿಯಾ ಮತ್ತು ಕೌಶಲ್ಯ ಭಾರತ ಯೋಜನೆಗಳ ಮೂಲಕ, ಅವರ ಬದುಕಿಗೊಂದು ಹೊಸ ಭರವಸೆಗಳನ್ನು ಮೂಡಿಸುವಂತಾಗಿದೆ. ಇಂತಹ ಯಾವುದಾದರು ಯೋಜನೆಗಳನ್ನ ಕಾಂಗ್ರೆಸ್ ನೀಡಿದ್ದರೇ, ಅವುಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕುತ್ತೇನೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳೆಲ್ಲವೂ ಬೇಡುವ ಯೋಜನೆಗಳಾಗಿವೆ, ಯಡಿಯೂರಪ್ಪನವರ ಯೋಜನೆ ಬಡವರಿಗೆ ಶಕ್ತಿ ತುಂಬುವ ಯೋಜನೆಗಳಾಗಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಸುಬು ಆಧಾರಿತ ಕಾಯಕ ಸಮುದಾಯಗಳನ್ನು ವ್ಯವಸ್ಥಿತವಾಗಿ ಶೋಷಿಸಲಾಯಿತು. ಅವರನ್ನ ಇನ್ನಷ್ಟು ಅಂಧಕಾರಕ್ಕೆ ತಳ್ಳಲಾಗಿದೆ. ಅವರನ್ನ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತಲೆ ಎತ್ತಲಾರದಂತೆ ತುಳಿದು, ಸಾಮಾಜಿಕವಾಗಿ ಅವರನ್ನು ಶೋಷಿಸಲಾಗಿದೆ ಎಂಬುದನ್ನು ಅನೇಕ ಉದಾಹರಣೆ ಸಹಿತ ಹೇಳಬಹುದಾಗಿದೆ.

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ, ಬಿಜೆಪಿ ಅಭ್ಯರ್ಥಿ ಎ. ಹೆಚ್. ವಿಶ್ವನಾಥ್ ಅವರನ್ನು ಗೆಲ್ಲಿಸಿ, ವಿಶ್ವನಾಥ್ ಅವರು ಗೆದ್ದರೇ, ಹುಣಸೂರು ಪ್ರತಿನಿಧಿಯೊಬ್ಬರು ಬಹುಕಾಲದ ನಂತರ ವಿಧಾನ ಸೌಧದ 3ನೇ ಮಹಡಿಯನ್ನು ತಲುಪಲಿದ್ದಾರೆ. ಅವರನ್ನು ಹೊರತುಪಡಿಸಿ, ಬೇರೆ ಯಾರೇ ಗೆದ್ದರೂ, ಅವರು ಕೇವಲ ಶಾಸಕರ ಭವನವನ್ನಷ್ಟೇ ತಲುಪುತ್ತಾರೆ.

ಹಿಂದುಳಿದ ಹಾಗೂ ಕಾಯಕ ಸಮುದಾಯದ ಮತಗಳು, ವ್ಯಾಪಾರಕ್ಕೆ ಇಟ್ಟಿಲ್ಲಾ. ಇವು ಆತ್ಮ ಗೌರವ ಮತ್ತು ಸ್ವಾಭಿಮಾನವನ್ನ ಉಳಿಸಿಕೊಂಡು ಬಂದಿರುವ ಸಮುದಾಯಗಳು. ಇದನ್ನು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಅರಿತುಕೊಳ್ಳುವುದು ಒಳ್ಳೆಯದು. ಹುಣಸೂರು ಕ್ಷೇತ್ರದ ಎಲ್ಲಾ ವರ್ಗದ ಜನ ಭಾರತೀಯ ಜನತಾ ಪಾರ್ಟಿಯನ್ನ ಬೆಂಬಲಿಸಲಿದ್ದಾರೆ. ಅದರಲ್ಲೂ ವಿಶೇಷವಾಗಿ ಕಾಯಕ ಸಮುದಾಗಳು ಸೇರಿದಂತೆ ಸಣ್ಣ ಪುಟ್ಟ ಜನಸಂಖ್ಯೆಯ ಎಲ್ಲಾ ಸಮುದಾಯಗಳು ಬಿಜೆಪಿಯನ್ನು ಬೆಂಬಲಿಸುತ್ತವೆ ಎಂಬ ಆತ್ಮ ವಿಶ್ವಾಸವಿದೆ. ಈ ತಾಲೂಕಿನ ಜನರ ಬೆಂಬಲ ಮತ್ತು ವಿಶ್ವಾಸದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎ. ಹೆಚ್. ವಿಶ್ವನಾಥ್ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂಬ ಆತ್ಮ ವಿಶ್ವಾಸವಿದೆ.

Key words: hunsur by-election-development – prosperity – Karnataka-BJP- State Co-Spokesperson – Raghu

website developers in mysore