ಉಗ್ರಭೀತಿಗೆ ಜೆಎಂಬಿ ನಂಟು; ಹಬೀಬುರ್ ಸುಳಿವಿನ ಮೇರೆಗೆ ದೇಶಾದ್ಯಂತ ಅಲರ್ಟ್

ಬೆಂಗಳೂರು:ಆ-20: ಕರ್ನಾಟಕ ಸೇರಿದಂತೆ ದೇಶಾದ್ಯಂತ ಘೋಷಣೆಯಾಗಿರುವ ಟೆರರ್ ಅಲರ್ಟ್​ಗೆ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಹಬೀಬುರ್ ರೆಹಮಾನ್ ನೀಡಿದ್ದ ಸಂಭವನೀಯ ಉಗ್ರದಾಳಿಯ ಸುಳಿವೇ ಕಾರಣ ಎಂಬ ವಿಚಾರ ಬಯಲಾಗಿದೆ. ಇತ್ತೀಚೆಗೆ ಕರ್ನಾಟಕದ ದೊಡ್ಡಬಳ್ಳಾಪುರದಲ್ಲಿ ಸೆರೆಸಿಕ್ಕಿದ್ದ ಜೆಎಂಬಿಯ ಹಬೀಬುರ್​ನನ್ನು ರಾಷ್ಟ್ರೀಯ ತನಿಖಾ ದಳ(ಎನ್​ಐಎ)ವಿಚಾರಣೆಗೊಳಪಡಿಸಿದಾಗ ಕೆಲವು ಆತಂಕಕಾರಿ ಮಾಹಿತಿ ಬಾಯ್ಬಿಟ್ಟಿದ್ದಾನೆ. ಇದರ ಆಧಾರದ ಮೇಲೆಯೇ ಕೇಂದ್ರ ಗೃಹ ಸಚಿವಾಲಯ ದೇಶಾದ್ಯಂತ ಅಲರ್ಟ್ ಘೋಷಣೆ ಮಾಡಿದ್ದಾಗಿ ತಿಳಿದು ಬಂದಿದೆ.

ಬೆಂಗಳೂರು ಸೇರಿ ಭಾರತದ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿದ್ದಾರೆ. ಇದರ ಭಾಗವಾಗಿಯೇ ಕರ್ನಾಟಕದ ಕೆಲ ಭಾಗಗಳಲ್ಲಿರುವ ವ್ಯಕ್ತಿಗಳಿಗೆ ಪಾಕಿಸ್ತಾನದಿಂದ ಸೆಟಲೈಟ್ ಕರೆಗಳು ಬಂದಿದ್ದವೆಂದು ಹಬೀಬುರ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದ.

ಏಳು ಜನರ ಸುಳಿವಿಲ್ಲ: ದೊಡ್ಡಬಳ್ಳಾಪುರದಲ್ಲಿ ಹಬೀಬುರ್ ಸೆರೆಸಿಕ್ಕ ನಂತರ ಆತನ ಜತೆಗಿದ್ದ ಕರ್ನಾಟಕದ ಶಂಕಿತನೂ ಸೇರಿ 7 ಆರೋಪಿಗಳು ತಲೆಮರೆಸಿಕೊಂಡಿದ್ದರು. ಎನ್​ಐಎ ಅಧಿಕಾರಿಗಳು ಈಗಲೂ ಶೋಧ ಮುಂದುವರಿಸಿದ್ದಾರೆ.

ಎರಡು ತಿಂಗಳಿಂದ ಹಬೀಬುರ್​ನ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು, ಕರಾವಳಿ ಭಾಗದ ಪ್ರದೇಶಗಳಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಒಳಬರುವ ಮತ್ತು ಹೊರ ಹೋಗುವ ವಿದೇಶಿ ಫೋನ್ ಕರೆಗಳ ಮೇಲೆ ನಿಗಾ ಇಟ್ಟಿದ್ದಾರೆ.

ಆ.11ರಂದು ಇಂದೋರ್​ನಲ್ಲಿ ಸೆರೆ ಸಿಕ್ಕಿರುವ ಬುರ್ಧ್ವಾನ್ ಸ್ಫೋಟ ಪ್ರಕರಣದ ಮತ್ತೊಬ್ಬ ಜೆಎಂಬಿ ಮುಖಂಡ ಜಹೀರುಲ್ಲಾ ಶೇಖ್​ನನ್ನು ವಿಚಾರಣೆಗೆ ಒಳಪಡಿಸಿದಾಗ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಸಂಚಿನ ಬಗ್ಗೆ ಸುಳಿವು ಕೊಟ್ಟಿದ್ದಾನೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.

ಹಬೀಬುರ್ ಯಾರು?

ಪಶ್ಚಿಮ ಬಂಗಾಳ ಮೂಲದ ಜೆಎಂಬಿ ಶಂಕಿತ ಉಗ್ರ ಹಬೀಬುರ್​ನನ್ನು ಎನ್​ಐಎ ಅಧಿಕಾರಿಗಳು ಜೂ.25ರಂದು ದೊಡ್ಡಬಳ್ಳಾಪುರದ ಮಸೀದಿಯೊಂದರಲ್ಲಿ ಬಂಧಿಸಿದ್ದರು. ಈತ ಚಿಕ್ಕಬಾಣಾವರದಲ್ಲಿ ಬಾಡಿಗೆ ಮನೆ ಪಡೆದು ಸುಧಾರಿತ ಬಾಂಬ್ ತಯಾರಿಕೆಗೆ ಬೇಕಾದ ಸ್ಪೋಟಕ ಸಾಮಗ್ರಿಗಳನ್ನು ಸಂಗ್ರಹಿಸಿದ್ದ ವಿಚಾರ ತನಿಖೆಯಲ್ಲಿ ಬಹಿರಂಗವಾಗಿತ್ತು. ಹಬೀಬುರ್ ಜತೆ ಶಂಕಿತ ಉಗ್ರರಾದ ಕೋಲ್ಕತ ಮೂಲದ ನಜೀರ್ ಶೇಖ್, ಆಸೀಫ್ ಇಕ್ಬಾಲ್, ಅಸ್ಸಾಂ ಮೂಲದ ನಜುರುಲ್ಲಾ ಇಸ್ಲಾಂ, ಬಾಂಗ್ಲಾದೇಶದ ಆರೀಫ್ ಮತ್ತು ಜಹೀದುಲ್ಲಾ ಹಾಗೂ ಕರ್ನಾಟಕದ ಒಬ್ಬ ಅಪರಿಚಿತ ವ್ಯಕ್ತಿಯೂ ಚಿಕ್ಕಬಾಣಾವರದ ಮನೆಯಲ್ಲಿ ವಾಸವಿದ್ದರು.

ರಾಕೆಟ್ ಬಾಂಬ್​ಗೆ ಸಿದ್ಧತೆ

ಹಬೀಬುರ್​ನನ್ನು ಬಂಧಿಸಿದ್ದ ಎನ್​ಐಎ ಅಧಿಕಾರಿಗಳು, ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರದ ಸೇತುವೆ ಕೆಳಭಾಗದಲ್ಲಿ 5 ಸಜೀವ ಬಾಂಬ್​ಗಳನ್ನು ಪತ್ತೆ ಹಚ್ಚಿದ್ದರು. ಬೆಂಗಳೂರಿನ ಚಿಕ್ಕಬಾಣಾವರದ ಮನೆಯೊಂದರಲ್ಲಿ ಸುಧಾರಿತ ಬಾಂಬ್ ತಯಾರಿಕೆಗೆ ಸಂಗ್ರಹಿಸಿಟ್ಟಿದ್ದ ಸ್ಪೋಟಕ ಸಾಮಗ್ರಿ ಹಾಗೂ ವಿದ್ಯುತ್ ಉಪಕರಣ, 5 ಗ್ರೆನೇಡ್, 1 ಟೈಮ್ ಬಾಂಬ್ ಸಿಕ್ಕಿದ್ದವು. ರಾಕೆಟ್ ಬಾಂಬ್ ತಯಾರಿಸಲು ಪ್ರಾಯೋಗಿಕ ಸಿದ್ಧತೆ ಕೂಡ ನಡೆಸಿದ್ದರೆಂಬುದು ತನಿಖೆಯಲ್ಲಿ ಬಯಲಾಗಿತ್ತು.

ಮುಂದುವರಿದ ಭದ್ರತೆ

ರಾಜ್ಯಾದ್ಯಂತ ಪೊಲೀಸ್ ಭದ್ರತೆ ಮುಂದುವರಿದಿದೆ. ಪ್ರಮುಖ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನನಿಲ್ದಾಣ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ನಿರಂತರವಾಗಿ ಪರಿಶೀಲನೆ ನಡೆಸುತ್ತಿವೆ. ಪಾರಂಪರಿಕ ಕಟ್ಟಡಗಳು, ಐಟಿ-ಬಿಟಿ ಕಂಪನಿಗಳು ಹಾಗೂ ಗಣ್ಯರ ವಾಸಿಸುವ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಮೂವರ ವಿಚಾರಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್​ಐಎ)ದ ತಂಡವೊಂದು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಬೆಳ್ತಂಗಡಿ, ಚಿಕ್ಕಮಗಳೂರಿನ ಕೆಲವು ಪ್ರದೇಶಗಳಿಗೆ ಉಪಗ್ರಹ ಫೋನ್ ಆಧಾರಿತ ಕರೆಗಳು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆಗಮಿಸಿದ್ದ ಎನ್​ಐಎ ತಂಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುತ್ತಾಡಿ ಪ್ರಮುಖ ಮಾಹಿತಿ ಕಲೆ ಹಾಕಿದೆ. ಇದರ ಹಿನ್ನೆಲೆಯಲ್ಲೇ ಸದ್ಯ ಕೇರಳದಲ್ಲಿರುವ ಕೆಲಸಮಯದಿಂದ ಮಂಗಳೂರಿನಲ್ಲಿ ನೆಲೆಸಿದ್ದ ಮೂವರು ಯುವಕರ ಮೇಲೆ ಕಣ್ಣಿರಿಸಿ ತನಿಖೆ ನಡೆಸುತ್ತಿದೆ. ಪಾಕಿಸ್ತಾನದಿಂದ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರಿಗೆ ಬಂದಿರುವ ಸೆಟಲೈಟ್ ಕರೆಯನ್ನು ಕೇಂದ್ರೀಕರಿಸಿ ಈ ತನಿಖೆ ಮುಂದುವರಿದಿದೆ. ಬೆಳ್ತಂಗಡಿಯ ಸುತ್ತಮುತ್ತಲಿನ ಹಲವರನ್ನು ವಿಚಾರಣೆಗೊಳಪಡಿಸಿದ್ದ ಎನ್​ಐಎ ತಂಡ ಬಳಿಕ ಕೇರಳ ಮೂಲದ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುವುದಾಗಿ ಮೂಲಗಳು ಖಚಿತಪಡಿಸಿವೆ.

ಈ ತಂಡವನ್ನು ಹಿರಿಯ ಪೊಲೀಸರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೋಮವಾರ ರಾತ್ರಿ ಮಂಗಳೂರಿನಿಂದ ಹಿಂತಿರುಗಿರುವ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ಬೆಳ್ತಂಗಡಿಯ ಕಳಿಯ ಗ್ರಾಮದ ಗೋವಿಂದೂರು ಬಳಿ ಮನೆಯೊಂದರಿಂದ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಇದು ಸುಳ್ಳು ಸುದ್ದಿಯಾಗಿದ್ದು, ಈ ಬಗ್ಗೆ ತಾನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾನಹಾನಿ ದೂರು ನೀಡಿರುವುದಾಗಿ ಆರೋಪಕ್ಕೆ ಒಳಗಾದ ವ್ಯಕ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಕರೆ ಹೋಗಿರುವ ಅಥವಾ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಘೊಷಿಸಿರುವ ಹೈಅಲರ್ಟ್ ಭಾಗವಾಗಿ ಜಿಲ್ಲೆಯಲ್ಲಿ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪಹರೆ ಮುಂದುವರಿಸಲಾಗಿದೆ.
ಕೃಪೆ:ವಿಜಯವಾಣಿ

ಉಗ್ರಭೀತಿಗೆ ಜೆಎಂಬಿ ನಂಟು; ಹಬೀಬುರ್ ಸುಳಿವಿನ ಮೇರೆಗೆ ದೇಶಾದ್ಯಂತ ಅಲರ್ಟ್
home-ministry-issued-high-alert-after-receiving-input-about-terror-attack-from-habibur-rehaman