ಉನ್ನತ ಶಿಕ್ಷಣ: ಇಲಿನಾಯ್ಸ್ ವಿಶ್ವವಿದ್ಯಾಲಯದ ಜತೆ ಒಡಂಬಡಿಕೆಗೆ ನಿರ್ಧಾರ….

ಬೆಂಗಳೂರು,ಡಿ,29,2020(www,justkannada.in):  ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಹಾಗೂ ನಮ್ಮ ವಿಶ್ವವಿದ್ಯಾಲಯಗಳ  ಸಹಭಾಗಿತ್ವದಲ್ಲಿ ಕೆಲಸ ಮಾಡಲು ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯ ಮುಂದೆ ಬಂದಿದೆ.

ಉನ್ನತ ಶಿಕ್ಷಣ  ಸಚಿವರೂ ಆಗಿರುವ  ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ವಿಕಾಸಸೌಧದ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿದ ಇಲಿನಾಯ್ಸ್ ವಿಶ್ವವಿದ್ಯಾಲಯದ ಅಧ್ಯಕ್ಷ ತಿಮೋಟಿ ಕಿಲೆನ್ ನೇತೃತ್ವದ ತಂಡ ಈ ಸಂಬಂಧ ಮಾತುಕತೆ ನಡೆಸಿತು.

ರಾಜ್ಯದ  ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದ ಜತೆ ಮೂರು ವರ್ಷಗಳಿಂದ ಇಲಿನಾಯ್ಸ್ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿದ್ದು,  ಈಗ ಇತರ ವಿಶ್ವವಿದ್ಯಾಲಯಗಳ ಜತೆಗೂ ಕೆಲಸ ಮಾಡಲು ಮುಂದೆ ಬಂದಿದೆ. ಇಲಿಯಾನ್ಸ್‌ ವಿಶ್ವವಿದ್ಯಾಲಯದ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಸ್ವಾಗತಿಸಿದೆ.

“ಶಿಕ್ಷಣ, ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ವೈದ್ಯಕೀಯ ಶಿಕ್ಷಣ, ತಂತ್ರಜ್ಞಾನ, ದೂರಶಿಕ್ಷಣ, ಕೃಷಿ   ಮುಂತಾದ ಕ್ಷೇತ್ರಗಳಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದ ಜತೆ ಕೆಲಸ ಮಾಡಲು ಆಸಕ್ತಿ ಇದೆ. ವಿಶ್ವಮಟ್ಟದ ಉನ್ನತ ಶಿಕ್ಷಣ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೂ ಸಿಗಲಿ ಎನ್ನುವ ಕಾರಣಕ್ಕೆ ಈ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ,” ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ತಮ್ಮ ಕಾರ್ಯದರ್ಶಿ ಪ್ರದೀಪ್ ಅವರನ್ನು ಈ ಕೂಡಲೇ ಜಾರಿ ಬರುವಂತೆ ನೋಡಲ್ ಅಧಿಕಾರಿಯಾಗಿ ನೇಮಿಸುವುದಾಗಿ ಸಚಿವರು  ಘೋಷಿಸಿದರು. ಇಲಿನಾಯ್ಸ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಕೂಡ ನೋಡಲ್ ಅಧಿಕಾರಿಯನ್ನು ನೇಮಿಸಲು ಸ್ಥಳದಲ್ಲೇ ಒಪ್ಪಿಗೆ ಸೂಚಿಸಿದರು. ಉಪ ಮುಖ್ಯಮಂತ್ರಿಯವರ ತಕ್ಷಣದ ಈ ತೀರ್ಮಾನಕ್ಕೆ ವಿದೇಶಿ ಗಣ್ಯರ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.

ನಗರದಲ್ಲಿ ಇಲಿನಾಯ್ಸ್ ಕಚೇರಿ…

ಬೆಂಗಳೂರು ಸೆಂಟ್ರಲ್ ವಿ.ವಿಯ ಆವರಣದಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದ ಕಚೇರಿ ತೆರೆಯಲು ಜಾಗ ನೀಡುವುದಕ್ಕೂ ಒಪ್ಪಿಗೆ ಸೂಚಿಸಿದ ಉಪ ಮುಖ್ಯಮಂತ್ರಿ ಈ ಸಂಬಂಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು, “ಉತ್ಕಷ್ಟ ಗುಣಮಟ್ಟದ ಶಿಕ್ಷಣವನ್ನು ನಮ್ಮ ರಾಜ್ಯದ ಮಕ್ಕಳಿಗೂ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಹೊಸ ಹೊಸ ಆವಿಷ್ಕಾರಗಳತ್ತ ಮುಖ ಮಾಡುತ್ತಿದ್ದೇವೆ. ಇದರ ಒಂದು ಭಾಗವಾಗಿ ವಿದೇಶಿ ವಿಶ್ವವಿದ್ಯಾಲಯಗಳ ಜತೆಗೂ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದು, ಇದು ಮತ್ತೂ ಮುಂದುವರಿಯಲಿದೆ,” ಎಂದು ಹೇಳಿದರು.

ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಂ.ಆರ್.ಜಯರಾಮ, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

19 ಕೋಟಿ ನೆರವು….

“ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಸಲುವಾಗಿ ಇಂಗ್ಲೆಂಡ್ ಸರ್ಕಾರ 19 ಕೋಟಿ ರೂಪಾಯಿ ನೆರವು ನೀಡಲಿದೆ,” ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ ನೇತೃತ್ವದ ತಂಡ ಇತ್ತೀಚೆಗೆ ಇಂಗ್ಲೆಂಡ್‍ನ ಸಾಲ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದಕ್ಕ ಒಪ್ಪಿಗೆ ಸಿಕ್ಕಿತ್ತು. ಇದಕ್ಕೆ ಪೂರಕವಾಗಿ ಸಂಶೋಧನೆಗೆ ಸಂಬಂಧಿಸಿದ ಪ್ರಾಥಮಿಕ ವರದಿಗಳನ್ನು ಸಲ್ಲಿಸುವ ಕೆಲಸ ಆರಂಭವಾಗಿದ್ದು, 3 ತಿಂಗಳಲ್ಲಿ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

Key words: Higher Education-Decision -Treaty – University of Illinois.