ನ್ಯಾ. ಕೃಷ್ಣ ಎಸ್ ದೀಕ್ಷಿತ್‌ ಅವರಿಗೊಂದು ಸಲಾಂ..

 

ಮೈಸೂರು, ಅ.02, 2021 : (www.justkannada.in news ) ನಮ್ಮ ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಅತ್ಯಂತ ಮಹತ್ವವಾದದ್ದು, ಪೂಜ್ಯವಾದದ್ದು ನ್ಯಾಯಾಂಗ. ಇದು ಪೂಜ್ಯನೀಯವಾಗಲು ಹಲವು ಗೌರವಾನ್ವಿತ ನ್ಯಾಯಾಧೀಶರು ಕಾರಣಕಾರ್ತರಾಗಿದ್ದಾರೆ. ಮಹತ್ವದ, ಐತಿಹಾಸಿಕ ತೀರ್ಪಿನ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಂದು ಸೇರ್ಪಡೆ, ಗೌರವಾನ್ವಿತ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರ ಮಹತ್ವದ ತೀರ್ಪು.

ಮಾನವೀಯ ಕಳಕಳಿಯುಳ್ಳ ಗೌರವಾನ್ವಿತ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರು ಹತ್ತು ಹಲವು ಮಹತ್ವದ ತೀರ್ಪುಗಳು ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಅವರು ಮಗುವಿನ ವಿಚಾರವಾಗಿ ನೀಡಿರುವ ತೀರ್ಪು ಐತಿಹಾಸಿಕ ಮೈಲಿಗಲ್ಲಾಗಿದೆ. ದೇಶದ ಕಾನೂನಿನ ಬಗ್ಗೆ ಗೌರವ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಮಾನವೀಯ ಆದೇಶ

ಬೆಂಗಳೂರಿನ 17 ತಿಂಗಳ ಮಗು ಜನೀಸ್ ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿತ್ತು. ಅದರ ಚಿಕಿತ್ಸೆಗಾಗಿ ಒಂದು ಚುಚ್ಚುಮದ್ದು ಅಮೆರಿಕಾದಿಂದ ತರಿಸಲು ಒಂದಲ್ಲ‌ ಎರಡಲ್ಲ ಬರೋಬ್ಬರಿ 16 ಕೋಟಿ ಹಣದ ಅವಶ್ಯಕತೆಯಿತ್ತು. ಮಧ್ಯಮ ವರ್ಗದ ಮಗುವಿನ ತಂದೆ, ತಾಯಿಗೆ ಅಷ್ಟೊಂದು ಹಣ ಹೊಂದಿಸುವುದು ಕನಸಿನ ಮಾತಾಗಿತ್ತು. ಆದರೂ ಕೆಲ ಸಮಾಜಮುಖಿ ಸಂಘ ಸಂಸ್ಥೆಗಳು. ಟಿವಿ9 ವಾಹಿನಿಯ ನಿರಂತರ ಅಭಿಯಾನದ ಫಲವಾಗಿ ಸುಮಾರು 8.24 ಕೋಟಿ ಹಣ ಸಂಗ್ರಹವಾಗಿತ್ತು. ಉಳಿದ ಹಣವನ್ನು ಹೊಂದಿಸಲಾಗುತಿತ್ತು. ಈ ಮಧ್ಯೆ ಮಗುವಿನ ತಂದೆ ಮಗುವಿನ ಚಿಕಿತ್ಸೆಗೆ ಸರ್ಕಾರ ಆರ್ಥಿಕ ನೆರವು ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠದ ನ್ಯಾ‌. ಕೃಷ್ಣ ಎಸ್ ದೀಕ್ಷಿತ್ ಅವರು ಅತ್ಯಂತ ಸಮಯೋಚಿತ ಹಾಗೂ ಅರ್ಥಪೂರ್ಣವಾದ ನಿರ್ದೇಶನವನ್ನು ನೀಡಿದ್ದಾರೆ. ಮಗುವನ್ನು ತಕ್ಷಣವೇ ಇಂದಿರಾಗಾಂಧಿ ಆಸ್ಪತ್ರೆ ವೈದ್ಯ ಜಿ ಎನ್ ಸಂಜೀವ್ ಬಳಿ ಕರೆದುಕೊಂಡು ಹೋಗಬೇಕು. ವೈದ್ಯರು ಅದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಒಂದು ವೇಳೆ ವೈದ್ಯರು ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಅಕ್ಟೋಬರ್ 7ಕ್ಕೆ ಪ್ರಕರಣದ ಪ್ರಗತಿ ಕುರಿತು ಸಂಪೂರ್ಣ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಿದ್ದಾರೆ.

ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರ ಈ ದಿಟ್ಟ ಸಮಯೋಚಿತ ಆದೇಶ ನ್ಯಾಯಾಂಗದಲ್ಲಿ ಮಾತ್ರವಲ್ಲ ಸಮಾಜದ ವಿವಿಧ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.
ಈ ಮೂಲಕ ನ್ಯಾಯಾಂಗ ವ್ಯವಸ್ಥೆಯ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರು ಯಶಸ್ವಿಯಾಗಿದ್ದಾರೆ. ತಮ್ಮ ಒತ್ತಡದ ಕರ್ತವ್ಯದ ನಡುವೆಯೂ ಮಗುವಿನ ಬಗ್ಗೆ ಕಾಳಜಿ ತೋರಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದು ಮಾತ್ರವಲ್ಲ ಪ್ರತಿ ಜೀವಿಯ ಜೀವವೂ ಮಹತ್ವ, ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಅನ್ನೋ ಮಾತನ್ನು ಹೇಳಿರುವ ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಅವರಿಗೆ ನಮದೊಂದು ಸಲಾಂ.

-ಎಚ್ ಎನ್ ವೆಂಕಟೇಶ್, ಹಿರಿಯ ವಕೀಲರು, ಸಂಪಾದಕರು, ಲಾ‌ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ, ಮೈಸೂರು.

key words : high.court-judge-krishna dixit-bangalore-karnataka-advocate