ಬೆಳಗಾವಿಯಲ್ಲಿ ಮಳೆಯ ಅಬ್ಬರಕ್ಕೆ ಮನೆಗಳು ಜಲಾವೃತ: ಹಲವೆಡೆ ರಸ್ತೆ ಸಂಪರ್ಕ ಸ್ಥಗಿತ: ಜನಜೀವನ ಅಸ್ತವ್ಯಸ್ತ…

ಬೆಳಗಾವಿ,ಆ,6,2019(www.justkannada.in): ಕಳೆದ ಎಂಟ್ಹತ್ತು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದ ಬೆಳಗಾವಿ ನಗರ ಜನಜೀವನ ತುಂಬಾ ಅಸ್ತವ್ಯಸ್ತಗೊಂಡಿದ್ದು,   ಕೃಷ್ಣ ಹಾಗೂ ಅದರ ಉಪ ನದಿಗಳು ಅಪಾಯ ಮಟ್ಟಮೀರಿ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಉಲ್ಭಣಗೊಂಡಿದೆ.   ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಚಿಕ್ಕೋಡಿ,  ಅಥಣಿ, ರಾಯಭಾಗ ಮತ್ತು ಖಾನಾಪೂರ ತಾಲೂಕಿನಲ್ಲಿ  ಜನರು ಆತಂಕಕ್ಕೆ ಒಳಗಾಗಿದ್ದಾರೆ.

ದಕ್ಷಿಣ ಮಹಾರಾಷ್ಟ್ರದಿಂದ ಅಪಾರ ಪ್ರಮಾದಲ್ಲಿ ನೀರು ಹರಿದುಬರುತ್ತಿರುವುದರಿಂದ ಪ್ರವಾಹದ ಅಪಾಯಸ್ಥಿತಿ ಮುಂದುವರಿದಿದೆ. ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, 2 ಲಕ್ಷ 90 ಸಾವಿರ ಕ್ಯುಸೆಕ್‍ ಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.  ನೀರಿನ ಪ್ರಮಾಣ ಇನ್ನೂಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಥಣಿ ತಾಲೂಕಿನ ಜುಗೂಳ, ಶಾಹಾಪೂರ, ಮಂಗಾವತಿ, ಸತ್ತಿ, ಪಿ.ಕೆ. ನಾಗನೂರ, ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರ, ಮಾಂಜರಿ, ಇಂಗಳಿ, ಮಲ್ಲಿಕವಾಡ, ಯಕ್ಸಂಬಾ, ಸದಲಗಾ, ಬೇಡಿಕಿಹಾಳ, ಶಮನೆವಾಡಿ ಸೇರಿದಂತೆ ಅನೇಕ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕಾರ್ಯ ಮುಂದುವರಿದೆ.  ಸಂತ್ರಸ್ತರಿಗೆ ಬೆಳಗಾವಿ ಜಿಲ್ಲಾ ಆಡಳಿತ ಸಕಲ ವ್ಯವಸ್ಥೆ ಕಲ್ಪಿಸಿದ್ದು, ಪರಿಹಾರ (ಗಂಜಿ) ಕೇಂದ್ರಗಳನ್ನು ತೆಗೆದು ಊಟ ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ.

ಈ ಮಧ್ಯ ಭಾರೀ ಮಳೆಯ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಭೂಕುಸಿತ ಮುಂದುವರೆದಿದ್ದು, ಬೆಳಗಾವಿ ಮಹಾರಾಷ್ಟ್ರದ ಪುಣೆ ಮಾರ್ಗದ ನಿಪ್ಪಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಇದರಿಂದಾಗಿ  ಬೆಳಗಾವಿಯಿಂದ ಮಹಾರಾಷ್ಟ್ರದ ಕೊಲ್ಲಾಪೂರಕ್ಕೆ ಮಾರ್ಗವಾಗಿ ಪ್ರಯಾಣ ಬೆಳೆಸದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿಕೊಂಡಿದ್ದಾರೆ. ರಸ್ತೆ ಸಂಚಾರ ಸ್ಥಗೀತದ ಕಾರಣ ಸುಮಾರು ದೂರದವಾರೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿವೆ.

ಬೆಳಗಾವಿ ಚಿಕ್ಕೋಡಿ ಮಾರ್ಗದ  ವಂಟಮುರಿ ಘಾಟದ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದುಬರುತ್ತಿದ್ದು, ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ.

ಕಳೆದ ಎರಡುವಾರದಿಂದ ಬೆಳಗಾವಿ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆ ಮುಂದುವರೆದಿದ್ದು ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ನಗರದ ತಗ್ಗುಪ್ರದೇಶಗಳಲ್ಲಿ ಜಲಾವೃತ್ತಗೊಂಡಿದ್ದು, ಸಮರ್ಥನ ನಗರ, ಭಾಗ್ಯನಗರ, ಕಪಿಲೇಶ್ವರ ಕಾಲೊನಿ, ಗಾಂಧಿ ನಗರ, ಸೇರಿದಂತೆ ಹೊರವಲಯದ ಯಳ್ಳೂರು, ಪೀರನವಾಡಿ, ಮಜಗಾವಿ, ಬ್ರಹ್ಮನಗರ ಸೇರಿದಂತೆ ಅನೇಕ ಕಡೆ ಮನೆಗಳಲ್ಲಿ ನೀರು ಪ್ರವೇಶವಾಗಿ ತೀವ್ರ ತೊಂದರೆಯುಂಟಾಗಿದೆ. ಧಾರಕಾರ ಮಳೆಯಿಂದ ಸಾಂಬ್ರಾ ವಿಮಾನ ನಿಲ್ದಾಣದ ದಕ್ಷಿಣ ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ಹಳ್ಳದ ರೀತಿಯಲ್ಲಿ ನೀರು ಹರಿಯುತ್ತಿದೆ.  ಬೆಳಗಾವಿ ಗೋವಾ ಮಾರ್ಗದ ಮಜಗಾವ ತಿರುವಿನಿಂದ ಪೀರಣವಾಡಿವರೆಗೆ ರಸ್ತೆ ಜಿಲಾವೃತ್ತವಾಗಿದ್ದು ಸಂಚಾರಕ್ಕೆ ತೊಂದರೆಯುಂಟಾಗಿದೆ. ನಿರಂತರ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.

Key words: Heavy rain  -Belgaum-Road -many areas- disrupted