ವಿಕ್ಟೋರಿಯಾ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ತಲೆ ಎತ್ತಲಿದೆ ಹೆಲ್ತ್‌ ಕೇರ್‌ ಮ್ಯೂಸಿಯಂ- ಡಿಸಿಎಂ ಡಾ. ಅಶ್ವತ್ಥನಾರಾಯಣ್…

ಬೆಂಗಳೂರು,ಫೆ,4,2020(www.justkannada.in): ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1000 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣ ಆದ ನಂತರ ಹಳೆಯ ಕಟ್ಟಡವನ್ನು ‘ಹೆಲ್ತ್‌ ಕೇರ್‌ ಮ್ಯೂಸಿಯಂ’ ಆಗಿ ಪರಿವರ್ತಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಮಂಗಳವಾರ ಘೋಷಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕಿದ್ವಾಯಿ ಆಸ್ಪತ್ರೆಗೆ  ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ  ಸಚಿವರು,  ಆಸ್ಪತ್ರೆಯಲ್ಲಿನ ವ್ಯವಸ್ಥೆ ಸುಧಾರಣೆಗೆ ಅಗತ್ಯ ಸೂಚನೆ ನೀಡಿರುವುದಾಗಿ ತಿಳಿಸಿದರು.

“ಹೊಸ ಕಟ್ಟಡದಲ್ಲಿ ಸೇವೆ ಆರಂಭಿಸಿದ ನಂತರ ವಿಕ್ಟೋರಿಯಾ ಆಸ್ಪತ್ರೆಯ ಹಳೆಯ ಕಲ್ಲು ಕಟ್ಟಡವನ್ನು ‘ಹೆಲ್ತ್‌ ಕೇರ್‌ ಮ್ಯೂಸಿಯಂ’ ಆಗಿ ಪರಿರ್ವತಿಸಲಾಗುವುದು.  ಮ್ಯೂಸಿಯಂಯಲ್ಲಿ ಇಡೀ ವೈದ್ಯ ಶಿಕ್ಷಣ ವ್ಯವಸ್ಥೆಯ ಚಿತ್ರಣ ಕಟ್ಟಿಕೊಡಲಾಗುವುದು.  ಹಿಂದಿನ ವೈದ್ಯಕೀಯ ತಂತ್ರಜ್ಞಾನ ಹಾಗೂ ಮುಂದಿನ ಆವಿಷ್ಕಾರಗಳ ಕುರಿತ ಮಾಹಿತಿ ಅಲ್ಲಿರಲಿದೆ.  ವೈದ್ಯ ವಿದ್ಯಾರ್ಥಿಗಳಿಗೆ ಮ್ಯೂಸಿಯಂನಲ್ಲಿ 1 ತಿಂಗಳ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೇ ವೈದ್ಯ ಶಿಕ್ಷಣದ ಕನಸು ಕಾಣುವ ಎಲ್ಲ ವಿದ್ಯಾರ್ಥಿಗಳಿಗೆ ಇದು ಕಲಿಕಾ ತಾಣವಾಗಲಿದೆ,” ಎಂದು ಡಾ. ಅಶ್ವತ್ಥನಾರಾಯಣ ವಿವರಿಸಿದರು.

ಸ್ಕಿಲ್‌ ಲ್ಯಾಬ್‌

“ವಿದ್ಯಾರ್ಥಿಗಳ ಕಲಿಕೆ ಹಾಗೂ ಪ್ರಯೋಗಕ್ಕೆ ಅನುಕೂಲವಾಗುವಂತೆ ಎಲ್ಲ 17 ಮೆಡಿಕಲ್‌ ಕಾಲೇಜುಗಳಿಗೆ  ಸ್ಕಿಲ್‌ ಲ್ಯಾಬ್‌  ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನೇರವಾಗಿ ರೋಗಿಗಳ  ಮೇಲೆ ಪ್ರಯೋಗ ಮಾಡುವುದಿಕ್ಕಿಂತ ಸ್ಕಿಲ್‌ ಲ್ಯಾಬ್‌ಗಳಲ್ಲಿ ಮ್ಯಾನಿಕ್ವಿನ್ಸ್‌ ಮೇಲೆ ಪ್ರಯೋಗ ನಡೆಸಿ, ಕಲಿಕೆಯ ಗುಣಮಟ್ಟ ಹೆಚ್ಚಿಸಿಕೊಳ್ಳಬಹುದು.  ಬಹಳಷ್ಟು ಮುಂದುವರಿದ ರಾಷ್ಟ್ರಗಳಲ್ಲಿ ಇರುವಂಥ ವ್ಯವಸ್ಥೆ, ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಇರುವುದು ಸಂತಸದ ವಿಷಯ. ಇದೇ ರೀತಿ ಎಲ್ಲ ಮೆಡಿಕಲ್‌ ಕಾಲೇಜುಗಳಲ್ಲೂ ಸ್ಕಿಲ್‌ ಲ್ಯಾಬ್‌ ವ್ಯವಸ್ಥೆ ಇರಬೇಕು. ರೋಗಿಗಳು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಬಹಳ ಮುಖ್ಯವಾಗುತ್ತದೆ,”ಎಂದರು

ಬಹುಮಹಡಿ ಪಾರ್ಕಿಂಗ್‌

“ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಸುಧಾರಣೆ ಆಗಬೇಕು. ಕ್ಯಾಂಪಸ್‌ ಒಳಗೆ ಯಾವುದೇ ವಾಹನ ಬರಬಾರದು. ವೈದ್ಯರು, ಸಚಿವರು, ಶಾಸಕರು ಸೇರಿದಂತೆ ಯಾರ ವಾಹನವೂ  ಕ್ಯಾಂಪಸ್‌ ಒಳಗೆ ಬರಬಾರದು. ಅದಕ್ಕಾಗಿ ಆಸ್ಪತ್ರೆಯ ಪ್ರವೇಶ ದ್ವಾರದ ಬಳಿಯೇ ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ,” ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

ಉತ್ತಮ ರಸ್ತೆ

“ಆಸ್ಪತ್ರೆಗೆ ಬರುವ ರಸ್ತೆಯನ್ನು ದುರಸ್ಥಿಗೊಳಿಸಲು ಬಿಬಿಎಂಪಿಗೆ ಈ ಕೂಡಲೇ ಆದೇಶಿಸುತ್ತೇನೆ. ಜತೆಗೆ, ಆಸ್ಪತ್ರೆ ಒಳಗಿನ ಪಾದಚಾರಿ ರಸ್ತೆಯನ್ನು ಸರಿಪಡಿಸಿ ಕ್ಯಾಂಪಸ್‌ನಲ್ಲಿ ಸುಲಭವಾಗಿ ಓಡಾಡುವಂತಾಗಬೇಕು. ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ವಿಶ್ವಾಸ, ನೆಮ್ಮದಿಯ ವಾತಾವರಣ ಸೃಷ್ಟಿಸಿ, ಉತ್ತಮ ಆರೋಗ್ಯ ಸೇವೆ ಒದಗಿಸಲು ಸೂಚಿಸಿದ್ದೇನೆ,” ಎಂದು ಅವರು ತಿಳಿಸಿದರು.

ಧೋರಣೆ ಬದಲಿಸಿ

ಮೊದಲು ಆಸ್ಪತ್ರೆಯ ಬ್ಲಡ್‌ ಬ್ಯಾಂಕ್‌ಗೆ ಭೇಟಿ ನೀಡಿದ ಸಚಿವರು,  ಅಲ್ಲಿನ ಹಳೆಯ ಬೋರ್ಡ್‌ನ ದುಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರಿ ಆಸ್ಪತ್ರೆ ಬಗ್ಗೆ ಇರುವ ಧೋರಣೆ ಹೋಗಲಾಡಿಸಿ ಎಂದು ಸೂಚಿಸಿದರು. ಬಳಿಕ ವಾರ್ಡ್‌ಗಳಿಗೆ ತೆರಳಿ ರೋಗಿಗಳು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಕುಂದುಕೊರತೆ ವಿಚಾರಿಸಿದರು. ಪರೀಕ್ಷಾಲಯಗಳಿಗೂ ಭೇಟಿ ನೀಡಿ ಅಲ್ಲಿ ವ್ಯವಸ್ಥೆಯನ್ನು ಪರಿಶೀಲಿಸಿದರು.  ರಕ್ತದ ಮಾದರಿ ಸಂಗ್ರಹಿಸಿ ಅದನ್ನು ಸಂಸ್ಕರಿಸುವ ವ್ಯವಸ್ಥೆ ಹೆಚ್ಚು ಮಾಡಲು ಡಾ. ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

ಕಿದ್ವಾಯಿ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಸೌಲಭ್ಯ

“ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡುವ ಮೊದಲು ನನಗೆ ಬೇರೆಯದೇ ರೀತಿಯ ಕಲ್ಪನೆ ಇತ್ತು. ಇಲ್ಲಿ ಬಂದು ನೋಡಿದ ನಂತರ ನನ್ನ ಅಭಿಪ್ರಾಯ ಸಂಪೂರ್ಣ ಬದಲಾಯಿತು. ನೊಂದು ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ವ್ಯವಸ್ಥೆ ಇರುವುದನ್ನು ಕಂಡು ಬೆರಗಾಗಿದ್ದೇನೆ.  ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸಾ ಸೌಲಭ್ಯ ಮತ್ತು ವ್ಯವಸ್ಥೆ ಇಲ್ಲಿದೆ.  ಇನ್ನೂ ಉತ್ತಮ ಸೇವೆಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಆಗಲಿದೆ. ರೋಗಿಗಳ ನೊಂದಣಿ ವ್ಯವಸ್ಥೆ ಸರಳಗೊಳಿಸಿ, ರೋಗ ಪತ್ತೆಗೆ ಮಾಡುವ ಮಾದರಿ ಸಂಗ್ರಹಣೆ ವಿಧಾನವನ್ನು ಸುಧಾರಿಸಬೇಕು. ಜತೆಗೆ, ಕಿದ್ವಾಯಿ ಆಸ್ಪತ್ರೆಯಲ್ಲಿ  ನರ್ಸಿಂಗ್‌ ಬ್ಲಾಕ್‌ ನಿರ್ಮಿಸಲು ಸೂಚನೆ ನೀಡಿದ್ದೇನೆ,” ಎಂದು ಸಚಿವರು ತಿಳಿಸಿದರು.

5 ಕಡೆಗಳಲ್ಲಿ ಕ್ಯಾನ್ಸರ್‌  ಚಿಕಿತ್ಸಾ ಕೇಂದ್ರ

“ಈಗಾಗಲೇ ಮಂಡ್ಯದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಇದ್ದು, ಮೈಸೂರು, ಬಳ್ಳಾರಿ, ಶಿವಮೊಗ್ಗ, ಬೆಂಗಳೂರು ಮೆಡಿಕಲ್‌ ಕಾಲೇಜು ಹಾಗೂ ಹುಬ್ಬಳಿಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುವುದು. ಈ ಎಲ್ಲ ಕೇಂದ್ರಗಳ ನಿರ್ವಹಣೆಯನ್ನು ಕಿದ್ವಾಯಿ ಆಸ್ಪತ್ರೆ ಮಾಡಲಿದೆ,”ಎಂದು ತಿಳಿಸಿದರು.

ಕರೋನಾ

“ಚೀನಾ ದೇಶದಿಂದ ಬಂದ ಪ್ರವಾಸಿಗರ ತಪಾಸಣೆ ಮಾಡಲಾಗುತ್ತಿದೆ. ಆ ದೇಶಕ್ಕೆ ಭೇಟಿ ನೀಡಿ ಬಂದವರ ವಿಳಾಸ ಪತ್ತೆ ಮಾಡಿ ಅವರ ತಪಾಸಣೆಯನ್ನೂ ಮಾಡುತ್ತಿದ್ದೇವೆ.  ರೋಗದ ಶಂಕೆ ಕಂಡುಬಂದವರನ್ನು  ರಾಜೀವ್‌ ಗಾಂಧಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ತಪಾಸಣೆ ನಡೆಸಲಾಗುತ್ತಿದೆ. ರೋಗಿಗಳು ಅಲ್ಲಿ ಹೆಚ್ಚು ದಿನ ಇರಬೇಕಾದ ಕಾರಣ, ಅಗತ್ಯ  ಸೌಕರ್ಯ ಹೆಚ್ಚಿಸಲು ಸೂಚನೆ ನೀಡಿದ್ದೇನೆ. ರೋಗ ಹರಡದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದು,”ಎಂದು ಡಾ. ಅಶ್ವತ್ಥನಾರಾಯಣ ಭರವಸೆ ನೀಡಿದರು.

Key words:  Health Care Museum – old building – Victoria Hospital- DCM Dr. Ashwath narayan