ಹೀಗೋರ್ವ ವಿಶೇಷ ಮನಃಶಾಸ್ತ್ರಜ್ಞ.

ಬೆಂಗಳೂರು, ಡಿಸೆಂಬರ್ 14, 2021 (www.justkannada.in): ತಮ್ಮ ಕುಟುಂಬಸ್ಥರಿಂದ ದೂರ ತಳಲ್ಪಟ್ಟಿರುವಂತಹ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಮನೋರೋಗ ವೈದ್ಯರು ಹಾಗೂ ನಗರದ ಪೊಲೀಸರು ಬೆಂಗಳೂರಿನ ವರ್ಗೋನಗರದ ಆವಲಹಳ್ಳಿಯ ಸುಮನ ಎಲ್ಲೆನ್ ಟ್ರಸ್ಟ್ ಎಂಬ ಹೆಸರಿನ ದುಶ್ಚಟ ಬಿಡಿಸುವ ಮತ್ತು ಆಪ್ತಸಮಾಲೋಚನಾ ಕೇಂದ್ರವನ್ನು ನಡೆಸುತ್ತಿರುವ ಓರ್ವ 65 ವರ್ಷ ವಯಸ್ಸಿನ ಹಿರಿಯ ನಾಗರಿಕರಾದ ಲಕ್ಷ್ಮಿನಾರಾಯಣ ಅವರನ್ನು ಸಂಪರ್ಕಿಸುತ್ತಾರೆ.

ಈ ಪೈಕಿ ಬಹುಪಾಲು ರೋಗಿಗಳು ಆಸ್ಪತ್ರೆಗಳಲ್ಲಿ ಅಥವಾ ನಗರದ ರಸ್ತೆಗಳಲ್ಲಿ ತಮ್ಮ ಕುಟುಂಬಸ್ಥರು ಅಥವಾ ಹತ್ತಿರದವರು ಬಿಟ್ಟು ಹೋಗಿರುವಂತಹ ಮದ್ಯಪಾನ ವ್ಯಸನಿಗಳು ಅಥವಾ ಮಾದಕ ದ್ರವ್ಯ ವ್ಯಸನಿಗಳಾಗಿದ್ದಾರೆ. ಲಕ್ಷ್ಮಿನಾರಾಯಣ ಅವರು ಇಂತಹ ನಿರ್ಗತಿಕರಿಗೆ ತಮ್ಮ ಕೇಂದ್ರದಲ್ಲಿ ಸ್ಥಳಾವಕಾಶ ನೀಡಿ ಆರೈಕೆ ಮಾಡುತ್ತಿದ್ದಾರೆ.

ಅವರು ನಿಮ್ಹಾನ್ಸ್ ಆಸ್ಪತ್ರೆಯಿಂದ ರೋಗಿಯ ಅಗತ್ಯ ಔಷಧಗಳನ್ನು ಪಡೆದು, ರೋಗಿ ಮತ್ತು ಅವರ ಸಂಬಂಧಿಕರು ಇಬ್ಬರಿಗೂ ಸೂಕ್ತ ಆಪ್ತಸಮಾಲೋಚನೆ ನೀಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಇಂತಹ ರೋಗಿಗಳ ಕುಟುಂಬಸ್ಥರ ಮನವೊಲಿಸಿ ರೋಗಿಯನ್ನು ಪುನಃ ತಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳುವಂತೆ ಮಾಡುತ್ತಾರೆ.

ಲಕ್ಷ್ಮಿನಾರಾಯಣ ಅವರು ಈವರೆಗೂ, ತಮ್ಮ ಬಳಿ ಬಹುತೇಕ ಚೇತರಿಸಿಕೊಂಡಿರುವಂತಹ ಮೂವರು ಮನೋರೋಗಿಗಳನ್ನು ಅವರ ಕುಟುಂಸ್ಥರೊಂದಿಗೆ ಸೇರಿಸುವಲ್ಲಿ ಸಫಲರಾಗಿದ್ದಾರೆ. ಲಕ್ಷ್ಮಿನಾರಾಯಣ ಅವರಿಗೆ ಈ ಕೆಲಸ ಅಚ್ಚುಮೆಚ್ಚು ಮತ್ತು ಈ ರೋಗಿಗಳ ಸಂಬಂಧಿಕರನ್ನು ಪತ್ತೆ ಹಚ್ಚುವುದು ಅವರಿಗೆ ಒಂದು ಸವಾಲಾಗಿದೆ.

ಸುಮಾರು ಮೂರು ತಿಂಗಳ ಹಿಂದೆ ನಿಮ್ಹಾನ್ಸ್ ನ ಅಧಿಕಾರಿಗಳು ಲಕ್ಷ್ಮಿನಾರಾಯಣ ಅವರಿಗೆ ಸಿಜೊರ್ಫರೆನಿಕ್ ಖಾಯಿಲೆಯಿಂದ ಬಳಲುತ್ತಿರುವ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವಂತಹ ರಮೇಶ್ ಕುಮಾರ್ ಎಂಬುವವರ ಬಗ್ಗೆ ತಿಳಿಸಿದರು. ರಮೇಶ್ ಅವರ ಕುಟುಂಬಸ್ಥರು ಈತನನ್ನು ದೂರ ಮಾಡಿದ್ದರು. ಹಾಗಾಗಿ ಆಸ್ಪತ್ರೆಯ ಅಧಿಕಾರಿಗಳಿಗೆ ಇವರನ್ನು ಎಲ್ಲಿಗೆ ಕಳುಹಿಸುವುದು ಎಂದು ಚಿಂತೆಯಾಗಿತ್ತು. ಲಕ್ಷ್ಮಿನಾರಾಯಣ ಅವರು ಸೆಪ್ಟೆಂಬರ್ ೩ರಂದು ರಮೇಶ್ ಕುಮಾರ್ ಅವರನ್ನು ತಮ್ಮ ಸುಮನಾ ಎಲ್ಲೆನ್ ಕೇಂದ್ರಕ್ಕೆ ಕರೆತಂದು ನಿಮ್ಹಾನ್ಸ್ನಲ್ಲಿ ಅವರಿಗೆ ನೀಡಿದ್ದಂತಹ ಔಷಧಗಳನ್ನು ನೀಡುವುದರ ಜೊತೆಗೆ, ಅವರಿಗೆ ಮೂರು ತಿಂಗಳ ಕಾಲ ಆಪ್ತಸಮಾಲೋಚನೆ ಸೇವೆ ಒದಗಿಸಿದರು. “ರಮೇಶ್ ಅವರನ್ನು ಇಲ್ಲಿಗೆ ಕರೆ ದುಕೊಂಡು ಬಂದ ನಂತರ ನಾನು ಆತನ ವಯಸ್ಸು ಎಷ್ಟು ಎಂದು ಕೇಳಿದರೆ ಆತ ನನಗೆ ೨ ವರ್ಷ, ೯ ತಿಂಗಳು, ೧೮ ದಿನ ಎಂದು ಹೇಳುತ್ತಿದ್ದ, ಮತ್ತು ನಾನು ದೇವರ ಮಗ ಎನ್ನುತ್ತಿದ್ದ. ಆದರೆ ನಿರಂತರ ಆಪ್ತಸಮಾಲೋಚನೆ ಮತ್ತು ಕ್ರಮಬದ್ಧವಾಗಿ ಔಷಧಗಳನ್ನು ನೀಡುತ್ತಾ ಬಂದ ನಂತರ ಆತ ತಾನು ಓರ್ವ ೩೪ ವರ್ಷ ವಯಸ್ಸಿನ ಯುವಕನೆಂದು, ಸ್ನಾತಕೋತ್ತರ ವಾಣಿಜ್ಯ ಪದವೀದರನೆಂದು ತಿಳಿಸಿದ. ಆತ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪೊಲುವಲ್ಲಿ ತಾಂಡಾದ ನಿವಾಸಿ,” ಎಂದು ಲಕ್ಷ್ಮಿನಾರಾಯಣ ಅವರು ತಿಳಿಸುತ್ತಾರೆ.

ರಮೇಶ್ ಅವರ ಕುಟುಂಬಸ್ಥರ ವಿವರಗಳನ್ನು ನಿಮ್ಹಾನ್ಸ್ ಆಸ್ಪತ್ರೆಯಿಂದ ಸಂಗ್ರಹಿಸಿದ ಲಕ್ಷ್ಮಿನಾರಾಯಣ ಅವರು ಕುಟುಂಬಸ್ಥರನ್ನು ಸಂಪರ್ಕಿಸಿದರು. ಆದರೆ ಆರಂಭದಲ್ಲಿ ಅವರು ಲಕ್ಷ್ಮಿನಾರಾಯಣ ಅವರ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಲೇ ಇರಲಿಲ್ಲವಂತೆ, ಏಕೆಂದರೆ ಅವರಿಗೆ ಲಕ್ಷ್ಮಿನಾರಾಯಣ ಅವರು ಚಿಕಿತ್ಸೆಗೆ ಹಣ ಕೇಳಬಹುದು ಎಂದು ಅನುಮಾನವಿತ್ತಂತೆ. “ಆದರೆ ನಾನು ನನ್ನ ಪ್ರಯತ್ನವನ್ನು ಬಿಡಲಿಲ್ಲ. ನಿರಂತರವಾಗಿ ಅವರಿಗೆ ಕರೆ ಮಾಡಿ ಅವರಿಗೆ ನಾನು ಹಣಕ್ಕಾಗಿ ಕರೆ ಮಾಡುತ್ತಿಲ್ಲ, ಬದಲಿಗೆ ರಮೇಶ್ ಅವರು ಬೇಗ ಚೇತರಿಸಿಕೊಳ್ಳಲು ಅವರ ಸಂಬಂಧಿಕರ ಅಗತ್ಯವಿರುವುದಾಗಿ ತಿಳಿಸಿದೆ,” ಎಂದು ವಿವರಿಸಿದರು.

“ರಮೇಶ್ ಅವರ ಕುಟುಂಬಸ್ಥರು ಕೇವಲ ಒಂದೇ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು, ಅದೇನೆಂದರೆ ರಮೇಶ್ ಅವರಿಗೆ ಕ್ರಮಬದ್ಧವಾಗಿ ಔಷಧಗಳನ್ನು ನೀಡಬೇಕು, ಅಷ್ಟೇ,” ಎನ್ನುತ್ತಾರೆ ಲಕ್ಷ್ಮಿನಾರಾಯಣ ಅವರು.

ರಮೇಶ್ ಅವರ ತಂದೆ ಎರಡು ವಾರಗಳ ಹಿಂದಷ್ಟೇ ಮೃತಪಟ್ಟಿದ್ದು, ಇದರಿಂದಾಗಿ ರಮೇಶ್ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದರಂತೆ. “ಬೆಂಗಳೂರಿನಲ್ಲೇ ವಾಸಿಸುತ್ತಿರುವ ರಮೇಶ್ ಅವರ ಸಂಬಂಧಿಕರೊಬ್ಬರು ತಾವು ರಮೇಶನನ್ನು ಭೇಟಿ ಮಾಡಿ, ಗ್ರಾಮದಲ್ಲಿ ವಾಸಿಸುತ್ತಿರುವಂತಹ ಅವರ ತಾಯಿ ಮತ್ತು ಅಣ್ಣನ್ನು ಸಂಪರ್ಕಿಸಿ ರಮೇಶ್ ಅವರನ್ನು ತಮ್ಮೊಂದಿಗೆ ಮನೆಗೆ ಕರೆದುಕೊಂಡು ಹೋಗಲು ಮನವೊಲಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ,” ಎಂದು ಲಕ್ಷ್ಮಿನಾರಾಯಣ ಅವರು ಮಾಹಿತಿ ನೀಡಿದರು.

ಇದೇ ರೀತಿ ಲಕ್ಷ್ಮಿನಾರಾಯಣ  ಅವರು ಇನ್ನಿಬ್ಬರನ್ನು ಕುಟುಂಬಸ್ಥರೊಂದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರು ಈ ಲಕ್ಷ್ಮಿನಾರಾಯಾಣ?

ಈ ಹಿಂದೆ ಲಕ್ಷ್ಮಿನಾರಾಯಣ  ಅವರು ಸ್ವತಃ ಒರ್ವ ಮದ್ಯಪಾನವ್ಯಸನಿಯಾಗಿದ್ದು ತಮ್ಮ ಕುಟುಂಬಸ್ಥರೂ ಸಹ ಇವರನ್ನು ಮನೆಯಿಂದ ಆಚೆಗಟ್ಟಿದ್ದರಂತೆ. ಆಗ ಇವರನ್ನು ನಗರದಲ್ಲಿರುವ ಒಂದು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರು ೯೦ ದಿನಗಳ ಕಾಲ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡರು. ನಂತರ ಅದೇ ಕೇಂದ್ರದಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿದ ಲಕ್ಷ್ಮಿನಾರಾಯಣ ಅವರು, ಹೆಚ್‌ಐವಿ ಕೇಂದ್ರದ ಗೃಹ ಆರೈಕೆ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು.

೨೦೦೧ರಲ್ಲಿ ವರ್ಗೋನಗರದ ನಿವಾಸಿಯೊಬ್ಬರು ಇವರಿಗೆ ಖಾಲಿಯಿದ್ದಂತಹ ಒಂದು ಪೌಲ್ಟ್ರಿ ಫಾರಂ ಅನ್ನು ಬಾಡಿಗೆಗೆ ನೀಡಿದರಂತೆ. ಆರಂಭದಲ್ಲಿ ೨೦ ರೋಗಿಗಳಿಗೆ ಉಚಿತವಾಗಿ ಶಿಬಿರ ನಡೆಸುತ್ತಿದ್ದರು. ಆದರೆ ಇಂದು ಲಕ್ಷ್ಮಿನಾರಾಯಣ ಅವರು ತಮ್ಮ ಪುನರ್ವಸತಿ ಕೇಂದ್ರದಲ್ಲಿ ೪೩ ಮನೋರೋಗಿಳಿಗೆ ಆಶ್ರಯ ಕಲ್ಪಿಸಿದ್ದು, ಅವರೆಲ್ಲರೂ ಚೇತರಿಸಿಕೊಂಡಿರುವಂತಹ ವ್ಯಸನಿಗಳಾಗಿದ್ದಾರೆ. ಲಕ್ಷ್ಮಿನಾರಾಯಣ ಅವರು ಇವರೆಲ್ಲರನ್ನೂ ಅವರವರ ಕುಟುಂಬಸ್ಥರೊಂದಿಗೆ ಸೇರಿಸುವ ಪಣ ತೊಟ್ಟಿದ್ದಾರೆ. ಅವರಿಗೆ ಒಂದು ದೊಡ್ಡ ಸಲಾಂ ಹೇಳುತ್ತಾ ಅವರ ಪ್ರಯತ್ನ ಫಲಿಸಲಿ ಎಂದು ಹಾರೈಸೋಣ ಅಲ್ಲವೇ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: He – special –psychologist- Lakshminarayana