ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಿದ ಸಚಿವ ಡಾ. ನಾರಾಯಣಗೌಡ…

ಮಂಡ್ಯ ಮೇ 06,2021(ww.justkannada.in):  ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ತರಲು ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಮಾರ್ಗಸೂಚಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿಯನ್ನು ನೀಡಿದ್ದು, ಜಿಲ್ಲೆಯಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.jk

ಸಚಿವರು ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ,  ತಾಲೂಕುವಾರು ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿ, ಆಸ್ಪತ್ರೆಗಳಿಗೆ, ಕೋವಿಡ್ ಕೇರ್ ಸೆಂಟರ್ ಹಾಗೂ ಸ್ಟೆಪ್ ಅಪ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದು, ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಲು ಮುತುವರ್ಜಿವಹಿಸಿದ್ದಾರೆ. ಆದಾಗ್ಯೂ ಜಿಲ್ಲೆಯಲ್ಲಿ ದಿನೇ-ದಿನೇ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಹಾಗೂ ಮರಣ ಪ್ರಮಾಣವು ಸಹ ರಾಜ್ಯದ ಸರಾಸರಿಗಿಂತ ಹೆಚ್ಚಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಮತ್ತಷ್ಟು ಬಿಗಿ ಕ್ರಮಕ್ಕಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಬಗ್ಗೆ ತೀವ್ರ ನಿಗಾವಹಿಸಲು ಸರತಿಯಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು. ಅವರು ಸೋಂಕಿತರ ಯೋಗಕ್ಷೇಮ ಊಟ-ತಿಂಡಿ ಸರಬರಾಜು, ವೈದ್ಯಕೀಯ ಉಪಚಾರ ಇತ್ಯಾದಿಗಳು ಸೋಂಕಿತರಿಗೆ ಸರಿಯಾಗಿ ತಲುಪುತ್ತಿವೆ ಎಂಬುದನ್ನು ಖಾತ್ರಿಪಡಿಸಿಕೊಂಡು ಪ್ರತಿದಿನ ಸಚಿವರಿಗೆ ವರದಿ ನೀಡಬೇಕು. ಯಾವುದೇ ಕಾರಣಕ್ಕೂ ಸೋಂಕಿತರ ಅವಲಂಬಿತರನ್ನು ಆರೈಕೆಗಾಗಿ ನಿಯೋಜಿಸಬಾರದು.

ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯತೆ, ಪೂರೈಕೆ ಮತ್ತು ಅಗತ್ಯತೆ ಬಗ್ಗೆ ತೀವ್ರ ನಿವಹಿಸಲು ಹಾಗೂ ಹೆಚ್ಚುವರಿಯಾಗಿ ಆಕ್ಸಿಜಿನ್ ಬೆಡ್ ಅಗತ್ಯವಿದ್ದಲ್ಲಿ ಜಿಲ್ಲೆ, ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಮೇಲುಸ್ತುವಾರಿಯಾಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರನನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು.

ಜಿಲ್ಲೆಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಿ, ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿದ ನಂತರ ವ್ಯಕ್ತಿಯು ಕಡ್ಡಾಯವಾಗಿ ಫಲಿತಾಂಶ ಬರುವವರೆಗೆ ಹೋಮ್ ಐಸೋಲೇಷನ್‌ನಲ್ಲಿರಲು ಸೂಚಿಸಿ, ಸಂಬಂಧಪಟ್ಟ ಪಿಡಿಓ ಮತ್ತು ಕಂದಾಯ ನಿರೀಕ್ಷಕರು ಹಾಗೂ ಆಶಾಕಾರ್ಯಕರ್ತೆಯರು ಇವರ ಮೇಲೆ ನಿಗಾವಹಿಸಬೇಕು. ಹೋಮ್ ಐಸೋಲೇಷನ್‌ ನಲ್ಲಿರುವವರಿಗೆ ಅಗತ್ಯ ಔಷಧಿ/ಸಲಕರಣೆಗಳ ಕಿಟ್‌ನ್ನು ಕಡ್ಡಾಯವಾಗಿ ನೀಡಬೇಕು.

ಸೋಂಕಿನ ತೀವ್ರತೆ ಜಾಸ್ತಿ ಇರುವವರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸೋಂಕಿತ ವ್ಯಕ್ತಿಯ ಕುಟುಂಬವರನ್ನು ಹೋಮ್ ಕ್ವಾರಂಟೈನ್ ಮಾಡಿ ಅವರ  ಮೇಲ್ವಿಚಾರಣೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಆರ್‌ಡಿಪಿಆರ್ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮ / ವಾರ್ಡ್‌ಗೆ ಕಡ್ಡಾಯವಾಗಿ ಭೇಟಿ ನೀಡಲು ಸೂಚಿಸಬೇಕು.

ಇನ್ನು 15 ದಿನಗಳು ಸೋಂಕಿನ ತೀವ್ರತೆ ಜಾಸ್ತಿಯಾಗುವ ಸಂಭವವಿರುವುದರಿಂದ 15 ದಿನಗಳಿಗೆ ಕಲ್ಪಿಸಬೇಕಾದ ವ್ಯವಸ್ಥೆ ಅಗತ್ಯವಿರುವ ಹೆಚ್ಚುವರಿ ಬೆಡ್‌ಗಳು, ಆಕ್ಸಿಜನ್, ಬೆಡ್ ಗಳು, ಆಕ್ಸಿಜನ್ ಪೂರೈಕೆ, ಔಷಧಿಗಳು, ಸಿಬ್ಬಂದಿ ವ್ಯವಸ್ಥೆ, ವೈದ್ಯೋಪಚಾರಕ್ಕೆ ಅವಕಾಶ್ಯವಿರುವ ಪರಿಕರಗಳು, ವಾಹನ ವ್ಯವಸ್ಥೆ ಇತ್ಯಾದಿ ವ್ಯವಸ್ಥೆಗೊಳಿಸಲು ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು.

ಕೋವಿಡ್ ಕೇರ್ ಸೆಂಟರ್,  ವಾರ್ ರೂಮ್‌ನ್ನು 24×7 ಕಾರ್ಯನಿರ್ವಹಿಸುವಂತೆ ವ್ಯವಸ್ಥೆಗೊಳಿಸಬೇಕು. ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಕೊರೊನಾ ಸೋಂಕಿತರ ಮೇಲ್ವಿಚಾರಣೆಗೆ,  ಉಪಚಾರಕ್ಕೆ ಕೈಗೊಂಡಿರುವ ಮಾಹಿತಿಯನ್ನು  SMS ಮೂಲಕ ಅಥವಾ ದೂರವಾಣಿ ಕರೆ  ಮೂಲಕ ಅವರ ಕುಟುಂಬಸ್ಥರಿಗೆ ನೀಡಬೇಕು. ಇದಕ್ಕಾಗಿ ಪಾಳಿಯಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ ಕೂಡಲೆ ನಿಯೋಜಿಸಬೇಕು. ಸಹಾಯವಾಣಿ ಕೇಂದ್ರದಲ್ಲಿ ಆಸ್ಪತ್ರೆಗಳ ಮಾಹಿತಿ, ಬೆಡ್‌ಗಳ ವ್ಯವಸ್ಥೆ, ಶಿಷ್ಟಾಚಾರದ ಮಾಹಿತಿಯನ್ನು ನೀಡಲು ಈ ತಂಡಕ್ಕೆ ಅಗತ್ಯ ತರಬೇತಿ, ಮಾಹಿತಿ ನೀಡಬೇಕು.

ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಬಿಗಿ ಕ್ರಮಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಹೆಚ್ಚಿನ ಜವಬ್ದಾರಿವಹಿಸಬೇಕು.

ಜಿಲ್ಲೆಯಾದ್ಯಂತ ಬಿಗಿ ಕ್ರಮದ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೊಳಗಾಗುವ ಜನರನ್ನು ಗುರುತಿಸಲು ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಸಬಲೀಕರಣ  ಇಲಾಖೆಯ ಅಧಿಕಾರಿಗಳನ್ನು ತಾಲೂಕುವಾರು ನಿಯೋಜಿಸಬೇಕು. ಅಲ್ಲದೆ ಸಂಕಷ್ಟಕ್ಕೀಡಾಗಿರುವವರನ್ನು ಗುರುತಿಸಿ, ಅವರ ಡೇಟಾ ಸಂಗ್ರಹಿಸಿ ದಾಖಲೀಕರಣ ಪ್ರಕ್ರಿಯೆಯನ್ನು ಕೂಡಲೇ ಮಾಡಬೇಕು. ತೀವ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಅಗತ್ಯ ನೆರವನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆ  ಅಥವಾ ದಾನಿಗಳಿಂದ ಕೊಡಿಸುವ ಕಾರ್ಯ ಮಾಡಬೇಕು. guidance –corona-control-  Minister -Narayana Gowda-mandya

ಕೋವಿಡ್ -19 ನಿಯಂತ್ರಣ, ಪರಿಹಾರ, ವ್ಯವಸ್ಥೆಗಳ ನಿರ್ವಹಣೆಗೆ ನಿಯೋಜಿಸಲಾಗಿರುವ ನೋಡಲ್ ಅಧಿಕಾರಿಗಳಿಗೆ ಹೆಚ್ಚಿನ ಜವಬ್ದಾರಿ ನೀಡಬೇಕು. ಜನಸಾಮಾನ್ಯರು ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಅವರ ಮೊಬೈಲ್ ಸಂಖ್ಯೆಯನ್ನು ದಿನಪತ್ರಿಕೆ, ಸೋಷಿಯಲ್ ಮಿಡಿಯಾದಲ್ಲಿ ಪ್ರಕಟಿಸಬೇಕು. ಪ್ರತಿನಿತ್ಯ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಕೋರಲಾಗುವ ಬೇಡಿಕೆಗಳ ವಿವರವನ್ನು ತಮ್ಮ ಕಛೇರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಸಚಿವ ನಾರಾಯಣಗೌಡ ಸೂಚನೆ ನೀಡಿದ್ದಾರೆ.

Key words: guidance –corona-control-  Minister -Narayana Gowda-mandya