ಚಿತ್ರದುರ್ಗದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್.

ಬೆಂಗಳೂರು, ಫೆಬ್ರವರಿ,18,2022(www.justkannada.in): ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯದ ಬಲವರ್ಧನೆಗಾಗಿ ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವ ಕಾರ್ಯದಲ್ಲಿ ಇನ್ನಷ್ಟು ಪ್ರಗತಿ ಕಂಡುಬಂದಿದ್ದು, ಈಗ 500 ಕೋಟಿ ರೂ. ವೆಚ್ಚದ ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಈ ಮಹತ್ವದ ಹೆಜ್ಜೆಯಿಂದಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕಾರ್ಯಕ್ಕೆ ಮತ್ತಷ್ಟು ಆದ್ಯತೆ ದೊರೆತಿದೆ ಎಂದು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ 100 ಎಂಬಿಬಿಎಸ್ ಸೀಟುಗಳ ಕಾಲೇಜು ಆರಂಭವಾಗಲಿದ್ದು, ನೂತನ ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ. ಈ ನಡುವೆಯೇ, ಚಿತ್ರದುರ್ಗದಲ್ಲಿ 150 ಎಂಬಿಬಿಎಸ್ ಸೀಟುಗಳನ್ನು ಹೊಂದಲಿರುವ ‘ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ’ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಿವಿಲ್ ಕಾಮಗಾರಿ ಸೇರಿ ಒಟ್ಟು 500 ಕೋಟಿ ರೂ. ಖರ್ಚಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜನಸಂಖ್ಯೆಗೆ ಅನುಗುಣವಾಗಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿರುವ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಜೊತೆ ಹೊಸದಾಗಿ 4 ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 100 ಎಂಬಿಬಿಎಸ್ ಸೀಟುಗಳ ಪ್ರವೇಶ ಮಿತಿಯೊಂದಿಗೆ 2022-23 ನೇ ಸಾಲಿಗೆ ಲೆಟರ್ ಆಫ್ ಇಂಟೆಂಟ್ ನೀಡಲಾಗಿದೆ. ಇದರ ಜೊತೆಗೆ ಈಗ ಚಿತ್ರದುರ್ಗದಲ್ಲೂ ಕಾಲೇಜು ಕಟ್ಟಡದ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಈ ಮೂಲಕ ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯರಾಗುವ ಕನಸು ನನಸಾಗಲಿದೆ. ಅಷ್ಟೇ ಅಲ್ಲದೆ, ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡ ಆಸ್ಪತ್ರೆಗಳಲ್ಲಿ ಬಡವರಿಗೆ ಉನ್ನತ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಪ್ರತಿ 1,000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ  ಕರ್ನಾಟಕದಲ್ಲಿ 1,800 ಜನಸಂಖ್ಯೆಗೆ ಒಬ್ಬ ವೈದ್ಯರ ಲಭ್ಯತೆ ಇದೆ. ಈ ಅಸಮತೋಲನ ಸರಿಪಡಿಸಲು ಹಾಗೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇದೇ ಪ್ರಯತ್ನದ ಭಾಗವಾಗಿ ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

2014-15 ಸಾಲಿನ ಆಯವ್ಯಯದಲ್ಲಿನ ಘೋಷಣೆಯಂತೆ ಚಿತ್ರದುರ್ಗದಲ್ಲಿ 150 ಸೀಟುಗಳ ಎಂಬಿಬಿಎಸ್ ಕಾಲೇಜನ್ನು 2015-16ರಲ್ಲೇ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಆದರೆ 2013-14 ರ ಆರ್ಥಿಕ ವರ್ಷದಲ್ಲಿ ಕಲಬುರ್ಗಿ, ಗದಗ, ಕೊಪ್ಪಳ, ಕಾರಾವಾರ, ಕೊಡಗು ಮತ್ತು ಚಾಮರಾಜನಗರದಲ್ಲಿ ಹೊಸ 6 ಮೆಡಿಕಲ್  ಕಾಲೇಜುಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಹೊಂದಿಸಿಕೊಳ್ಳಬೇಕಾಗಿದ್ದರಿಂದ ತುಮಕೂರು, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮುಂದೂಡಲಾಗಿತ್ತು. 2021-22ನೇ ಸಾಲಿನ ಬಜೆಟ್ ನಲ್ಲಿ, ಚಿತ್ರದುರ್ಗ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು ಎಂದು ಸಚಿವ ಸುಧಾಕರ್ ವಿವರಿಸಿದ್ದಾರೆ.

ಚಿತ್ರದುರ್ಗದ ಮೆಡಿಕಲ್ ಕಾಲೇಜನ್ನು 2023-24 ನೇ ಸಾಲಿನಿಂದ ಆರಂಭಿಸಲು ಅಗತ್ಯ ಪ್ರಕ್ರಿಯೆಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ. ಇದಕ್ಕೆ ಪೂರಕವಾಗಿ ಸಿದ್ಧತೆ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರುತ್ತಿದ್ದು, ಈ ಹೊಸ ಕಾಲೇಜು ನಿರ್ಮಾಣ ಕೂಡ ಸುಧಾರಣೆಯ ಭಾಗವಾಗಿದೆ ಎಂದು ಸಚಿವ ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.

Key words: Green signal – new -medical college – Chitradurga.