‘ ಮಾತು ಮನೆಕೆಡಿಸಿದ್ರೆ’ , ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿತು..

graduate-election-congress-win-bjp-defeated

 

ಮೈಸೂರು, ಜೂ.16, 2022 : (www.justkannada.in news) : ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆ ಬೀರುವ ಮೂಲಕ ಹೊಸ ದಾಖಲೆ ಬರೆದರೆ, ಗೆಲುವಿನ ಭಾರಿ ನಿರೀಕ್ಷೆಯಲ್ಲಿದ್ದ ಬಿಜೆಪಿ ನೆಲಕಚ್ಚಿದೆ.

ಈ ತನಕ ನಡೆದ ದ.ಪದವೀಧರ ಕ್ಷೇತ್ರದ ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿರಲಿ, ಗೆಲುವಿನ ಸನಿಹಕ್ಕೂ ಹೋಗಲಾಗಿರಲಿಲ್ಲ. ಆದರೆ ಈಗ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ, ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಪದವೀಧರ ಕ್ಷೇತ್ರದಲ್ಲಿ ಈ ತನಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳದ್ದೇ ಕಾರುಬಾರು. ಇವೆರೆಡರ ನಡುವೆಯೇ ಪೈಪೋಟಿ ನಡೆಯುತ್ತಿತ್ತು. ಇಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿತ್ತು. ಆದರೆ ಈ ಬಾರಿ ಪದವೀಧರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಕೈ ಹಿಡಿಯುವ ಮೂಲಕ ಮಧು ಮಾದೇಗೌಡ ಗೆಲುವಿನ ನಗೆ ಬೀರುವಂತೆ ಮಾಡಿದ್ದಾರೆ.

ಮೊದಲ ಪ್ರಾಶಸ್ತ್ಯದ ಮತ ಎಣಿಕೆ ವೇಳೆ ಯಾವೊಬ್ಬ ಅಭ್ಯರ್ಥಿಯೂ ನಿಗಧಿತ ಗುರಿ ಮುಟ್ಟದ ಕಾರಣ, ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆಗೆ ಮುಂದಾಗಲಾಯಿತು. ಈ ವೇಳೆ ಸಹ ಕಾಂಗ್ರೆಸ್ ಅಭ್ಯರ್ಥಿಯೇ ಎಲ್ಲಾ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡರು. ಎಲಿಮಿನೇಷನ್ ಸುತ್ತಿನಲ್ಲಿ ಅತಿ ಹೆಚ್ಚು ಎರಡನೇ ಪ್ರಾಶಸ್ತ್ಯ ಮತಗಳನ್ನು ಪಡೆದ ಕಾಂಗ್ರೆಸ್ ಕಡೆಗೆ ಗೆಲುವಿನ ನಗೆ ಬೀರಿತು.

ಮಾತೇ ಮೃತ್ಯು :

ಬಿಜೆಪಿ ನಾಯಕರ ಅನಗತ್ಯ ಹೇಳಿಕೆಗಳು ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾಣಿಕೆ ನೀಡಿವೆ ಎಂದು ಪಕ್ಷದದಲ್ಲೇ ಚರ್ಚೆಗಳು ಆರಂಭವಾಗಿದೆ. ಚುನಾವಣೆಯ ಹೊಸ್ತಿಲಲ್ಲೇ ವಿರೋಧ ಪಕ್ಷದ ಮುಖಂಡರನ್ನು ಟೀಕಿಸುವ ಭರದಲ್ಲಿ ಬಿಜೆಪಿಯ ಕೆಲವರು ನಾಲಿಗೆ ಹರಿಯ ಬಿಟ್ಟದ್ದು ಸಹ ಚುನಾವಣೆಯಲ್ಲಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ.
ಜತೆಗೆ ನಾಯಕರ ಒಗ್ಗಟಿನ ಕೊರತೆ ಸಹ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರನ್ನು ಒಲ್ಲದ ವರ್ಗ ಸಹ ಪಕ್ಷದಲ್ಲಿತ್ತು. ಟಿಕೆಟ್ ವಂಚಿತರು ಸಹ ಪರೋಕ್ಷವಾಗಿ ಈ ವರ್ಗಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಪರಿಣಾಮ ಈ ವರ್ಗ ಮೇಲ್ನೊಟಕ್ಕೆ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಕಂಡರು, ಆಂತರಿಕವಾಗಿ ಅಂತರ ಕಾಯ್ದುಕೊಂಡಿತ್ತು ಎಂಬುದು ಈಗ ಸೋಲಿನ ಬಗೆಗೆ ನಡೆಯುತ್ತಿರುವ ವ್ಯಾಖ್ಯಾನದ ಅಂಶ.

key words : graduate-election-congress-win-bjp-defeated