ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಮಾಹಿತಿ ಮುಚ್ಚಿಟ್ಟಿದೆ- ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪ.

ಬೆಂಗಳೂರು,ಸೆಪ್ಟಂಬರ್,11,2021(www.justkannada.in):  ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ವೈಫಲವನ್ನು ಮುಚ್ಚಿಕೊಳ್ಳಲು ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ರಾಮಲಿಂಗರೆಡ್ಡಿ, ಜನನ ಮತ್ತು ಮರಣ ನೋಂದಣಿ ಕಚೇರಿಯಿಂದ ಮಾಹಿತಿ ಪಡೆದಿದ್ದೇವೆ. 2018ರ 2,69,028 ಮಂದಿ, 2019ರಲ್ಲಿ 2,79,835, 2020ರಲ್ಲಿ 2,64,029, 2021ರಲ್ಲಿ 4,26,790 ಮಂದಿ ಜುಲೈ ತಿಂಗಳವರೆಗೂ ಮೃತಪಟ್ಟಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚಾದ 2020ರಲ್ಲಿ ಸರಾಸರಿಗಿಂತ 30 ಸಾವಿರ, 2021ರಲ್ಲಿ 1.62 ಲಕ್ಷ ಜನ ಹೆಚ್ಚುವರಿಯಾಗಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣಗಳೇನು? ಎಂದು ಪ್ರಶ್ನಿಸಿದ್ದಾರೆ.

ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ 7 ತಿಂಗಳಲ್ಲಿ 1 ಲಕ್ಷ 62 ಸಾವಿರ ಜನ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಸರ್ಕಾರಿ ಲೆಕ್ಕದ ಪ್ರಕಾರ ಕರೊನಾದಿಂದ 37 ಸಾವಿರದ 18 ಮಂದಿ ಮಾತ್ರ  ಸಾವನ್ನಪ್ಪಿರುವುದು. ಹಾಗಾದರೇ ಹೆಚ್ಚುವರಿಯಾಗಿ ಇಷ್ಟು ಜನ ಹೇಗೆ ಮೃತಪಟ್ಟಿದ್ದಾರ ಎಂದು  ಸರ್ಕಾರ ಬಹಿರಂಗಪಡಿಸಬೇಕು ಎಂದು ರಾಮಲಿಂಗರೆಡ್ಡಿ ಆಗ್ರಹಿಸಿದ್ದಾರೆ.

Key words: Govt –hides- information – covid’s death – KPCC president -Ramalingareddy