ಸರಕಾರದ ಶಾಲೆ ಆರಂಭ ನಿರ್ಧಾರ : ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

kannada t-shirts

ಬೆಂಗಳೂರು,ಅಕ್ಟೋಬರ್,09,2020(www.justkannada.in) : ಕೊರೋನಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಉಳಿದೆಡೆಗಿಂತ ಕರ್ನಾಟಕದಲ್ಲಿ ಭೀಕರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ, ಶಾಲೆಗಳನ್ನು ಯಾವ ಕಾರಣಕ್ಕೂ ತೆರೆಯಬಾರದೆಂದು ಆಗ್ರಹಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.jk-logo-justkannada-logo

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆಗಳನ್ನು ತೆರೆಯುವ ಕುರಿತಂತೆ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರಕ್ಕೆ ಪ್ರತಿಯಾಗಿ, ಹಿಂದೆ ವಿವಿಧ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಸ್ವತ: ನಾನೇ ಬೆಂಬಲಿಸಿದ್ದೆ. ಆದರೆ ಇಂದಿನ ಪರಿಸ್ಥಿತಿಯೆ ಬೇರೆಯಾಗಿದೆ. ಹೀಗಾಗಿ, ಶಾಲೆಗಳ ಆರಂಭ ಕೊರೊನಾ ನಿಯಂತ್ರಣವಾಗುವವರೆಗೆ ಬೇಡ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಜೀವ ಉಳಿಸಿಕೊಳ್ಳಬೇಕೇ ಹೊರತು ಉಳಿದೆಲ್ಲ ನಗಣ್ಯ

ಕೊರೊನಾ ಟೆಸ್ಟ್‍ಗಳ ಸಂಖ್ಯೆ ಹೆಚ್ಚಿಸಿದಂತೆಲ್ಲಾ ಪ್ರಕರಣಗಳ ಸಂಖ್ಯೆಯೂ ಹೆಚ್ಚು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ತಜ್ಞರ ಮಾತುಗಳ ಪ್ರಕಾರ ಈ ವರ್ಷ ಜೀವ ಉಳಿಸಿಕೊಳ್ಳಬೇಕೇ ಹೊರತು ಉಳಿದೆಲ್ಲ ನಗಣ್ಯವೆಂದು ಭಾವಿಸಬೇಕಿದೆ.  ನಗರ ಪ್ರದೇಶಗಳ ಖಾಸಗಿ ಶಾಲೆಗಳ ಮಕ್ಕಳಿಗೆ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಕೂಡ ಅಗತ್ಯ ಎಂದಿದ್ದಾರೆ.

ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿ

Government,School,Initial,Decision,Former CM Siddaramaiah,expressed,views,letter

ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಸರ್ಕಾರ ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ. ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದಿನ ತರಗತಿಗಳಿಗೆ ಕಳುಹಿಸಬೇಕೆಂದು ಮತ್ತು ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೊಮ್ಮೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಬಹುದೆಂದು ಸಲಹೆ ನೀಡಿದ್ದಾರೆ.

ಮಾಸ್ಕ್ ಹಾಕಿಕೊಳ್ಳುವಲ್ಲಿ, ಸ್ಯಾನಿಟೈಸರ್ ಬಳಸುವಲ್ಲಿ, ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರಜ್ಞಾವಂತರೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವೆಲ್ಲವನ್ನೂ ಮಕ್ಕಳಿಂದ ನಿರೀಕ್ಷಿಸುವುದು ಅಸಾಧ್ಯ. ಅಲ್ಲದೆ ದುಡಿಯುವ ಕುಟುಂಬಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಬಹುಪಾಲು ಅಜ್ಜ-ಅಜ್ಜಿಯರು. ಮಕ್ಕಳು ಶಾಲೆಗೆ ಹೋಗಿ ಕೊರೋನಾ ಅಂಟಿಸಿಕೊಂಡು ಬಂದರೆ ಮಕ್ಕಳು ಸಮಸ್ಯೆಗೆ ತುತ್ತಾಗುವುದರ ಜೊತೆಗೆ, ಹಿರಿಯ ಜೀವಗಳು ಮತ್ತು ಇತರೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುವವರಿಗೆ ತೀವ್ರ ರೀತಿಯಲ್ಲಿ ಸೋಂಕು ವ್ಯಾಪಿಸಿ ಸುನಾಮಿ ಸ್ವರೂಪದ ಸಾವು ನೋವುಗಳನ್ನು ಸಮಾಜ ಎದುರಿಸಬೇಕಾಗುತ್ತದೆ.  ಈಗಾಗಲೇ ಅಮೇರಿಕಾ ಮತ್ತು ಯುರೋಪಿನ ಕೆಲವು ದೇಶಗಳು ಶಾಲೆಗಳನ್ನು ತೆರೆದು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಂಡಿರುವ ಉದಾಹರಣೆಗಳು ಕಣ್ಣ ಮುಂದೆ ಎಂದು ವಿವರಿಸಿದ್ದಾರೆ.

ಜಿಲ್ಲಾಡಳಿತವು ಕ್ರೀಯಾಶಿಲರಾಗಿ ಸಾಮಾಜಿಕ ಪಿಡುಗು ತಡೆಯಲಿ

ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿವೆ ಎಂಬ ನಿಮ್ಮ ಮಾತಿನಲ್ಲಿ ಅನುಮಾನಗಳಿಲ್ಲ. ಆದರೆ, ಜಿಲ್ಲಾಡಳಿತಗಳು ನಿದ್ದೆಯಿಂದ ಎಚ್ಚೆತ್ತು ಕ್ರಿಯಾಶೀಲವಾದರೆ, ದುಡಿಯುವ ಕುಟುಂಬಗಳಿಗೆ ದುಡಿಯುವ ಅವಕಾಶಗಳನ್ನು ಸರ್ಕಾರವು ಹೆಚ್ಚಿಸಿ ಅವರ ಕೈತುಂಬಾ ಹಣ ಇರುವಂತೆ ನೋಡಿಕೊಂಡರೆ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ತಪ್ಪು ನಿರ್ಧಾರದಿಂದ ಸಾವಾದರೆ ಅದು ಸಮಾಜ ನಡೆಸಿದ ಕಗ್ಗೊಲೆ

ಒಂದು ಸಮಸ್ಯೆಯನ್ನು ಎದುರಿಸಲು ಮಕ್ಕಳನ್ನು ಯಮನ ಬಾಯಿಗೆ ತಳ್ಳುವುದನ್ನು ಯಾವ ಸೂಕ್ಷ್ಮಮತಿಯಾದ ಮನುಷ್ಯನಿಂದಲೂ ಊಹಿಸಿಕೊಳ್ಳಲಾಗದು. ಸರ್ಕಾರದ ನಿರ್ಲಕ್ಷ್ಯದಿಂದ ಮತ್ತು ತಪ್ಪು ನಿರ್ಧಾರಗಳ ಕಾರಣದಿಂದಾಗಿ ಮೃತಪಟ್ಟ ಮಗುವಿನ ಸಾವು ಅದು ಕೇವಲ ಸಾವು ಆಗಿರುವುದಿಲ್ಲ, ಸಮಾಜ ನಡೆಸಿದ ಕಗ್ಗೊಲೆಯಾಗುತ್ತದೆ. ಮೃತಪಟ್ಟ ಮಗುವಿನ ಕುಟುಂಬದ ನೋವನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುವುದಿಲ್ಲ. ಯಾವ ಕಾರಣಕ್ಕೂ ಹೀಗೆ ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.

key words : Government-School-Initial-Decision-Former CM Siddaramaiah -expressed-views-letter

website developers in mysore