ಕರ್ನಾಟಕದ ಈ ಸರ್ಕಾರಿ ಶಾಲಾ ಶಿಕ್ಷಕಿಯ ವಿದ್ಯಾರ್ಥಿ ಪರ ಕಾಳಜಿ ಇತರರಿಗೆ ಮಾದರಿ.

kannada t-shirts

ಬೆಂಗಳೂರು, ಜೂನ್ 15, 2021(www.justkannada.in): ಚಿಕ್ಕಮಗಳೂರು ಜಿಲ್ಲೆಯ ಯಲಗುಡಿಗೆ ಒಂದು ಪುಟ್ಟ ಗ್ರಾಮ. ಈ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಹೆಸರಿಗೂ ಇತ್ತೀಚೆಗೆ ಒಂದು ಪತ್ರ ಬಂತು. ಅದರಿಂದ ಅವರೆಲ್ಲರೂ ಬಹಳ ಆಶ್ಚರ್ಯಚಕಿತರಾದರು!jk

ಅದೇನೆಂದು ನೀವು ಯೋಚಿಸುತ್ತಿರುವಿರಾ?! ಸ್ವಲ್ಪ ತಡೆಯಿರಿ. ಮೊದಲು ಆ ಶಾಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಈ ಸರ್ಕಾರಿ ಪ್ರಾಥಮಿಕ ಶಾಲೆ ಚಿಕ್ಕಮಗಳೂರು ಜಿಲ್ಲೆಯ ಒಂದು ಪುಟ್ಟ ಗ್ರಾಮದಲ್ಲಿದೆ. ಒಂದರಿಂದ ಐದನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಹಾಗೂ ಒಟ್ಟು 16 ಮಕ್ಕಳಿದ್ದಾರೆ. ಕೋವಿಡ್‌ನಿಂದಾಗಿ ರಾಜ್ಯದ ಎಲ್ಲಾ ಶಾಲೆಗಳೂ ಮುಚ್ಚಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಅಲ್ಲವೇ? ಆದರೆ ಇತ್ತೀಚೆಗೆ ಶಾಲೆಯಿಲ್ಲದೆ ತಮ್ಮ ತಮ್ಮ ಮನೆಗಳಲ್ಲಿ ಕಾಲ ಕಳೆಯುತ್ತಿರುವಂತಹ ಈ ಶಾಲೆಯ ಮಕ್ಕಳ ಮನೆಗಳಿಗೆ ಒಂದೊಂದು ಪತ್ರ ಬಂತು. ಮಕ್ಕಳ ಜೊತೆಗೆ ಆಶ್ಚರ್ಯಚಕಿತರಾದ ಪೋಷಕರು ಅದೇನೆಂದು ಓದಿದಾಗ ತಿಳಿದು ಬಂದದ್ದೇನೆಂದರೆ ಆ ಶಾಲೆಯ ಓರ್ವ ಶಿಕ್ಷಕಿ ಈ ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಮಕ್ಕಳ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಲು ಮಕ್ಕಳಿಗೆ ಬರೆದಿರುವಂತಹ ಪತ್ರವಾಗಿತ್ತು. ಈ ಪುಟ್ಟ ಗ್ರಾಮದ ಶಾಲಾ ಮಕ್ಕಳಿಗೆ ಹಿಂದೆಂದೂ ಯಾರೂ ಪತ್ರವನ್ನೇ ಬರೆದಿರಲಿಲ್ಲ!

ಈಗ ಶಿಕ್ಷಕಿಯ ಕುರಿತು ತಿಳಿಯೋಣ. ಆ ಶಿಕ್ಷಕಿಯ ಹೆಸರು ಗೀತಾ ಕೆ.ಹೆಚ್. ಆಕೆ ಈ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ, ಅಂದರೆ ಕಳೆದ ಒಂದು ವರ್ಷದಿಂದಲೂ ಕೊರೋನಾ ಕಾರಣದಿಂದಾಗಿ ಶಾಲೆಗಳು ಮುಚ್ಚಿದ್ದು, ಈ ಕಾರಣದಿಂದಾಗಿ ಆಕೆ ತನ್ನ ಶಾಲೆಯ ವಿದ್ಯಾರ್ಥಿಗಳನ್ನು ತುಂಬಾ ನೆನಪು ಮಾಡಿಕೊಳ್ಳುತ್ತಿದ್ದರು. ಜೊತೆಗೆ ಮಕ್ಕಳೆಲ್ಲರ ಆರೋಗ್ಯ ಹೇಗಿದೆಯೋ ಏನೋ ಎಂದು ಆಲೋಚಿಸುತ್ತಿದ್ದರು. ಹಾಗಾಗಿ ಎಲ್ಲರಿಗೂ ಪತ್ರ ಬರೆದು ಏಕೆ ಅವರೆಲ್ಲರ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳಬಾರದು ಎಂದು ಆಲೋಚಿಸಿ, ಪತ್ರ ಬರೆಯಲು ನಿರ್ಧರಿಸಿದರು.

ಈ ಕುರಿತು ಮಾತನಾಡಿದ ಶಿಕ್ಷಕಿ ಗೀತಾ, “ನಾನು ನನ್ನ ವಿದ್ಯಾರ್ಥಿಗಳೆಲ್ಲರನ್ನೂ ಭೇಟಿ ಮಾಡಿ ಈಗಾಗಲೇ ಒಂದು ವರ್ಷವೇ ಕಳೆದಿದೆ. ನನಗೆ ಅವರೆಲ್ಲರ ಬಗ್ಗೆ ತುಂಬಾ ಕಾಳಜಿಯಿದೆ. ಜೊತೆಗೆ ಅವರೆಲ್ಲರ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಬೇಕಾಗಿತ್ತು. ಹಾಗಾಗಿ ಎಲ್ಲರಿಗೂ ಪತ್ರ ಬರೆದು ಅವರೆಲ್ಲರಿಗೂ ಒಂದು ಸರ್‌ಪ್ರೈಸ್! ಕೊಡಬೇಕೆಂದು ನಿರ್ಧರಿಸಿದೆ. ಅದಕ್ಕೆ ಅವರೆಲ್ಲರ ಆರೋಗ್ಯವನ್ನು ವಿಚಾರಿಸುವುದರ ಜೊತೆಗೆ ಅವರೆಲ್ಲರೂ ಮುಂದಿನ ತರಗತಿಗೆ ಉತ್ತೀರ್ಣರಾಗಿರುವ ವಿಚಾರವನ್ನೂ ಸಹ ತಿಳಿಸಿ ಪ್ರತ್ಯೇಕ ಪತ್ರಗಳನ್ನು ಬರೆದೆ,” ಎಂದರು.

ಆ ಶಾಲೆ 1 ರಿಂದ 5 ರವರಗೆ ತರಗತಿಗಳನ್ನು ನಡೆಸುತ್ತಿದ್ದು ಒಟ್ಟು 16 ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಶಿಕ್ಷಕಿ ಗೀತಾ ಪತ್ರ ಬರೆದಿದ್ದಾರೆ. “ಈ ಸಾಂಕ್ರಾಮಿಕದ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ತುಂಬುವುದು ನನ್ನ ಕರ್ತವ್ಯವೂ ಹೌದು ಎನ್ನುವುದು ನನ್ನ ಭಾವನೆ. ಮೇಲಾಗಿ ಮಕ್ಕಳು ಶಾಲೆಯಿಲ್ಲದ ಮನೆಯಲ್ಲೇ ಕುಳಿತು ಬೋರ್ ಆಗಿರುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ಸ್ನೇಹಿತರನ್ನೂ ಬಹಳ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ನಾನು ನನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಆಗಾಗ ಫೋನ್ ಮಾಡಿ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದೆ, ಆದರೆ ನನ್ನ ವಿದ್ಯಾರ್ಥಿಗಳ ಕುರಿತು ಹೇಗೆ ತಿಳಿದುಕೊಳ್ಳುವುದು ಎನ್ನುವ ಬಗ್ಗೆ ಆಲೋಚಿಸಿಯೇ ಇರಲಿಲ್ಲ!,” ಎನ್ನುತ್ತಾರೆ ಗೀತಾ

ಕುತೂಹಲವೆಂದರೆ ಆಕೆ ಪತ್ರ ಬರೆದಿದ್ದ ಒಟ್ಟು ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಅವರಿಗೆ ಉತ್ತರವನ್ನೂ ಬರೆದಿದ್ದಾರೆ.

“ನನ್ನ ಪತ್ರದಲ್ಲಿ ನಾನು ನನ್ನ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಅವರ ಒಡಹುಟ್ಟಿದವರು ಹಾಗೂ ಅವರ ಪೋಷಕರ ಆರೋಗ್ಯವನ್ನೂ ವಿಚಾರಿಸಿ ನನ್ನ ನಮನಗಳನ್ನು ಸಲ್ಲಿಸಿದ್ದೆ. ಜೊತೆಗೆ ಪತ್ರದಲ್ಲಿ ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆಯೂ, ನನಗೆ ಅವರ ಬಗ್ಗೆ ಏಕೆ ಅಷ್ಟು ಕಾಳಜಿ ಎಂದು ವಿವರಿಸುವುದರ ಜೊತೆಗೆ, ತಮ್ಮ ಮೊಬೈಲ್ ಫೋನ್‌ ಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಬಳಸುವಂತೆಯೂ ತಿಳಿಸಿದ್ದೆ. ನಾನು ಪತ್ರ ಕಳುಹಿಸಿದವರ ಪೈಕಿ 10 ವಿದ್ಯಾರ್ಥಿಗಳು ನನಗೆ ಉತ್ತರ ಕಳುಹಿಸಿದ್ದು ನನಗೆ ಬಹಳ ಆಶ್ಚರ್ಯ ಹಾಗೂ ಅನಂದ ತಂದಿದೆ,” ಎಂದರು ಗೀತಾ.

ಶಿಕ್ಷಕಿ ಗೀತಾ ತಮ್ಮ ಪತ್ರದಲ್ಲಿ ಅವರ ಮೊಬೈಲ್ ಸಂಖ್ಯೆಯನ್ನೂ ಸಹ ನಮೂದಿಸಿ, ವಿದ್ಯಾರ್ಥಿಗಳಿಗೆ ಏನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದು ಹಾಗೂ ತಮ್ಮನ್ನು ನೆನಪು ಮಾಡಿಕೊಳ್ಳುತ್ತಿದ್ದರೆ, ಅಥವಾ ಶಾಲೆ ಅಥವಾ ಪಾಠಗಳಿಗೆ ಸಂಬAಧಿಸಿದAತೆ ಏನಾದರೂ ಕೇಳಬೇಕೆನಿಸಿದರೆ ತಮ್ಮೊಂದಿಗೆ ಮಾತನಾಡಬೇಕೆನಿಸಿದರೆ ಕರೆ ಮಾಡುವುದಾಗಿಯೂ ವಿವರಿಸಿದ್ದರು.

ಈ ಕುರಿತು ತಮ್ಮ ಆಶ್ಚರ್ಯ ಹಾಗೂ ಆನಂದವನ್ನು ವ್ಯಕ್ತಪಡಿಸುತ್ತಾ 4ನೇ ತರಗತಿಯ ವಿದ್ಯಾರ್ಥಿಯೊಬ್ಬರು, “ನನ್ನ ಹೆಸರಿಗೆ ಒಂದು ಪತ್ರ ಬಂದಿದೆ ಎಂದು ನಮ್ಮ ತಂದೆ ತಿಳಿಸಿದಾಗ ನನಗೆ ಬಹಳ ಆಶ್ಚರ್ಯವಾಯಿತು. ಆದರೆ, ಆ ಪತ್ರ ನಮ್ಮ ಗೀತಾ ಮಿಸ್ ಕಡೆಯಿಂದ ಬಂದಿದೆ ಎಂದಾಗ ನನಗೆ ತುಂಬಾ ಆನಂದವಾಯಿತು,” ಎಂದರು.

ಶಿಕ್ಷಕಿ ಗೀತಾರ ಈ ಆಲೋಚನೆ ತುಂಬಾ ಚಿಕ್ಕದೆನಿಸಿದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮೆಚ್ಚುಗೆ ಹಾಗೂ ಪ್ರಶಂಸೆಗೆ ಪಾತ್ರವಾಗಿದೆ. ರಾಜ್ಯದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರೂ ಸಹ ಆಕೆಯ ಈ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಪ್ರೋತ್ಸಾಹವೇ ದೊಡ್ಡ ಆಲೋಚನೆಗಳಿಗೆ ನಾಂದಿಯಲ್ಲವೇ?!

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: government -school -teacher -role model -other -teacher

website developers in mysore