ಏಳು ವರ್ಷಗಳಿಂದ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ತುಂಬದ ಸರ್ಕಾರ: 3ಸಾವಿರ ಉದ್ಯೋಗಾಂಕ್ಷಿಗಳ ಕೆಂಗಣ್ಣು

ಬೆಂಗಳೂರು, ಅಕ್ಟೋಬರ್ 11, 2022 (www.justkannada.in): ಹುದ್ದೆಗಳು ಲಭ್ಯವಿದ್ದರೂ ಸಹ ರಾಜ್ಯ ಆರೋಗ್ಯ ಇಲಾಖೆ, ಆರೋಗ್ಯ ನಿರೀಕ್ಷಕರ ಡಿಪ್ಲೊಮಾ (ಡಿಹೆಚ್‌ಐ) ಕೋರ್ಸ್ ಗೆ  ಪ್ರವೇಶಾತಿ ಪಡೆದಂತಹ ಸುಮಾರು ೩,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ನೇಮಕಾತಿ ಮಾಡಿಲ್ಲ.

ಅನೇಕ ಯುವಜನರು ಸರ್ಕಾರಿ ಹುದ್ದೆಗಳನ್ನು ಪಡೆಯುವ ಕನಸ್ಸಿನಲ್ಲಿ ರಾಜ್ಯ ಸರ್ಕಾರ ಅನುಮೋದಿತ ಕೋರ್ಸುಗಳಿಗೆ ಪ್ರವೇಶ ಪಡೆಯುತ್ತಾರೆ. ಕಳೆದ ಏಳು ವರ್ಷಗಳಿಂದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ೨,೬೯೨ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನೇ ತುಂಬಿಲ್ಲ.

“ನಮ್ಮ ಪೈಕಿ ಬಹುತೇಕರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದು, ಇದು ಜಾಬ್ ಓರಿಯೆಂಟೆಡ್ ಕೋರ್ಸ್ ಎಂಬ ಕಾರಣದಿಂದಾಗಿ ಪ್ರವೇಶಾತಿ ಪಡೆದು ಡಿಪ್ಲೊಮಾ ಪಡೆದಿದ್ದೇವೆ,” ಎಂದು ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಕ ಹುದ್ದೆ ಆಕಾಂಕ್ಷಿಗಳ ಸಂಘದ ಅಧ್ಯಕ್ಷ ಶರತ್ ಎನ್. ಅವರು ತಿಳಿಸಿದರು. ಮೇಲಾಗಿ, ಈ ಡಿಪ್ಲೊಮಾ ಪಡೆದವರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳೇ ಇಲ್ಲ, ಕೇವಲ ಸರ್ಕಾರಿ ವಲಯದ ಹುದ್ದೆಗಳನ್ನೇ ಅವಲಂಬಿಸಬೇಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಆರೋಗ್ಯ ನಿರೀಕ್ಷಕರು ಬ್ಯಾಕ್ಟೀರಿಯಾ-ವೈರಾಣುಗಳಿಂದ ಹರಡುವ ಖಾಯಿಲೆಗಳನ್ನು ತಡೆಗಟ್ಟುವ ಸಂಬಂಧ ಹಾಗೂ ಸಾಂಕ್ರಾಮಿಕ ಖಾಯಿಲೆಗಳನ್ನು ತಡೆಗಟ್ಟುವ ಸಂಬಂಧ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಹುದ್ದೆಗಳನ್ನು ಆದ್ಯತೆಯ ಮೇರೆಗೆ ತುಂಬಬಹುದು ಎನ್ನುವುದು ಹಿರಿಯ ಆರೋಗ್ಯ ಅಧಿಕಾರಿಗಳ ಅನಿಸಿಕೆಯಾಗಿದೆ.

“ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋವಿಡ್-೧೯ ಸಾಂಕ್ರಾಮಿಕ ಸಾರ್ವಜನಿಕ ವಲಯಕ್ಕೆ ಬಲವಾದ ಪೆಟ್ಟನ್ನು ನೀಡಿತು. ಹಾಗಾಗಿ, ಇಂತಹ ಹರಡುವ ಖಾಯಿಲೆಗಳನ್ನು ತಡೆಗಟ್ಟಲು ಕ್ಷೇತ್ರಮಟ್ಟದಲ್ಲಿ ಕೆಲಸ ನಿರ್ವಹಿಸುವಂತಹ ಜನರ ಅಗತ್ಯವಿದೆ,” ಎನ್ನುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಕೀಟಶಾಸ್ತ್ರಜ್ಞ ರೊಬ್ಬರ ಅಭಿಪ್ರಾಯವಾಗಿದೆ. “ನಾವು ಸಾಂಕ್ರಾಮಿಕ ಖಾಯಿಲೆಗಳನ್ನು ತಡೆಗಟ್ಟಲು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವೆವಾದರೂ ಸಹ ಕ್ಷೇತ್ರದಲ್ಲಿ ಅದನ್ನು ಅನುಷ್ಠಾನಗೊಳಿಸಲು ಆರೋಗ್ಯ ನಿರೀಕ್ಷಕರು ಹಾಗೂ ಎಎನ್‌ಎಮ್‌ ಗಳ ಅಗತ್ಯವಿದೆ,’ ಎಂದರು.

ಪ್ರಸ್ತುತ ಲಭ್ಯವಿರುವ ಹುದ್ದೆಗಳ ಸಂಖ್ಯೆಗಿಂತಲೂ ಹೆಚ್ಚಿನ ಬೇಡಿಕೆ ಇದೆ. “ಈ ಹುದ್ದೆಗಳನ್ನು ರಾಜ್ಯದಲ್ಲಿ ೧೯೯೧ರಲ್ಲಿದ್ದಂತಹ ಜನಸಂಖ್ಯೆಯನ್ನು ಆಧರಿಸಿ ಲೆಕ್ಕ ಹಾಕಲಾಗಿದೆ. ಆದರೆ ಇಲ್ಲಿಯವರೆಗೆ ರಾಜ್ಯದ ಜನಸಂಖ್ಯೆ ತುಂಬಾ ಹೆಚ್ಚಾಗಿದ್ದು, ಅದೇ ಪ್ರಮಾಣದಲ್ಲಿ ಆರೋಗ್ಯ ವೃತ್ತಿಪರರ ಬೇಡಿಕೆಯೂ ಸಹ ಹೆಚ್ಚಳವಾಗಿದೆ. ಒಂದು ವೇಳೆ ಈಗ ಇಲಾಖೆ ೨,೬೯೨ ಹುದ್ದೆಗಳನ್ನು ತುಂಬಿದರೂ ಸಹ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇರಲಿದೆ,” ಎಂದು ವಿವರಿಸಿದರು.

ಕೋರ್ಸುಗಳ ಮುಂದುವರಿಕೆ

ಕಳೆದ ಏಳು ವರ್ಷಗಳಿಂದಲೂ ಈ ಹುದ್ದೆಗಳ ಸಂಖ್ಯೆ ಕ್ರೋಢಿಕರಣಗೊಂಡಿದ್ದರೂ ಸಹ ಸರ್ಕಾರಿ-ಅನುಮೋದಿತ ಸಂಸ್ಥೆಗಳು ಈ ಕೋರ್ಸುಗಳನ್ನು ಮುಂದುವರೆಸಿವೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಈ ಕೋರ್ಸಿಗೆ ಪ್ರವೇಶಾತಿಯನ್ನು ನಿಲ್ಲಿಸಬೇಕೆಂದು ಸರ್ಕಾರವನ್ನು ಕೋರಿದ್ದಾರೆ.

“ನೇಮಕಾತಿ ನಿಲ್ಲಿಸಿದ್ದರೂ ಸಹ ಪ್ರತಿ ವರ್ಷ ಈ ೫೦೦ ರಿಂದ ೬೦೦ ಜನರು ಈ ಕೋರ್ಸನ್ನು ಪೂರ್ಣಗೊಳಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಉದ್ಯೋಗಗಳನ್ನು ನೀಡುವುದು ಸಾಧ್ಯವಾಗದಿದ್ದರೆ ಈ ಕೂಡಲೇ ಕೋರ್ಸ್ ಅನ್ನು ನಿಲ್ಲಿಸಬೇಕು,” ಎಂದು ಶರತ್ ಒತ್ತಾಯಿಸಿದ್ದಾರೆ.

ನಕಲಿ ಪ್ರಮಾಣಪತ್ರಗಳು

ಆರೋಗ್ಯ ಇಲಾಖೆ ಮೂಲಗಳು ತಿಳಿಸುವ ಪ್ರಕಾರ ನಕಲಿ ಪ್ರಮಾಣಪತ್ರಗಳ ಸೃಷ್ಟಿ ಒಂದು ಸಮಸ್ಯೆಯಾಗಿಯೇ ಉಳಿದಿದೆ. “೨೦೦೦ರಿಂದ ಈ ಕೋರ್ಸ್ ಅನ್ನು ಒದಗಿಸುತ್ತಿರುವ ಅನೇಕ ಕಾಲೇಜುಗಳು ಹುಟ್ಟಿಕೊಂಡಿವೆ. ಈ ಪೈಕಿ ಅನೇಕ ಕಾಲೇಜುಗಳಿಗೆ ಈ ಕೋರ್ಸ್ ಅನ್ನು ನಡೆಸಲು ಪರವಾನಗಿಯೇ ಇಲ್ಲ,” ಎಂದು ಇಲಾಖೆಯ ಓರ್ವ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  government –not- filled – health inspectors – seven years