ಕೊರೋನಾ ಎದುರಿಸಲು ಸರ್ಕಾರ ಏನು ಮಾಡಿದೆ : ತಕ್ಷಣ ಶ್ವೇತಪತ್ರ ಹೊರಡಿಸುವಂತೆ ಸಿದ್ಧರಾಮಯ್ಯ ಆಗ್ರಹ…

ಬೆಂಗಳೂರು,ಏಪ್ರಿಲ್, 19,2021(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು,  ಈ ನಡುವೆ ಕೊರೋನಾ ನಿಯಂತ್ರಿಸಲು ಸರ್ಕಾರ ಏನೇನು ಕ್ರಮಗಳನ್ನ ಕೈಗೊಂಡಿದೆ ಎಂಬುದು ಜನರಿಗೆ ತಿಳಿಬೇಕು.  ಹೀಗಾಗಿ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಕೊರೊನಾದಿಂದ ರಕ್ಷಿಸಿಕೊಳ್ಳಲು ಜನತೆಗೆ ನಿಯಮ-ನಿರ್ಬಂಧ- ಮಾರ್ಗಸೂಚಿಗಳ ಉಪದೇಶ ಮಾಡುವುದರ ಜೊತೆಗೆ, ಕೊರೊನಾ ಎದುರಿಸಲು ಬಿಜೆಪಿ ಸರ್ಕಾರ ಏನು‌ ಮಾಡಿದೆ‌ ಎನ್ನುವುದನ್ನು ಜನತೆಗೆ ತಿಳಿಸಲು ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲಿಕ್ಕಾಗದ ರಾಜ್ಯ ಸರ್ಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ವಿಫಲ ಪ್ರಯತ್ನದಲ್ಲಿ ತೊಡಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಐ.ಸಿ.ಯು ನಲ್ಲಿದೆ. ..

ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ,‌ ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ತೆರುವ ಶಕ್ತಿ ಜನರಿಗೆ ಇಲ್ಲ. ಆಮ್ಲಜನಕದ ದಾಸ್ತಾನಿಲ್ಲ,‌ ರೆಮಿಡಿಸಿವಿರ್ ನಂತಹ ಜೀವರಕ್ಷಕ ಔಷಧಿಯ‌ ಕೊರತೆ ಇದೆ. ಸಿಎಂ ಆಸ್ಪತ್ರೆಯಲ್ಲಿದ್ದಾರೆ, ರಾಜ್ಯ ಬಿಜೆಪಿ ಸರ್ಕಾರ ಐ.ಸಿ.ಯು ನಲ್ಲಿದೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ.

Former CM- Siddaramaiah- warns- implemented-anugraha
siddaramaih#profile..

ಹಾಗೆಯೇ ವರ್ಷದ ಹಿಂದೆ ಮೊದಲ ಬಾರಿ‌ ಕೊರೊನಾ ದಾಳಿ ಇಟ್ಟಾಗ ಅದು ಅನಿರೀಕ್ಷಿತ ಆಘಾತ. ಒಂದು ವರ್ಷದ ಅನುಭವದಿಂದ ರಾಜ್ಯ ಸರ್ಕಾರ ಕೊರೊನಾ ಎದುರಿಸಲು ತನ್ನನ್ನು ಇನ್ನಷ್ಟು ಸಜ್ಜುಗೊಳಿಸಬೇಕಾಗಿತ್ತು. ಕೊರೊನಾವನ್ನೂ‌ ತನ್ನ ಭ್ರಷ್ಟತೆಗೆ ಬಳಸಿಕೊಂಡ ಸರ್ಕಾರ ಈಗ ಕೈಚೆಲ್ಲಿ ಕೂತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಸಿಎಂ ಬಿಎಸ್ ವೈ ಅವರಿಗೆ ಸಚಿವರ ಮೇಲಾಗಲಿ, ಶಾಸಕರ ಮೇಲಾಗಲಿ ನಿಯಂತ್ರಣವೇ ಇಲ್ಲದೆ ನಿರ್ಮಾಣಗೊಂಡಿರುವ‌ ಅರಾಜಕತೆಯೇ ಇಂದಿನ ದುಸ್ಥಿತಿಗೆ ಕಾರಣ ಎಂದು ಸರ್ಕಾರದ ವಿರುದ್ದ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

Key words: government –Corona-cotrol-former cm- Siddaramaiah-tweet