ದೇಶದ ಯಾವುದೇ ಭಾಗದಲ್ಲೂ ಕಾಣದ ಜೀವವೈವಿಧ್ಯವನ್ನು ಕಾಪಾಡಿ- ರಾಜವಂಶಸ್ಥ ಯದುವೀರ್

ಬೆಂಗಳೂರು ಜೂನ್‌,15,2022(www.justkannada.in): ಕರ್ನಾಟಕ ರಾಜ್ಯದಲ್ಲಿರುವ ಅರಣ್ಯ, ದೇಶದ ಈಶಾನ್ಯ ರಾಜ್ಯವನ್ನು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅದೇ ರೀತಿ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವಂತಹ ಜೀವ ವೈವಿಧ್ಯ ಅಮೇಜಾನ್‌ ಕಾಡುಗಳಲ್ಲಿ ಮಾತ್ರ ಕಾಣಬಹುದು. ಇಂತಹ ವೈವಿಧ್ಯಮಯ ಅರಣ್ಯ ಹಾಗೂ ಜೀವವೈವಿಧ್ಯತೆಯನ್ನು ಉಳಿಸಿ ಮುಂದಿನ ಪೀಳಿಗೆಗೂ ಉಳಿಸುವಂತಹ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ಶ್ರೀಗಂಧದ ಬೀಡು. ಕರ್ನಾಟಕ ರಾಜ್ಯದಲ್ಲಿರುವ ಅರಣ್ಯ ಸಂಪತ್ತು ದೇಶದ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲೂ ಕಂಡುಬರುವುದಿಲ್ಲ. ಅದೇ ರೀತಿ ನಮ್ಮ ಪಶ್ಚಿಮ ಘಟ್ಟದದಲ್ಲಿ ಕಂಡುಬರುವ ಜೀವವೈವಿಧ್ಯ ಅಮೇಜಾನ್‌ ಅರಣ್ಯದಲ್ಲಿ ಮಾತ್ರ ಕಾಣಬಹುದು. ಇಂತಹ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಅಭಿವೃದ್ದಿ ನಿಗಮ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಒಂದು ನಿಗಮ 50 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುವುದು ಸಾಮಾನ್ಯ ವಿಷಯವಲ್ಲ. ರಾಜ್ಯದಲ್ಲಿರುವ ಈ ಸಂಪತ್ತನ್ನ ಉಳಿಸಿ ಬೆಳೆಸುವುದು ಹಾಗೂ ಮುಂದಿನ ಪೀಳಿಗೆಗೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಪರಿಸರ ಉಳಿಸುವುದು ಹಾಗೂ ಬೆಳೆಸುವುದು ನಮ್ಮ ಹಾಗೂ ಜನಸಾಮಾನ್ಯರ ಆದ್ಯ ಕರ್ತವ್ಯವಾಗಬೇಕು’’ ಎಂದು ಹೇಳಿದರು.

ಕರ್ನಾಟಕ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮಾತನಾಡಿ, ಅರಣ್ಯಗಳ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಾರಂಭಿಸಲಾಗಿರುವ ನಿಗಮ ಕಳೆದ 5 ದಶಕಗಳಲ್ಲಿ ಸಾವಿರಾರು ಹೆಕ್ಟೇರ್‌ ಅರಣ್ಯ ಹಾಳಾಗುವುದನ್ನು ತಪ್ಪಿಸಿದೆ. ಇದೇ ವೇಳೆ, ಸಾವಿರಾರು ಉದ್ಯೋಗಾವಕಾಶವನ್ನು ಸೃಷ್ಟಿಸಿದೆ. ಅರಣ್ಯಗಳ ಒತ್ತುವರಿ ತಡೆಯಲು ಇರುವ ನಿಗಮದ ತನ್ನ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರಣ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಧಾದೇವಿ ಐ.ಎಫ್‌.ಎಸ್‌, ಉಪಾಧ್ಯಕ್ಷರಾದ ರೇವಣ್ಣಪ್ಪ, ನಿಗಮದ ಅಧಿಕಾರಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೌಕರರು ಉಪಸ್ಥಿತರಿದ್ದರು.

Key words: Golden Jubilee – Karnataka -Forest- Development- Corporation- yaduvir