ಜಿ.ಎನ್ ಮೋಹನ್ ಸ್ಪೆಷಲ್: ‘ಚೆ’ ಫೋಟೋದಲ್ಲಿ ನೆಲೆ ನಿಂತರು

kannada t-shirts

‘ಚೆ’ ಫೋಟೋದಲ್ಲಿ
ನೆಲೆ ನಿಂತರು
——
ಜಿ ಎನ್ ಮೋಹನ್

ಕೋರ್ಡಾ ಇನ್ನಿಲ್ಲ-
ಪತ್ರಿಕೆಯಲ್ಲೊಂದು ಪುಟಾಣಿ ಸುದ್ದಿ.

ಪತ್ರಿಕೆಯ ಪುಟಗಳಲ್ಲಿ ಕ್ಯೂಬಾ ಸುದ್ದಿಯೇನಾದರೂ ಇದೆಯೇ ಎಂದು ಭೂತಕನ್ನಡಿ ಹಿಡಿದು ಹುಡುಕಬೇಕು. ಅಷ್ಟು ವಿರಳ. ಬಹುಶಃ ಜಗತ್ತಿನ ಎಲ್ಲ ಮಾಧ್ಯಮಗಳ ಮಟ್ಟಿಗೂ ಈ ಮಾತು ನಿಜ. ಭಾರತದಲ್ಲಿ ಕ್ಯೂಬಾ ಸುದ್ದಿ ಸಿಗಬೇಕಾದರೆ ಒಂದೋ ‘ದಿ ಹಿಂದೂ’ ವಿನಲ್ಲಿ ಇಲ್ಲಾ ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ. ಈ ಎರಡು ಪತ್ರಿಕೆ ಹೊರತುಪಡಿಸಿದರೆ ಕ್ಯೂಬಾ ಯಾವ ಪತ್ರಿಕೆಗೂ ವಿಷಯವೇ ಅಲ್ಲ.jk-logo-justkannada-logo

ಎಷ್ಟೋ ಬಾರಿ ಕ್ಯೂಬಾ ಸುದ್ದಿಯಾಗುತ್ತಿದ್ದುದೂ ಸಹಾ ಸುದ್ದಿಯಾಗಬಾರದ ಕಾರಣಕ್ಕೆ. ಕ್ಯೂಬಾ ಬಗ್ಗೆ ಇರುವ ಇಮೇಜ್ ಈ ಸುದ್ದಿಗಳನ್ನು ಓದುತ್ತಿದ್ದರೆ ಕಡಿಮೆಯಾಗುತ್ತಿತ್ತೇ ಹೊರತು ಸದ್ಭಾವನೆ ಬರುತ್ತಿರಲಿಲ್ಲ.

ಕ್ಯೂಬಾ ಮತ್ತು ಅಮೇರಿಕಾ ನಡುವೆ ಇಷ್ಟು ದೊಡ್ಡ ಬಿಕ್ಕಟ್ಟು ಬೆಳೆಯಲು ಪತ್ರಿಕೆಗಳೇ ಕಾರಣ ಎನ್ನುವವರಿದ್ದಾರೆ. ಕ್ಯೂಬಾ ಮತ್ತು ಅಮೇರಿಕಾ ನಡುವೆ ದೊಡ್ಡ ಪೇಪರ್ ಗೋಡೆಯಿದೆ ಎನ್ನುತ್ತಾರೆ. ಈ ಗೋಡೆಯ ಕಾರಣದಿಂದಾಗಿ ಎರಡೂ ದೇಶಗಳು ದೂರವೇ ಉಳಿದವು.

ಬಹುಶಃ ಕ್ಯೂಬಾ ಮತ್ತು ಇಡೀ ಜಗತ್ತಿನ ಮಧ್ಯೆ ಇದೇ ಪೇಪರ್ ಗೋಡೆ ಎಬ್ಬಿಸುವ ಸಂಚು ನಡೆಯುತ್ತಿದೆಯೇನೋ? ಕ್ಯೂಬಾ ಎನ್ನುವ ಪರಮಹೊರಾಟಗಾರನ ಎದೆಯ ಆ ಮಿಣಿ ಮಿಣಿ ಬೆಳಕು ಇನ್ನೊಂದು ದೇಶಕ್ಕೆ ಗೊತ್ತಾಗದೆ ಹೋಗುವಂತೆ ಜಗತ್ತಿನ ಮೇಸ್ತ್ರಿಗಳು ಗೋಡೆ ಎಬ್ಬಿಸುತ್ತಲೇ ಇದ್ದಾರೆ.

ಆದರೂ.. ಆದರೂ.. ಗೋಡೆಯನ್ನು ಮೀರುವ ಕ್ಯೂಬಾದ ವಿಶ್ವಾಸ ಆಚಲವಾದದ್ದು. ಈ ಜಗತ್ತಿನ ಪ್ರತಿಯೊಬ್ಬರಲ್ಲಿಯೂ ಒಂದೊಂದು ಆಂಟೆನಾ ಇದೆ. ಅದರಿಂದ ಕ್ಯೂಬಾದೊಳಗೆ ನಡೆಯುತ್ತಿರುವ ಪ್ರತಿಯೊಂದೂ ಅವರಿಗೆ ಗೊತ್ತಾಗುತ್ತದೆ ಎನ್ನುವ ಕ್ಯಾಸ್ಟ್ರೋ ತಮ್ಮ ಜನರ ಕ್ಯೂಬಾ ಪ್ರೀತಿಯ ಬಗ್ಗೆ ವಿಸ್ಮಿತರಾಗಿದ್ದಾರೆ.

ಕೋರ್ಡಾ ಸಾವಿನ ಪುಟ್ಟ ತುಣುಕು ಈ ಎಲ್ಲವನ್ನೂ ನೆನಪಿಗೆ ತಂದಿತು.

ಎಲ್ಲಾ ಪತ್ರಿಕೆಗಳ ಪುಟವನ್ನೂ ತಿರುವಿದೆ. ಸಮ್ಮೇಳನ ಬಂದಿಳಿದ ಪಡ್ಡೆ ಹುಡುಗರ ತಂಡಕ್ಕೆ ಏನೇನೋ ಕನಸು. ಕೇವಲ ಸಮ್ಮೇಳನದಲ್ಲಿ ಕೂರುವುದು, ಮೆರವಣಿಗೆಯಲ್ಲಿ ಭಾಗವಹಿಸುವುದು ಮಾತ್ರ ಈ ತಂಡದ ಮುಂದಿರಲಿಲ್ಲ.

ಅವರ ಡೈರಿಯಲ್ಲಿ ಇಣುಕು ಹಾಕಿದ್ದರೆ ಕ್ಯೂಬಾ ಬಗೆಗಿನ ಏನೇನು ಅದ್ಭುತಗಳು ಸಿಗುತ್ತಿದ್ದವೋ! ಸಿಗಾರ್ ಹುಡುಕುವುದು, ಪುಸ್ತಕದಂಗಡಿ ಅಲೆಯುವುದು, ಸಾಧ್ಯವಿದ್ದಷ್ಟೂ ‘ಚೆ’ ಫೋಟೋ ಸಂಗ್ರಹಿಸುವುದು ಮತ್ತು ಆ ‘ಚೆ’ ಯನ್ನು ಸೆರೆಹಿಡಿದ ಕೋರ್ಡಾನ ಮುಂದೆ ಕೂತು ಕಥೆ ಕೇಳುವುದು..

ಕೋರ್ಡಾ ಎಂದರೆ ಸಾಕು ಜನರಿಗೆ ನೆನಪಿಗೆ ಬರುವುದು ಚೆ ಗೆವಾರ. ಇಂದು ಜಗತ್ತಿನ ಎಲ್ಲೆಡೆ ಹರಡಿ ಹೋಗಿರುವ, ಎಲ್ಲರ ಮನದಲ್ಲಿ ಅಚ್ಚೊತ್ತಿ ನಿಂತಿರುವ ಆ ‘ಚೆ’ ಮುಖ ಕೋರ್ಡಾನ ಕ್ಯಾಮೆರಾ ಕ್ಲಿಕ್ಕಿಸಿದ್ದು.

ಪೋಸ್ಟರ್ ಗಳಾಗಿ, ಟಿ-ಶರ್ಟ್, ಟೋಪಿ, ಕೀ ರಿಂಗ್, ಪುಸ್ತಕ ಕರವಸ್ತ್ರ, ಬ್ಯಾನರ್, ಎಲ್ಲೆಡೆಯೂ ಈ ಚಿತ್ರ ಎಷ್ಟು ರೀತಿಯಲ್ಲಿ ಮುದ್ರಣಗೊಂಡಿದೆ ಎಂಬುದೇ ಲೆಕ್ಕಕ್ಕೆ ಸಿಕ್ಕಿಲ್ಲ.

‘ಚೆ’ ಎಂದ ತಕ್ಷಣ ನೆನಪಿಗೆ ಬರುವ ಚಿತ್ರ ಯಾವುದು ಒಮ್ಮೆ ನೋಡಿ. ಹಾಂ, ಆ ಚಿತ್ರವೇ ಕೋರ್ಡಾ ತೆಗೆದದ್ದು. ಈ ಚಿತ್ರದಿಂದಾಗಿಯೇ ಕೋರ್ಡಾ ಜಗತ್ತಿನ ಉದ್ದಗಲಕ್ಕೂ ಹರಡಿಹೋದ.

ತನ್ನ 16ನೇ ವಯಸ್ಸಿನಲ್ಲಿ ಪ್ರೇಯಸಿಯನ್ನು ಸೆರೆಹಿಡಿಯಲು ಪುಟಾಣಿ ಕ್ಯಾಮೆರಾ ಹಿಡಿದ ಆಲ್ಬರ್ಟೋ ಡಯಾಜ್ ಕೋರ್ಡಾ ನಂತರ ಫ್ಯಾಷನ್ ಛಾಯಾಗ್ರಹಣದತ್ತ ವಾಲಿದ.GN Mohan Special.

ಕ್ಯಾಮೆರಾಗೆ ಅಂಟಿಕೊಳ್ಳುವ ಮುನ್ನ ವಿವಿಧ ವೇಷಗಳಲ್ಲಿ ಕಾಣಿಸಿಕೊಂಡ ಕೋರ್ಡಾ ಚಳವಳಿಯ ಒಂದು ಮಹಾನ್ ಘಟನೆಯ ಕಣ್ಣಾಗಿಹೋದ. ಪುಟ್ಟ ಕ್ಯಾಮೆರಾ ದೊಡ್ಡ ಹೋರಾಟವನ್ನು ಒಡಲಲ್ಲಿ ಹೊತ್ತುಕೊಂಡಿತ್ತು.

ಆಗ ಆರಂಭವಾಯಿತು ಅಮೇರಿಕಾದ ದಾಳಿ. ಕ್ಯೂಬಾದ ಮೇಲೆ ಕಂಡು ಕಂಡಲ್ಲೆಲ್ಲಾ ಬಾಂಬ್ ದಾಳಿ ಆರಂಭವಾಯಿತು. ಕ್ಯೂಬಾ ತಲೆ ಎತ್ತಿ ನಿಂತಿತು.

ತನ್ನ ದೇಶಕ್ಕಾಗಿ ಶಸ್ತ್ರಾಸ್ತ್ರ ನೀಡುವವರನ್ನು ಎದುರು ನೋಡಿತು. ಆಗ ಫ್ರಾನ್ಸ್ ‘ಲಾ ಕೊಬೆ’ ಹಡಗು ಬೆಲ್ಜಿಯಂನಿಂದ ಶಸ್ತ್ರಾಸ್ತ್ರಗಳನ್ನು ಹೊತ್ತು ಕ್ಯೂಬಾ ಬಂದರಿಗೆ ಬಂದಿತು. ಒಂದೊಂದೇ ಶಸ್ತ್ರಾಸ್ತ್ರ ಕೆಳಗಿಳಿಯುತ್ತಿದ್ದಂತೆಯೇ ಅಮೇರಿಕಾ ಬಾಂಬ್ ಎಸೆಯಿತು.

ಕ್ಯೂಬಾದ ರೋದನ ಹೇಳತೀರದು. ಹಡಗಿನಲ್ಲಿದ್ದ ಎಲ್ಲ 75 ಕ್ಯೂಬನ್ನರೂ ಇಲ್ಲವಾಗಿದ್ದರು. ಶಸ್ತ್ರಾಸ್ತ್ರಗಳು ಇಲ್ಲ. ಕ್ಯೂಬಾದಲ್ಲಿ ಶೋಕ ಸಾಗರದ ಅಲೆಗಳೆದ್ದವು.

ಜನರು ಬೀದಿಗಿಳಿದರು. ಜನರ ದಂಡುನದಿಯಾಯಿತು, ಕಡಲಾಗಿ ಬದಲಾಯಿತು. ಮುಂದೆ ಇದ್ದವರು ಕ್ಯಾಸ್ಟ್ರೋ, ಚೆ. ಇವರೊಂದಿಗೆ ಕಣ್ಣೀರಿಟ್ಟವರು ಜೀನ್ ಪಾಲ್ ಸಾರ್ತ್ರೆ, ಸಿಮನ್ ದಿ ಬುವಾ.

ಕ್ಯೂಬಾದ ಬೀದಿಗಳು ಜನರಿಂದ ತುಂಬಿ ಹೋಗಿದ್ದವು.

ಸಿ ಐ ಎ ನ ಪೆಂಟಗನ್ ಈ ದಾಳಿ ನಡೆಸಿದೆ ಎಂದು ಕ್ಯಾಸ್ಟ್ರೋ ಕಣ್ಣೀರಿಟ್ಟು ಹೇಳಿದರು. ಇನ್ನಿರುವುದು ಒಂದೇ ದಾರಿ ‘ಪೆಟ್ರಿಯಾ ಓ ಮ್ಯೂರ್ಟೆ’ (ತಾಯ್ನಾಡು ಇಲ್ಲವೇ ಸಾವು).

ಆಗ ಕೋರ್ಡಾ ವೇದಿಕೆಯತ್ತ ನೋಡಿದರು. ನಾಯಕರ ಸಾಲಿನಲ್ಲಿ ಇರಬೇಕಾದವರಲ್ಲಿ ಒಬ್ಬ ನಾಪತ್ತೆ. ಕೋರ್ಡಾ ಕಣ್ಣು ಆತನಿಗಾಗಿ ಹುಡುಕಲು ಆರಂಭಿಸಿತು. ಚೆ ಗೆವಾರ ಒಂದು ಕ್ಷಣ ವೇದಿಕೆಯ ಮುಂಭಾಗಕ್ಕೆ ಬಂದದ್ದೇ ಜನರತ್ತ ದಿಟ್ಟಿಸಿ ನೋಡಿದರು.

ಜನಸಾಗರದ ಕೊನೆಯೆಲ್ಲಿ ಎಂದು ಹುಡುಕುತ್ತಿದ್ದಾರೇನೋ ಎಂಬ ದೂರ ನೋಟ. ಗಡಸು ಮುಖ, ಅದೇ ಗಡ್ಡ, ಕೆಂಪು ನಕ್ಷತ್ರ ಹೊತ್ತ ಅದೇ ಕಪ್ಪು ಹ್ಯಾಟ್, ಅದೇ ಕೋಟು.

ಕೋರ್ಡಾ ಪಟ ಪಟ ಎಂದು ಕ್ಯಾಮೆರಾ ಕ್ಲಿಕ್ಕಿಸಿದರು. ಸಿಕ್ಕಿದ್ದು ಎರಡೇ ಅವಕಾಶ. ಚೆ ಅಲ್ಲಿಂದ ಜಾಗ ಬದಲಿಸಿಯಾಗಿತ್ತು.

ಆ ರಾತ್ರಿ ಕತ್ತಲ ಕೋಣೆಯಲ್ಲಿ ನೆಗೆಟಿವ್ ಗೆ ಉಸಿರು ತುಂಬುತ್ತಿದ್ದ ಕೋರ್ಡಾ ಕಣ್ಣು ಮಿನುಗಲಾರಂಭಿಸಿತು. ಆ ಚಿತ್ರ ಕಣ್ಣ ಮುಂದಿತ್ತು.

ಕೋರ್ಡಾ ತೆಗೆದ ಆ ಚಿತ್ರ ಆತನ ಮನೆಯ, ಗೋಡೆಯ ಮೇಲೆ 7 ವರ್ಷ ತೂಗುತ್ತಿತ್ತು. ಆಗ ಇಟಲಿಯ ಪ್ರಕಾಶನ ಕೋರ್ಡಾನನ್ನು ಹುಡುಕುತ್ತಾ ಬಂದ.

ಆ ಸಂಸ್ಥೆ ಜಗತ್ತಿನ ಎಲ್ಲೆಡೆ ಇದ್ದ ಚೆ ಗೆವೆರಾನ ಚಿತ್ರಗಳನ್ನು ಕಲೆಹಾಕುತ್ತಿತ್ತು. ಕೋರ್ಡಾ ತನ್ನಲ್ಲಿದ್ದ ಫೋಟೋ ಸಂಸ್ಥೆಯ ಕೈಗಿತ್ತರು.

ಕೆಲವೇ ತಿಂಗಳು ಅಷ್ಟೇ ಬೊಲಿವಿಯಾದ ಕಾಡುಗಳಲ್ಲಿ ಸಿ ಐ ಎ ತನ್ನ ಗುರಿ ಸಾಧಿಸಿಯೇ ಬಿಟ್ಟಿತು. ಚೆ ಈಗ ನೆನಪು ಮಾತ್ರ, ಇಟಲಿಯ ಈ ಸಂಸ್ಥೆ ಕೋರ್ಡಾನಿಂದ ಪಡೆದಿದ್ದ ಆ ಗಂಭೀರ ಕಣ್ಣುಗಳ ‘ಚೆ’ ಫೋಟೋವನ್ನು ಪೋಸ್ಟರ್ ಆಗಿ ಮುದ್ರಿಸಿತು.

ಹತ್ತು ಲಕ್ಷ ಪೋಸ್ಟರ್ ಗಳು, ಜಗದುದ್ದ, ಜಗದಗಲ ಅದೇ ‘ಚೆ’, ದಿಟ್ಟ ನೋಟದ, ಗಂಭೀರ ಮುಖದ ‘ಚೆ’.

‘ಈ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ’ ಎಂದ ಚೆ ಗೆವೆರಾ. ಕೋರ್ಡಾನ ಈ ಫೋಟೋ ಅದಕ್ಕೆ ಮಾತು ಕೊಟ್ಟಿತ್ತು. ಪ್ರತಿಯೊಬ್ಬರಿಗೂ ‘ಚೆ’ ಈ ಮಾತು ಹೇಳುತ್ತಿದ್ದಾನೆ ಎನ್ನುವ ಚಿತ್ರ.

ಈ ಚಿತ್ರ ಎಲ್ಲೆಡೆ ಹರಿಯಲಾರಂಭಿಸಿತು. ಯಾರು ಲೆಕ್ಕ ಇಟ್ಟರು ಎಲ್ಲೆಲ್ಲಿ ಹೋಯಿತೆಂದು, ಯಾವ ಒಡಲೊಳಗೆ, ಯಾವ ಕಡಲು ದಾಟಿ, ಯಾವ ದೇಶದ ಗಡಿ ಮೀರಿ..

ಒಂದು ಚಿತ್ರ ಸಾವಿರ ಪದಕ್ಕೆ ಸಮ ಎನ್ನುತ್ತಾರೆ, ‘ಚೆ’ ಯ ಚಿತ್ರ ಅದನ್ನು ಸಾಧಿಸಿತ್ತು. ಆ ಒಂದು ನೋಟ ನೂರಾರು ಕಥೆ ಹೇಳುವಂತೆ. ಕೋರ್ಡಾ ಅದಕ್ಕೆ ‘ಹಿರಾಯಿಕ್ ಗೆರಿಲ್ಲಾ’ ಎಂದು ಹೆಸರಿಟ್ಟರು.

ಕೋರ್ಡಾ ಮನೆಗೆ ಜನರ ಮುತ್ತಿಗೆ ಈಗಲೂ ನಿಂತಿಲ್ಲ. ಕಾಲ ಬದಲಾಗಿ, ತಂತ್ರಜ್ಞಾನ ಬದಲಾಗಿ ನೂರಾರು ರೀತಿಯ ಕ್ಯಾಮೆರಾ ಬದಲಾಗಿದ್ದರೂ ಜನ ಆ ‘ಚೆ’ ಯನ್ನು ಸೆರೆಹಿಡಿದ ಕ್ಯಾಮೆರಾ ನೋಡಲು ಕೋರ್ಡಾ ಮನೆಯ ಬಾಗಿಲು ತಟ್ಟುತ್ತಲೇ ಇದ್ದಾರೆ. ಆ ಕ್ಯಾಮೆರಾ, ಆ ನೆಗೆಟಿವ್ ಈಗಲೂ ಮ್ಯೂಸಿಯಂನ ವಸ್ತು.

ಕೋರ್ಡಾ ಈ ಚಿತ್ರಕ್ಕೆ ಒಂದು ಬಿಡಿಗಾಸೂ ಪಡೆಯಲಿಲ್ಲ. ಹೋರಾಟದ ಹುಮ್ಮಸ್ಸಾಗಿ ಎಲ್ಲ ದಿಕ್ಕುಗಳಲ್ಲಿ ಹರಡಿ ಹೋಗಲಿ ಎಂದರು.

ಆ ಚಿತ್ರ ಹೋರಾಟದ ಸಂಕೇತವಾಗಿ ಹೋಗಿತ್ತು. ಆದರೆ ಆ ‘ಚೆ’ ಮುಖ ವೋಡ್ಕಾ ಬಾಟಲ್ ನ ಮೇಲೆ ಕಂಡದ್ದೇ ಕೋರ್ಡಾ ಬೆಂಕಿಯಾದರು.

ಯಾವ ‘ಚೆ’ಯನ್ನು, ಕ್ಯೂಬಾವನ್ನು, ಅಂತಹ ಹೋರಾಟದ ಹುಮ್ಮಸ್ಸನ್ನು ತಣ್ಣಗಾಗಿಸಲು ಶ್ರಮಿಸುತ್ತಿದ್ದ ಅದೇ ಅಮೇರಿಕಾ, ಬ್ರಿಟನ್ ಈಗ ‘ಚೆ’ಯನ್ನು ಅಸ್ತ್ರವಾಗಿ ಬಳಸಿದ್ದವು. ಬ್ರಿಟನ್ ನ ಜಾಹಿರಾತು ಸಂಸ್ಥೆ ವೋಡ್ಕಾ ಮಾರಲು ಜನರ ಎದೆಯಾಳದ ‘ಚೆ’ಯನ್ನೇ ಬಳಸಿತು. ಇಳಿವಯಸ್ಸಿನ ಕೋರ್ಡಾ ಬ್ರಿಟನ್ ನ್ಯಾಯಾಲಯದ ಕಟ್ಟೆ ಏರಿದರು.

ಎಂದಿಗೂ ಈ ಚಿತ್ರ ನನ್ನದು ಎಂದು ಹೇಳದಿದ್ದ ಕೋರ್ಡಾ ಇದೇ ಮೊದಲ ಬಾರಿಗೆ ವ್ಯಗ್ರರಾಗಿ ನಿಂತಿದ್ದರು. ಅವರ ಕೈಗಳಲ್ಲಿ ಆ ನೆಗೆಟಿವ್ ಇತ್ತು. ಯಾರನ್ನು ಕೇಳಿದಿರಿ ಎಂದು ಗುಡುಗಲು ಸಜ್ಜಾಗಿದ್ದರು. ವಿಶ್ವದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಅಲೆ ಎದ್ದಿತು.

ವೋಡ್ಕಾ ಸಂಸ್ಥೆ ತಕ್ಷಣವೇ ‘ಚೆ’ ಚಿತ್ರವನ್ನು ತೆಗೆಯಿತು. ಕೋರ್ಡಾ ಹೇಳಿದರು: ‘ಚೆ’ ಎಂದರೆ ಪ್ರತಿಭಟನೆ ಎಲ್ಲಿ ಯಾವ ಮನಸ್ಸಿನಲ್ಲಿಯೇ ಆಗಲಿ ಹೋರಾಟದ ಹುಮ್ಮಸ್ಸಾಗಿ ನನ್ನ ಆ ಫೋಟೋ ಇರಲಿ. ಚೆಗೆವಾರ ಪ್ರತಿನಿಧಿಸಿದ ಮೌಲ್ಯಗಳಿಗಾಗಿ ಮಾತ್ರ ಈ ಫೋಟೋ, ಅಷ್ಟು ನೆನಪಿರಲಿ ಎಂದರು.

ಕೋರ್ಡಾರಿಗೆ ಬ್ರಿಟನ್ ನ ಕಂಪೆನಿ 50 ಸಾವಿರ ಡಾಲರ್ ಗಳನ್ನು ಪರಿಹಾರವಾಗಿ ನೀಡಿತು. ಕ್ಯೂಬಾದ ಮಕ್ಕಳ ಆರೋಗ್ಯವನ್ನು ಕಾಪಾಡಲು ಈ ಎಲ್ಲಾ ಹಣವನ್ನು ಕೋರ್ಡಾ ಸರ್ಕಾರದ ಕೈಗಿತ್ತರು. ಜಗತ್ತಿನ ಕಣ್ಣು ಹನಿಗೂಡಿತು.

ಕೋರ್ಡಾ ಹೇಳಿದರು- ಚೆ ಗೆವಾರ ಈಗ ಬದುಕಿದ್ದಿದ್ದರೆ ಆತ ಮಾಡುತ್ತಿದ್ದುದೂ ಇದನ್ನೇ ತಾನೇ?

ಆ ಕೋರ್ಡಾ ಇನ್ನಿಲ್ಲ.
—-
ನಾನು ಇತ್ತೀಚೆಗೆ ಕ್ಯೂಬಾ ಬಗ್ಗೆ ಬರೆದಾಗ ರೇಣುಕಾ ಮಂಜುನಾಥ್ ಕೋರ್ಡಾ ಬಗ್ಗೆ ಪ್ರಸ್ತಾಪ ಮಾಡಿದ್ದರಲ್ಲದೆ ಸಾಕಷ್ಟು ಲಿಂಕ್ ಕಳಿಸಿದ್ದರು. ಕ್ಯೂಬಾಗೆ ಸಂಬಂಧಿಸಿದಂತೆ ಏನನ್ನಾದರೂ ಆಗಲಿ ಹುಡುಕುವ ಆ ಮನಸ್ಸುಗಳಿಗೆ ನಮನ

website developers in mysore