ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಮರತೇನೆಂದರ ಮರೆಯಲಿ ಹ್ಯಾಂಗ…?

ಏಕಾಂತಕ್ಕೆ ಲಾಲ್ ಭಾಗ್, ಲೋಕಾಂತಕ್ಕೆ ಗಾಂಧಿಬಜಾರು

-ಎಂದವರೇ ನನ್ನತ್ತ ನೋಡಿದ್ದು ಕೆ ಎಸ್ ನಿಸಾರ್ ಅಹ್ಮದ್.

ಆಗ ನಾವಿಬ್ಬರೂ ಗಾಂಧಿಬಜಾರಿನ ಬೀದಿ ಬೀದಿ ಸುತ್ತಿ ಬ್ಯೂಗಲ್ ರಾಕ್ ನ ಎದುರಿಗಿದ್ದ ‘ಬೈಟು ಕಾಫಿ’ಯಲ್ಲಿ ಕಾಫಿ ಹೀರುತ್ತಿದ್ದೆವು.

ಎಷ್ಟೋ ಕಾಲದ ನಂತರ ಗಾಂಧಿಬಜಾರಿನ ಮೂಲೆ ಮೂಲೆ ಸುತ್ತಿ ನಿಸಾರ್ ಥೇಟ್ ಪುಟ್ಟ ಮಗುವಿನಂತೆ ಸಂಭ್ರಮಿಸುತ್ತಿದ್ದರು.
ಅದರಿಂದಾಗಿಯೇ ಇರಬೇಕು ಕಾಫಿ ಒಂದಿಷ್ಟು ಹೆಚ್ಚೆ ಕಿಕ್ ಕೊಡುತ್ತಿತ್ತು.
‘ಮನಸು ಗಾಂಧಿಬಜಾರು’ ಆಗಿ ಹೋಗಿತ್ತು.

‘ಮೋಹನ್ ನಿಮಗೆ ಗೊತ್ತಾ..?’ ಎಂದು ನಿಸಾರ್ ಕಣ್ಣುಗಳನ್ನು ಅರಳಿಸಿಕೊಂಡು ಕೇಳಿದರು.
ನನಗೆ ಗೊತ್ತಿತ್ತು ಅವರು ಇನ್ನೂ ಆ ಬಾಲ್ಯವೆಂಬ ಸೆಸೇಮಳ ಗುಹೆಯಿಂದ ಇನ್ನೂ ಆಚೆ ಬಂದಿಲ್ಲ ಎಂದು
‘ನಾನು ಹುಟ್ಟಿದ್ದು ಟಿಪ್ಪು ಹುಟ್ಟ್ಟಿದ ಸ್ಥಳದಿಂದ ಕೇವಲ ಅರ್ಧ ಫರ್ಲಾಂಗ್ ದೂರದಲ್ಲಿದೇವನಹಳ್ಳಿಯಲ್ಲಿ’ ಎಂದರು.

‘ನನ್ನ ತಂದೆಯವರ ಊರು ಕನಕಪುರದ ಕೊಕ್ಕರೆ ಹೊಸಹಳ್ಳಿ.
ಥೇಟ್ ಆ ಕೊಕ್ಕರೆಯಂತೆಯೇ ನಮ್ಮಪ್ಪ ಇನ್ನೂ ಓದುತ್ತಿರುವಾಗಲೇ ವಲಸೆ ಹೋಗಿಬಿಟ್ಟರು.
ಜಮೀನು ನೋಡಿಕೊಳ್ಳುತ್ತ ಇದ್ದುಬಿಡುವುದು ಅವರಿಗೆ ಬೇಕಿರಲಿಲ್ಲ.
ಅವರಿಗೆ ಶಿಕ್ಷಣ ಎಲ್ಲಕ್ಕಿಂತ ಅತಿ ದೊಡ್ಡದಾಗಿತ್ತು. infact ಅದೇ ಅವರ ದೇವರಾಗಿತ್ತು’ ಎಂದರು.

‘ನನ್ನ ನಾಲಿಗೆ ತಿದ್ದಿದ್ದು ನನ್ನಪ್ಪ ಗೊತ್ತಾ
ಅದೇ ಲಾಲ್ ಭಾಗ್ ನಲ್ಲಿ’ ಎಂದರು.

ನಾವು ಮತ್ತೆ ಏಕಾಂತ ಮತ್ತು ಲೋಕಾಂತದ ಕಡೆಗೆ ಹೊರಳಿಕೊಂಡಿದ್ದೆವು.

‘ನಮ್ಮ ಮನೆ ಲಾಲ್ ಭಾಗ್ ನ ಪಕ್ಕದಲ್ಲೇ ಇತ್ತು. ಒಂದು ರಸ್ತೆ ದಾಟಿದರೆ ಸಾಕಿತ್ತು. ನನ್ನನ್ನು ಲಾಲ್ ಭಾಗ್ ಗೆ ಕರೆದುಕೊಂಡು ಬಂದು ಅಲ್ಲಿನ ಗಿಡ ಮರಗಳ ಮಧ್ಯೆ ಕನ್ನಡ ಪದಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಹೇಳಿಕೊಡುತ್ತಾ ಇದ್ದರು.

ನಮ್ಮಪ್ಪ ಗುರುಕುಲದಲ್ಲಿ ಕಲಿತದ್ದು. ಅವರಿಗೆ ಸಂಸ್ಕೃತದ ಮೇಲೂ ಅಷ್ಟೇ ಹಿಡಿತ ಇತ್ತು. ಅಪ್ಪನೇ ನನ್ನ ಮೊದಲ ಪಾಠಶಾಲೆ, ಅಪ್ಪನೇ ನನ್ನ ಮೊದಲ ಗುರು’ ಎಂದರು

ತಕ್ಷಣ ನನ್ನ ನೆನಪಿಗೆ ಬಂದಿದ್ದು ಅವರ ಮನೆಯ ಹೆಸರು- ಹಮೀದಾ ಹೈದರ್.

‘ಅದು ನನ್ನ ಅಪ್ಪ ಅಮ್ಮನ ಹೆಸರು.
ನಂಬಿಕೆಗಳಲ್ಲಿ ಇಬ್ಬರೂ ಭಿನ್ನ ಧಿಕ್ಕಿನವರು
ಅಮ್ಮ ಹಮೀದಾಗೆ ದೇವರು, ಉಪವಾಸ, ಕುರಾನ್ ಮುಖ್ಯವಾಗಿ ಕಂಡಿತ್ತು
ಅಪ್ಪನಿಗೆ ಓದು, ಕನ್ನಡ..’

ಅವರು ಇಷ್ಟು ಹೇಳುತ್ತಿರುವಾಗಲೇ ನಾನು ಒಳ್ಳೆ ಕೈನಲ್ಲಿ ಅವರ ಎಕ್ಸ್ ರೇ ಶೀಟ್ ಹಿಡಿದವನಂತೆ ‘ಸಾರ್ ನಿಮ್ಮ ಶ್ವಾಸಕೋಶ..’ ಎಂದೆ

ತಕ್ಷಣ ಅವರಿಗೆ ನಾನು ಏನು ಹೇಳಲು ಬಾಯಿ ತೆರೆದಿದ್ದೇನೆ ಎನ್ನುವುದು ಗೊತ್ತಾಗಿ ಹೋಯಿತು.
‘ಯಸ್, ಲಾಲ್ ಭಾಗ್ ಹಾಗೂ ಗಾಂಧಿಬಜಾರು ನನ್ನ ಎರಡು ಶ್ವಾಸಕೋಶಗಳು’ ಎಂದರು.

‘ಬಾಲ್ಯ ಲಾಲ್ ಭಾಗ್ ಆದರೆ, ಯೌವ್ವನ ಗಾಂಧಿಬಜಾರ್’ ಎಂದರು.
ನಾನು ಮುಖ ಅಷ್ಟು ಅಗಲ ಮಾಡಿಕೊಂಡದ್ದನ್ನು ನೋಡಿ ‘ಯಾಕೆ?’ ಎಂದರು.
‘ಇದು ಯಾಕೋ ಉಲ್ಟಾ ಆಗೋಯ್ತು ಸರ್’ ಅಂದೆ .
‘ಎಲ್ಲರಿಗೂ ಬಾಲ್ಯ ಗಾಂಧಿಬಜಾರಾದರೆ, ಯೌವ್ವನ ಲಾಲ್ ಭಾಗ್ ಆಗಿರುತ್ತೆ’ ಅಂದೆ

ತಕ್ಷಣ ನಿಸಾರ್ ತಮ್ಮ ಎಂದಿನ ತುಂಬು ನಗೆ ನಕ್ಕು ನನ್ನ ಬೆನ್ನಿನ ಮೇಲೆ ಎರಡು ಬಾರಿಸಿದರು.

ನಾನು ಇದೇ ಸರಿಯಾದ ಸಮಯ ಅಂತ ‘ಸಾರ್, ಹೇಳಿ ಯಾರು ಆ ಮನೋರಮಾ’ ಎಂದೆ

ಹಾಗೆ ಕೇಳಲು ಕಾರಣವಿತ್ತು

‘ಮನೋರಮಾ ಮನೋರಮಾ
ಸಾಲದೇನೆ ನಿನ್ನ ಹೆಸರೇ
ಮಲಗೋಬಾದ ಗಮ ಗಮ’

ಎನ್ನುವ ನಿಸಾರರ ಸಾಲುಗಳನ್ನು ನಾವು ನಮ್ಮ ಯೌವ್ವನಕ್ಕೆ ಪ್ರವೇಶಿಸಲು ಬೇಕಾದ ಐಡೆಂಟಿಟಿ ಕಾರ್ಡ್ ನಂತೆ ಸದಾ ಝಳಪಿಸುತ್ತಿದ್ದೆವು.
ಹಾಗಾಗಿಯೇ ನಮಗೆ ‘ಮನೋರಮಾ’ ಎಂದರೆ ನಿಸಾರರ ಸಿ ವಿ ರಾಮನ್, ಮಾಸ್ತಿ, ಹನುಮನಷ್ಟೇ ಇಂಪಾರ್ಟೆಂಟ್

‘ನೀವು ಈ ಪ್ರಶ್ನೆ ಕೇಳಲೂ ಬಾರದು, ನಾನು ಉತ್ತರ ಹೇಳಲೂ ಬಾರದು’ ಅಂದರು.
ನಿಸಾರರ ಮುಂಗೋಪದ ಪರಿಚಯ ಸುಮಾರು ಜನರಿಗಿದೆ.
ಹಾಗಾಗಿಯೇ ನಾನು ಸುಮ್ಮನಾಗಿಬಿಟ್ಟೆ.

ಆದರೆ ನಿಸಾರ್ ಸುಮ್ಮನಾಗಲಿಲ್ಲ
ಅವರ ಮನದೊಳಗೆ ಜೋಗದ ಸಿರಿ ಬೆಳಕಿನಂತೆ ಬಲ್ಬುಗಳು ಹೊತ್ತಿಕೊಂಡಿದ್ದವು.

‘ನನ್ನದು ಬರೀ ಪ್ಲೆಟಾನಿಕ್ ಲವ್ ಕಣಪ್ಪ’ ಅಂತ ಮೊದಲೇ ನಿರೀಕ್ಷಣಾ ಜಾಮೀನು ತೆಗೆದುಕೊಂಡರು.

‘ನನ್ನ ಮನೋರಮಾಗೆ ಒಬ್ಬಳ ಮೂಗಾದರೆ ಇನ್ನೊಬ್ಬಳ ಕಣ್ಣು ಹುಬ್ಬು, ಮತ್ತೊಬ್ಬಳ ಅಂಗ ಸೌಷ್ಠವ್ಯ, ಇನ್ನೊಬ್ಬಳ ನಡೆನುಡಿ
ಹೀಗೆ ಮನೋರಮಾ ನನ್ನನ್ನು ಕಾಡಿದ ಎಲ್ಲಾ ಹೆಣ್ಣುಗಳ ಕೊಲಾಜ್’ ಎಂದು ಹುಸಿ ನಗು ನಕ್ಕರು.

‘ಒಂದಂತೂ ನಿಜ ನಾನು ಪ್ರೀತಿಯಿಂದ ನೋಡಿದ ಎಲ್ಲಾ ಹೆಣ್ಣುಗಳೂ ನನ್ನ ಕಾವ್ಯದಲ್ಲಿ ಬಂದು ಹೋಗಿದ್ದಾರೆ.
ಎಲ್ಲ ಮರೆತಿರುವಾಗ, ಮತ್ತದೇ ಬೇಸರ ಅದೇ ಸಂಜೆ, ನೀ ನುಡಿಯದಿರುವಾಗ…ಇದೆಲ್ಲಾ ಇನ್ನೇನು’ ಎಂದರು.

ನಿಸಾರ್ ಹಾಗೂ ನನ್ನ ಗೆಳೆತನಕ್ಕೆ ಒಂದು ವಿಶಿಷ್ಟ ಸ್ಪರ್ಶವಿತ್ತು.
ಕಿ ರಂ ಕಟ್ಟಿದ ‘ಕಾವ್ಯ ಮಂಡಲ’ದಲ್ಲಿ ಮೊದಲ ಬಾರಿಗೆ ಅವರನ್ನು ಕಂಡಾಗ ನಮಗೆ ಅವರು ‘ನಿತ್ಯೋತ್ಸವ’ದ ನಿಸಾರರೂ ಅಲ್ಲ ‘ಸಂಜೆ ಐದರ ಮಳೆ’ಯ ನಿಸಾರರೂ ಅಲ್ಲ

ಅವರು ನಮ್ಮೊಳಗೇ ಆಗ ಬೆಂಕಿ ಹೊತ್ತಿಸುತ್ತಿದ್ದ ಪ್ಯಾಬ್ಲೋ ನೆರೂಡಾನನ್ನು ಕನ್ನಡಕ್ಕೆ ಕೈ ಹಿಡಿಸಿ ನಡೆಸಿಕೊಂಡು ಬಂದ ‘ಬರೀ ಮರ್ಯಾದಸ್ಥರೇ’ ಯ ನಿಸಾರರು
ನಮ್ಮೊಳಗೆ ಕನಸು ಉಕ್ಕಿಸಿದ್ದ ಶೇಕ್ಸ್ ಪಿಯರ್ ನ ‘ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ನ್ನು ಕನ್ನಡಕ್ಕೆ ತಂದ ನಿಸಾರರು.

ಅವರು ‘ಗ್ಯಾಸ್ ಕಾಲೇಜಿ’ನಲ್ಲಿ ಪಾಠ ಮಾಡುವಾಗ ನಾವು ಪಕ್ಕದ ಸೆಂಟ್ರಲ್ ಕಾಲೇಜಿನ ಹಕ್ಕಿಗಳು
ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನಾವು ಅದೇ ಅಕಾಡೆಮಿ ಕವಿಗೋಷ್ಠಿಯಲ್ಲಿದ್ದವರು.
ಹೀಗೆ ನಂಟು ಬೆಳೆಯುತ್ತಾ ಹೋಯಿತು.

ಅವರು ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ನಾನು ‘ಈಟಿವಿ’ ಸುದ್ದಿ ವಿಭಾಗದ ಮುಖ್ಯಸ್ಥ
ನಾನು ‘ನಿಸಾರ್ ಸಾರ್’ ಎನ್ನುವ ಕಾರ್ಯಕ್ರಮ ಸರಣಿ ರೂಪಿಸಿದೆ.
ನಮ್ಮ ನಂಟು ಬಿಡಿಸಲಾಗದಂತೆ ಬೆಸೆದುಕೊಂಡಿತು.

‘ನನಗೆ ಕಿಂದರಿ ಜೋಗಿ ಮತ್ತೆ ಗೋವಿನ ಹಾಡು ಸಿಕ್ಕಾಪಟ್ಟೆ ಕಾಡಿಸಿಬಿಡ್ತಪ್ಪಾ
ನಾನೇನಾದರೂ ಕವಿ ಆಗಿದ್ರೆ ಈ ಎರಡರ ಪಾಲು ದೊಡ್ಡದು.
ಇನ್ನೂ ಮಾಧ್ಯಮಿಕ ಶಾಲೆಯಲ್ಲಿದ್ದೆ. ಈ ಎರಡು ಹಾಡು ಕೇಳ್ತಾ ಕಣ್ಣೀರಿಡ್ತಾ ಕೂತಿರ್ತಿದ್ದೆ.

ನಾನು ಕಿಡಿಯನ್ನು ಕೆಂಡ ಮಾಡಿಕೊಂಡೆ, ಕೆಂಡದ ಕಾವನ್ನು ಬೆಳಕು ಮಾಡಿಕೊಂಡೆ’ ಎಂದರು

ಶಾಲೆಯ ಗೋಡೆ ಪತ್ರಿಕೆ ‘ವನಸುಮ’ದಲ್ಲಿ ಒಂದಿಷ್ಟು ಜಾಗ ಖಾಲಿ ಬಿತ್ತು ಎನ್ನುವ ಕಾರಣಕ್ಕೆ ಜಲಪಾತವೇ ನೋಡದಿದ್ದ ನಿಸಾರ್ ಜಲಪಾತದ ಬಗ್ಗೆ ಕವನ ಬರೆದರು.
ಹೈದರ್ ಮಗ ನಿಸಾರ್ ಕವಿಯಾಗಿ ಮೊದಲ ಹೆಜ್ಜೆ ಊರಿಬಿಟ್ಟಿದ್ದ

‘ಸಾರ್, ನಿಮಗೆ ಗಣಿತ ಸಿಕ್ಕಾಪಟ್ಟೆ ಫೇವರೈಟ್’ ಎಂದೆ
ತಕ್ಷಣ ‘ಸುಮ್ನಿರೋ ಮಾರಾಯ ಕಾಲೆಳೀಬೇಡ’ ಎಂದರು.

ಗಣಿತದಿಂದ ತಪ್ಪಿಸಿಕೊಳ್ಳಲು ಹೋಗಿ ನಿಸಾರ್ ಲ್ಯಾಂಡ್ ಆಗಿದ್ದು ಜಿಯಾಲಜಿಯಲ್ಲಿ.

ಕಲಬುರ್ಗಿಯ ಮಂದಿಗಂತೂ ನಿಸಾರ್ ನಮ್ಮಲ್ಲೇ ಹುಟ್ಟಿದರೇನೋ ಎನ್ನುವಷ್ಟು ಅಭಿಮಾನ ಇರುವುದನ್ನು ನಾನು ಕಂಡಿದ್ದೆ
‘ಪ್ರಜಾವಾಣಿ’ಗಾಗಿ ನಾನು ಅಲ್ಲಿದ್ದ ದಿನಗಳಲ್ಲಿ ಇದಕ್ಕೆ ಕರಣ ಏನು ಅಂತ ಹುಡುಕುತ್ತಾ ಹೋದೆ.
ನಿಸಾರ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ಎನ್ನುವ ಪದಕ ಎದೆಗೇರಿಸಿಕೊಂಡು ಮೊದಲು ಕಾಲಿಟ್ಟದ್ದು ಗುಲ್ಬರ್ಗಕ್ಕೆ.

‘ಶಹಾಬಾದ್ ಸಿಮೆಂಟ್ ಕಾರ್ಖಾನೆಯ ಬಗ್ಗೆ ವರದಿ ರೆಡಿ ಮಾಡುತ್ತ್ತಾ, ಅಲ್ಲಿ ಇಲ್ಲಿ ಬಾವಿ ತೋಡಿಸುತ್ತಾ ಸಾಕಾಗಿ ಹೋಯ್ತು ಮಾರಾಯ.
ಮನಸ್ಸಲ್ಲಿ ಕಿಂದರಿ ಜೋಗಿ. ಕಣ್ಣ ಮುಂದೆ ಸಿಮೆಂಟ್ ದೂಳು. ಸಾಕಾಗಿ ಹೋಯ್ತು. ರಾಜೀನಾಮೆ ಕೊಟ್ಟು ಸೆಂಟ್ರಲ್ ಕಾಲೇಜಿನಲ್ಲಿ ಎಂ ಎಸ್ ಸಿ ಗೆ ಸೇರಿದೆ’ ಎಂದರು.

ಅಂಕಿ ಸಂಖ್ಯೆ ಎಂದರೆ ಮಾರುದೂರ ಎಂದರೂ ನಿಸಾರರಿಗೆ ತಮ್ಮ ಬದುಕನ್ನು ಬದಲಾಯಿಸಿದ ಅಂಕಿ ಸಂಖ್ಯೆಗಳ ಬಗ್ಗೆ ಇನ್ನಿಲ್ಲದ ಪ್ರೀತಿ.
೧೯೫೯, ಅಕ್ಟೊಬರ್ ನಾನು ಕುವೆಂಪು ಸ್ಪರ್ಶಕ್ಕೆ ಸಿಕ್ಕಿ ಹೋದೆ ಎನ್ನುತ್ತಾ ನೆನಪಿನ ದೋಣಿ ಹತ್ತಿಯೇಬಿಟ್ಟರು.

ಬೆಂಗಳೂರು ಆಕಾಶವಾಣಿಯಲ್ಲಿ ಕವಿಗೋಷ್ಠಿ ಇತ್ತು.
ಅದು ಯುದ್ಧದ ಸಮಯ ನಾನು ಸಮರ ಗೀತೆ ಓದಿದೆ.
ಅಷ್ಟೇ, ಪಕ್ಕದ ಸೋಫಾದಲ್ಲಿದ್ದ ಕುವೆಂಪು ಕರೆದರು.
ನನಗೋ ಕಿಂದರಿ ಜೋಗಿಯ ಕೈ ಮುಟ್ಟುವ ತವಕ
ನನ್ನ ಬದುಕಿಗೆ ಇನ್ನಿಲ್ಲದ ತಿರುವು ದಕ್ಕಿ ಹೋಯ್ತು

‘ಮೂರು ದಿನದಲ್ಲಿ ‘ಕೆ ಎಸ್ ನಿಸಾರ್ ಅಹಮದ್ ಕೇರಾಫ್ ಸ್ಟೇಷನ್ ಡೈರೆಕ್ಟರ್, ಆಕಾಶವಾಣಿ’ ಎನ್ನುವ ಹೆಸರಿಗೆ ಒಂದು ಪತ್ರ ಬಂತು ಮೈಸೂರಿನ ದಸರಾ ಕವಿಗೋಷ್ಟಿಗೆ ಆಹ್ವಾನ. ಅಲ್ಲಿ ಹೋದರೆ ‘ಕುವೆಂಪು ಹೇಳಿದ ಹುಡುಗ ಇವನೇ’ ಎನ್ನುತ್ತಾ ಎಲ್ಲರೂ ನನ್ನನ್ನು ನೋಡುತ್ತಿದ್ದರು. ವಾಪಾಸ್ ಬರಬೇಕೆನ್ನುವಾಗ ಮೈಸೂರು ಯೂನಿವರ್ಸಿಟಿ ರಿಜಿಸ್ಟ್ರಾರ್ ಕರೆದವರೇ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ರಷ್ಯಾಗೆ ಹೋಗುತ್ತಿದ್ದಾರೆ ತಾತ್ಕಾಲಿಕವಾಗಿ ನಿಮ್ಮನ್ನು ಆಯ್ಕೆ ಮಾಡುವಂತೆ ಕುವೆಂಪು ಹೇಳಿದ್ದಾರೆ ಎಂದರು’ ಎಂದು ಕಣ್ಣು ಅರಳಿಸಿದರು.

ನನ್ನ ಆಸಕ್ತಿ ಇದ್ದದ್ದು ‘ನಿತ್ಯೋತ್ಸವ’ದ ಬಗ್ಗೆ, ‘ಕುರಿಗಳು ಸಾರ್ ಕುರಿಗಳು’ ಬಗ್ಗೆ
ನಿಸಾರ್ ನನ್ನನ್ನು ನಿಂತಲ್ಲಿಯೇ ಕೈಬಿಟ್ಟು ಶಿವಮೊಗ್ಗಕ್ಕೆ ಹೋಗಿಬಿಟ್ಟರು. ನೇರ ತುಂಗಾ ನದಿಯ ಬಳಿಗೆ.

‘೧೯೬೭ರಲ್ಲಿ ಸಹ್ಯಾದ್ರಿ ಕಾಲೇಜಿಗೆ ಬಂದೆ.
ಪ್ರತೀ ದಿನ ತುಂಗಾ ನದಿ ದಾಟಿಯೇ ಕಾಲೇಜಿಗೆ ಹೋಗಬೇಕು’.

‘ಇಡೀ ಜಿಲ್ಲೆಯಲ್ಲಿ ಯಾವುದೇ ಪ್ರೋಗ್ರಾಮ್ ನಡೆದರೂ ನಾವೇ ಒಂದಷ್ಟು ಜನ ಗೆಸ್ಟ್ ಗಳು
ನಾನು ಕೋಣಂದೂರು, ರಿಪ್ಪನ್ ಪೇಟೆ, ತೀರ್ಥಹಳ್ಳಿ ಸುತ್ತಿದೆ. ಎಂತಹ ನಿಸರ್ಗ ವೈಭವ
ಇದು ನನಗೆ ಮೋಡಿ ಮಾಡಿಬಿಟ್ಟಿತ್ತು’.

‘ಒಂದಷ್ಟು ದಿನ ರಜೆಗೆ ಅಂತ ಬೆಂಗಳೂರಿಗೆ ಬಂದಿದ್ದೆ.
ಆಕಾಶವಾಣಿಯ ಸಂಗೀತ ನಿರ್ದೇಶಕರಾದ ಪದ್ಮ ಚರಣ್ ಗದರಿಸಿದರು. ಅಲ್ಲಯ್ಯ ನವೆಂಬರ್ ಬರ್ತಾ ಇದೆ. ನಿನಗೆ ಒಂದು ಕವಿತೆ ಬರೆದುಕೊಡು ಅಂತ ಹೇಳಿ ತಿಂಗಳಾಯ್ತು ಅಂತ.
ನನಗೆ ಮರೆತು ಹೋಗಿತ್ತು. ನಾಳೆ ಬೆಳಗ್ಗೆ ನನಗೆ ಕವಿತೆ ಬೇಕೇ ಬೇಕು ಅಂದ್ರು. ನಾನು ಆ ರಾತ್ರಿ ಮನೆಯ ಟೆರೇಸ್ ನಲ್ಲಿ ಶತಪಥ ತಿರುಗ್ತಾ ಇದ್ದೆ. ಆಗ ಆ ತುಂಗಾ ನನ್ನೆದುರು ಹಾದುಹೋಯಿತು.
‘ಜೋಗದ ಸಿರಿ ಬೆಳಕಿನಲ್ಲಿ’ ಎನ್ನುವ ಸಾಲು ಮೂಡಿತು. ಆಮೇಲಿನದ್ದು ಎಲ್ಲರಿಗೂ ಗೊತ್ತು’ ಎಂದರು.

‘ಆಕಾಶವಾಣಿಗೆ ಕವಿತೆ ಬೇಕು ಅಂದರೆ ಸಾಕು ನನ್ನನ್ನು ಹುಡುಕುತ್ತಿದ್ದರು.
ಆಗ ಚೀನಾ ನಮ್ಮ ಮೇಲೆ ಆಕ್ರಮಣ ನಡೆಸಿತ್ತು. ಎಲ್ಲೆಲ್ಲೂ ಸಮರದ್ದೇ ಮಾತು
ಚೀನೀಯರು ನೋಡ ನೋಡುತ್ತಲೇ ನಮ್ಮತ್ತ ನುಗ್ಗುತ್ತಾ ಇದ್ದರು.
ನಮ್ಮ ನೇತಾರರು ಮಾತ್ರ ಹಿಮಾಲಯದಲ್ಲಿ ಒಂದು ಹುಲ್ಲೂ ಸಹಾ ಬೆಳೆಯೋದಿಲ್ಲ, ಅಲ್ಲಿಗೆ ಬಂದು ಏನು ಮಾಡ್ತಾರೆ ಅನ್ನುವ ಮನೋಭಾವದಲ್ಲಿದ್ದರು.
ಒಂದು ದಿನ ಟಾಟಾ ಇನ್ಸ್ಟಿಟ್ಯೂಟ್ ಮುಂದೆ ಹೋಗ್ತಾ ಇದ್ದೆ.
ದೊಡ್ಡ ಕುರಿ ಹಿಂಡು ಸಾಗುತ್ತಿತ್ತು. ಹಿಂದೆ ಕುರಿ ಕಾಯುವವ
‘ಕುರಿಗಳು ಸಾರ್ ಕುರಿಗಳು’ ಅಂತ ಹೊಳೀತು ಅಷ್ಟೇ ‘

ಒಂದು ದಿನ ಜಿ ಎಸ್ ಎಸ್ ಮತ್ತೆ ನಾನು ಎಲ್ಲಿಗೋ ಹೋಗ್ತಿದ್ವಿ
‘ಏನಯ್ಯಾ ಮೈಸೂರು ಅನಂತಸ್ವಾಮಿ ಕುರಿಗಳಿಗೆ ರಾಗ ಹಾಕಿದ್ದಾನೆ ಏನೋ ಮಜಾ ಕೊಡುತ್ತೆ ಫಾರಿನ್ ಸ್ಟೈಲ್ ನಲ್ಲಿ ಹಾಕಿದ್ದಾನೆ’ ಅಂದರು.
ನಾನು ಇನ್ನೂ ಕೇಳಿರಲೇ ಇಲ್ಲ.

ಈ ಮೈಸೂರು ಅನಂತಸ್ವಾಮಿ ನನಗೆ ಸಿಕ್ಕಿದ್ದೇ ಅ ನ ಸುಬ್ಬರಾಯರ ಕಲಾಮಂದಿರದಲ್ಲಿ
ಎಲ್ ಆರ್ ಡಿ ಇ ಗೆ ಕೆಲಸಕ್ಕೆ ಇಂಟರ್ವ್ಯೂಗೆ ಬಂದಿದ್ದ
ಅಗಲ ಹಣೆ, ತೆಳ್ಳಗಿನ ಮೈ. ಆದರೆ ಹೆಸರು ಮಾತ್ರ ‘ದೊರೆ’

‘ಬೇಡ ದೊರೆ, ಬಿಟ್ಬಿಡು’ ಅಂತ ನಾನು ಕೈಮುಗಿಯುವ ಸ್ಟೇಜ್ ಗೆ ಒಂದು ಸಲ ನನ್ನ ತಂದುಬಿಟ್ಟ’ ಎಂದವರೇ
ತಮ್ಮ ‘ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ’ ಎನ್ನುವ ಹಾಡಿನ ಲೋಕಕ್ಕೆ ಹೊರಳಿಕೊಂಡರು.

ಹಾಡು ಬರಿ ಅಂದ. ಸರಿಬಿಡು ಅಂದೆ.
ಹಾರ್ಮೋನಿಯಂ ತಗೊಂಡವನೇ ಯಾವುದೋ ರಾಗ ನುಡಿಸಿದ. ‘ಈ ರಾಗಕ್ಕೆ ಬರಿ’ ಅಂದ
ನಾನು ಬೆಚ್ಚಿಬಿದ್ದೆ. ‘ನಾನು ಕವಿತೆ ಬರೆಯೋನಪ್ಪಾ ರಾಗಕ್ಕೆ ಬರೆಯೋದಿಲ್ಲ ಅಂತ ಪಟ್ಟು ಹಿಡಿದೆ.
ಅವನೋ ನನಗಿಂತ ಜಗಮೊಂಡ. ‘ಹಿಂದೋಳ’ ರಾಗ ಇದು ನೀನು ಬರೀಲೇಬೇಕು ಅಂತ ಹಠಕ್ಕೆ ಬಿದ್ದ.
ಆ ದೊರೆಗಾಗಿ ನಾನು ವ್ರತ ಮುರಿದೆ. ಬೆಣ್ಣೆ ಕದ್ದ ಹೊರಬಂತು’ ಅಂದರು.

ಅದು ಎಷ್ಟು ಫೇಮಸ್ ಆಗೋಯ್ತು ಅಂದ್ರೆ ಮತ್ತೆ ಇನ್ನೊಂದು ಸಲ ಅವನ ಮುಂದೆ ಕೈಮುಗಿದು ನಿಂತು ‘ಆ ಹಾಡನ್ನ ಇನ್ನು ಹಾಡಬೇಡಪ್ಪಾ’ ಅಂದೆ.
ಅವನಿಗೆ ಆಶ್ಚರ್ಯ ಆಗೋಯ್ತು. ತನ್ನ ಕವಿತೆಯನ್ನೇ ಹಾಡಬೇಡಿ ಅನ್ನೋ ಕವೀನೂ ಇದ್ದಾರಾ ಅಂತ
‘ಈ ಹಾಡು ಫೇಮಸ್ ಮಾಡಿ ನನ್ನ ಬೇರೆ ಕವಿತೆಗಳನ್ನ ಕೇಳೋರೇ ಗತಿ ಇಲ್ಲದ ಹಾಗೆ ಆಗ್ತಾರಪ್ಪ’ ಅನಂತ ಭಿನ್ನವಿಸಿಕೊಂಡೆ ಎಂದು ನಾಟಕೀಯವಾಗಿ ಕೈ ಮುಗಿದು ತೋರಿಸಿದರು.

ಅಷ್ಟರಲ್ಲಿ ಬೈಟು ಕಾಫಿ ಮತ್ತೆ ನಮ್ಮ ಕೈಗೆ ಬಂದಿತ್ತು.
ಅಣ್ಣಾವ್ರ ಜೊತೆಗಿನ ನಂಟು, ‘ನಾನೆಂಬ ಪರಕೀಯ’ ಬರೆದಾಗ ‘ಕರ್ಮವೀರ’ದಲ್ಲಿ ಆದ ದೊಡ್ಡ ಚರ್ಚೆ,
ಮಾಸ್ತಿ ನೆನಪು, ಸಾಹಿತ್ಯ ರಾಜಕೀಯ ಇನ್ನೂ ಏನೇನೋ ಕಾಫಿಯ ನಡುವೆ ಬಂದು ಹೋಯ್ತು

ನನಗೆ ಅದೇ ಗಾಂಧೀ ಬಜಾರಿನ ಬೀದಿಯಲ್ಲಿ ಅಡ್ಡಾಡುತ್ತಲೇ ಅವರ ಕವಿತೆ ಕೇಳಬೇಕು ಎನ್ನುವ ಹುಕಿ ಬಂತು
ನನ್ನ ಮೊಬೈಲ್ ಆನ್ ಮಾಡಿದೆ.

‘ಥೂ ನಿನ್ನ.. ನಾನೇ ಇಲ್ಲಿರುವಾಗ ಮೊಬೈಲ್ ನಲ್ಲಿ ಇರೋ ನನ್ನ ಕವಿತಾ ವಾಚನ ಕೇಳ್ತೀಯಾ’ ಎಂದು ಗದರಿಕೊಂಡವರೇ
ಜನ ಬೆನ್ನಿಗೆ ಬಿದ್ದು ಕೈಕುಲುಕುತ್ತಿದ್ದರೂ ಜಗ್ಗದೆ ನನ್ನ ಬೆನ್ನ ಬೆನ್ನ ಮೇಲೆ ಕೈ ಹಾಕಿ
‘ಸಿ ವಿ ರಾಮನ್ ಸತ್ತ ಸುದ್ದಿ’ ಓದುತ್ತ ಹೋದರು.

ನನ್ನ ಭುಜದ ಮೇಲಿನ ಅವರ ಸ್ಪರ್ಶದ ಬಿಸಿ ಇನ್ನೂ ಆರಿಲ್ಲ.

ಆಗಲೇ ಸಿ ವಿ ರಾಮನ್ ಸತ್ತ ಸುದ್ದಿ ನನ್ನ ಕಿವಿಗೆ ತುಂಬಿದ್ದ ಆ ನಿಸಾರರೂ ಇಲ್ಲವಾದ ಸುದ್ದಿ…

ಮರತೇನೆಂದರೆ ಮರೆಯಲಿ ಹ್ಯಾಂಗ…?