ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಕುದ್ಮುಲ್ ರಂಗರಾಯರು ಸಿಕ್ಕಿದ್ದರು…

ಕಾರು ಇನ್ನೇನು ಅತ್ತಾವರದ ರೋಡಿನಲ್ಲಿ ಹಾದು ಮಾರ್ನಮಿಕಟ್ಟೆಯತ್ತ ಹೊರಳಿಕೊಳ್ಳುತ್ತಿತ್ತು.

ಅದೋ ಎತ್ತರದ ರಸ್ತೆ. ಕಾರಿಗೂ ಉಬ್ಬಸ.

ತಕ್ಷಣ ನನಗೆ ಅರೆ..! ಎತ್ತರವನ್ನು ಮುಟ್ಟುವುದು ಗುಲಾಬಿಯ ಹಾದಿಯಲ್ಲ.. ಕಾರಿಗೂ, ಜೀವಕ್ಕೂ.. ಅನಿಸಿಹೋಯಿತು.

ಎತ್ತರದ ಗುರಿ ಮುಟ್ಟಬೇಕಾದರೆ ಎಷ್ಟು ಉಬ್ಬಸಪಡಬೇಕಾದ ಸವಾಲುಗಳು!

ಆ ಕ್ಷಣಕ್ಕೆ ನನಗೆ ನೆನಪಾಗಿ ಹೋದದ್ದು ಕುದ್ಮುಲ್ ರಂಗರಾಯರು.

ಅದೇ.. ಅದೇ.. ರಸ್ತೆಯ ಎಡದಲ್ಲಿರುವ ವಿಸ್ತಾರವಾದ ಅಂಗಳದಲ್ಲಿ ಕುದ್ಮುಲ್ ರಂಗರಾಯರು ಮಲಗಿದ್ದರು.

ಇಲ್ಲ, ಅವರನ್ನು ಒಮ್ಮೆ ನೋಡದೆ ಇನ್ನೊಂದು ಹೆಜ್ಜೆ ಇಡಲಾರೆ ಅನಿಸಿತು.

ಎಲ್ಲಿಗೋ ಹೋಗುತ್ತಿದ್ದ ಕಾರು ನಿಂತಲ್ಲೇ ನಿಂತಿತು. ನನ್ನ ಹೆಜ್ಜೆಯ ಧಿಕ್ಕೂ ಬದಲಾಗಿತ್ತು..

ಮಳೆಯಿಂದ ಆಗಷ್ಟೇ ಎದ್ದು ನಿಂತಿದ್ದ ಹಸಿರೋ ಹಸಿರು ನೆಲದಲ್ಲಿ ‘ಬ್ರಹ್ಮ ಸಮಾಜ’ ಎನ್ನುವ ಹೆಸರು ಹೊತ್ತಿದ್ದ ಗೇಟು ತೆಗೆದೆ..

ಅದರ ಜೊತೆಗೆ ನನ್ನ ನೆನಪುಗಳ ಗೇಟೂ ತೆರೆದುಕೊಂಡಿತು..

೧೯೯೨ ರಲ್ಲಿ ನಾನು ಮಂಗಳೂರಿಗೆ ಕಾಲಿಟ್ಟಾಗ ಕುದ್ಮುಲ್ ರಂಗರಾಯರ ಪರಿಚಯ ಏನೇನೂ ಇರಲಿಲ್ಲ. ಆದರೆ ಪ್ರತೀ ಬಾರಿ ನಾನು ಪಿ ವಿ ಎಸ್ ಸರ್ಕಲ್ ನಿಂದ ಎಡಕ್ಕೆ ಹೊರಳಿಕೊಂಡು ಕಚೇರಿ ತಲುಪಬೇಕಾದಾಗಲೆಲ್ಲಾ ನನ್ನ ಕಣ್ಣು ಬಲಗಡೆ ಇದ್ದ ಕಟ್ಟಡದತ್ತ ಹೋಗುತ್ತಿತ್ತು.

ಅದಕ್ಕೆ ಕಾರಣ ಇಷ್ಟೇ ಆ ಬೆಳಗ್ಗೆಯಲ್ಲಿ ಎಷ್ಟೊಂದು ಮಕ್ಕಳು ಶಿಸ್ತಾಗಿ ಶಾಲೆಯ ದಿಕ್ಕಿನತ್ತ ಬಿಲ್ಲಿನಿಂದ ಹೊರಟ ಬಾಣದಂತೆ ಹೋಗುತ್ತಿದ್ದರು. ಅದು ಹಾಸ್ಟೆಲ್.

ಕೃಶ ದೇಹ ಆದರೆ ಬೆಳಕು ಹೊತ್ತ ಕಣ್ಣುಗಳು ಅದು ಖಂಡಿತಾ ಮೇಲ್ವರ್ಗದ ಹಾಸ್ಟೆಲ್ ಅಲ್ಲ ಎನ್ನುವುದನ್ನು ತಾನೇ ತಾನಾಗಿ ಸಾರಿಬಿಟ್ಟಿತ್ತು.

ಅದು ಕುದ್ಮುಲ್ ರಂಗರಾವ್ ಅವರ ಹೆಸರು ಹೊತ್ತ ಹಾಸ್ಟೆಲ್.

ಆಫೀಸಿಗೆ ಬಂದವನೇ ನಾನು ‘ಕುದ್ಮುಲ್ ರಂಗರಾವ್’ ಹೆಸರಿನ ಹಿಂದೆ ಬಿದ್ದೆ. ಅದು ಗೂಗಲ್ ಕಾಲವಲ್ಲ. ಹಾಗಾಗಿ ಎಲ್ಲೆಲ್ಲಿಗೋ ಫೋನು ರಿಂಗಾಯಿಸಲು ಶುರು ಮಾಡಿದೆ.

ಆಗ ಹೊಳೆಯಿತು. ಅರೆ! ಕುದ್ಮುಲ್ ರ ಕೈಯನ್ನು ನಾನು ಈ ಹಿಂದೆಯೇ ಕುಲುಕಿದ್ದೇನೆ. ‘ಭಾರತ ಭಾರತಿ’ ಪುಸ್ತಕದ ಮಾಲಿಕೆಯಲ್ಲಿ. ತಕ್ಷಣ ನೆನಪು ಹಿಂದೋಡಿತು.

ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಎರಡೂ ಸೇರಿ ಆಗ ‘ಕನ್ನಡ’ ಜಿಲ್ಲೆ ಎಂದು ಮಾತ್ರ ಇತ್ತು. ಗಾಂಧಿ ‘ಕನ್ನಡ’ ಜಿಲ್ಲೆಗೆ ಮೂರು ಬಾರಿ ಬಂದಿದ್ದರಂತೆ.

ಆದರೆ ಒಂದು ವಿಶೇಷವಿತ್ತು ಕನ್ನಡ ಜಿಲ್ಲೆಯ ನೆಲದಲ್ಲಿ. ಕಾಸರಗೋಡಿನ ಕುದ್ಮುಲ್ ನಲ್ಲಿ ಹುಟ್ಟಿದ ರಂಗರಾಯರು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೊರಟುಬಿಟ್ಟಿದ್ದರು. ಗಾಂಧಿ ಮತ್ತು ಅಂಬೇಡ್ಕರ್ ಗೂ ಮುಂಚೆಯೇ.

ಗಾಂಧಿ ಮತ್ತು ಅಂಬೇಡ್ಕರ್ ಎದುರಿಸಿದ ಸಂಕಷ್ಟಗಳು, ಸವಾಲುಗಳ ಬಗ್ಗೆ ನಾವು ಓದಿದ್ದೇವೆ ಬೇಕಾದಷ್ಟು. ಹಾಗಾದರೆ ಅವರಿಗೂ ಮುನ್ನವೇ ಮನುಷ್ಯನನ್ನು ಕಾಣಲು ಹೋರಾಟ ಕುದ್ಮುಲ್ ರಂಗರಾಯರ ಹಾದಿ ಎಂತಹದ್ದಿರಬಹುದು?

ಕುದ್ಮುಲ್ ರಂಗರಾಯರು ಜಾತಿಯಿಂದ ಎತ್ತರದ ಸ್ಥಾನದಲ್ಲಿದ್ದರು. ಆದರೆ ಆ ಉಪ್ಪರಿಗೆಯನ್ನು ಅವರೇ ತೊಡೆದು ಹಾಕಿ ದಲಿತರೆಡೆಗೆ ನಡೆದುಬಂದರು.

ಶಿಕ್ಷಣವೊಂದೇ ಸಮಾನತೆಗೆ ಮೊದಲ ಬೆಳಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವರು ಮೊದಲು ಕೈ ಹಾಕಿದ್ದು ದಲಿತ ಶಾಲೆಯ ಸ್ಥಾಪನೆಗೆ. ಅಂಬೇಡ್ಕರ್ ಹಾಗೂ ಗಾಂಧೀಜಿ ಹೋರಾಟದ ಕಣಕ್ಕೆ ಇಳಿಯುವ ಮೊದಲೇ..

ಅವರತ್ತ ಕಲ್ಲು ತೂರಿಬಂತು, ಮಕ್ಕಳಿಗೆ ದಾರಿಯಲ್ಲಿ ಅಪಮಾನ ಮಾಡಲಾಯಿತು, ಶಾಲೆಗೆ ಮಕ್ಕಳು ಬರದಂತೆ ಮಾಡಲಾಯಿತು. ಮಕ್ಕಳು ಬಂದರೂ ಶಿಕ್ಷಕರೇ ಇರದಂತಾಯಿತು. ಈ ಎಲ್ಲವನ್ನೂ ದಾಟಿಕೊಂಡೇ ಕುದ್ಮುಲ್ ಆರು ಹೆಜ್ಜೆ ಹಾಕಿದರು. ಅವರೊಳಗೆ ಒಬ್ಬ ಮನುಷ್ಯ ಹುಟ್ಟಿ ಸಾಕಷ್ಟು ವರ್ಷವಾಗಿ ಹೋಗಿತ್ತು.

ರಂಜಾನ್ ದರ್ಗಾ ಹೇಳುತ್ತಾರೆ ‘ಅವರು ಶಿಕ್ಷಣ, ಭೂಮಿ ಹಾಗೂ ಅಧಿಕಾರ ಈ ಮೂರನ್ನೂ ದಲಿತರ ಏಳಿಗೆಯ ದೀವಿಗೆಯಾಗಿ ಬಳಸಿದರು’ ಎಂದು.

ಕುದ್ಮುಲ್ ರಂಗರಾಯರು ‘ಡಿಪ್ರೆಸ್ಡ್ ಕ್ಲಾಸ್ ಮಿಷನ್’ ಹುಟ್ಟು ಹಾಕಿದರು. ದಲಿತರು ಮಹಿಳೆಯರ ಪರವಾಗಿ ನಿಂತರು. ಆ ಕಾಲಕ್ಕೆ ಮುನಿಸಿಪಾಲಿಟಿಯಲ್ಲಿ ಜಿಲ್ಲಾ ಬೋರ್ಡ್ ಗಳಲ್ಲಿ ದಲಿತರ ನೇಮಕಕ್ಕೆ ಆಗ್ರಹಿಸಿ ಯಶಸ್ಸೂ ಗಳಿಸಿದರು.

‘ಅವರಿಗೆ ಕ್ಷೌರ ಮಾಡಲು ಯಾರೂ ಮುಂದೆ ಬರಲಿಲ್ಲ, ಬಟ್ಟೆ ಒಗೆಯಲು ಮುಂದೆ ಬಂದವರು ಬಹಿಷ್ಕಾರಕ್ಕೆ ಒಳಗಾಗುತ್ತಿದ್ದರು’ ಎನ್ನುತ್ತಾರೆ ಲಕ್ಷ್ಮಣ ಕೊಡಸೆ.

ಬಟ್ಟೆಗೆ ಅಂಟಿದ ಕೊಳೆಯನ್ನಾದರೂ ಹಾಗೇ ಬಿಡಬಹುದು ಆದರೆ ಮನಸ್ಸಿಗೆ ಅಂಟಿದ ಕೊಳೆ? . ಹಾಗಾಗಿಯೇ ಕುದ್ಮುಲ್ ರಂಗರಾಯರು ಕೊಳೆ ತೊಳೆಯುವ ಮಡಿವಾಳನಂತೆ, ಜಗದ ಕೊಳೆ ತೊಲಗಿಸುವ ಜಲಗಾರನಂತೆ ಹೆಜ್ಜೆ ಹಾಕಿದರು.

ನಾನು ‘ಬ್ರಹ್ಮ ಸಮಾಜ’ದ ಆ ನೆಲದಲ್ಲಿ ಕಾಲಿಟ್ಟಾಗ ಎಲ್ಲೆಲ್ಲೂ ಹಸಿರು ಮುಕ್ಕಳಿಸುತ್ತಿತ್ತು. ಮಂಗಳೂರಿನ ಹೃದಯ ಭಾಗದಲ್ಲೇ ಕುದ್ಮುಲ್ ರಂಗರಾಯರ ಸಮಾಧಿ ಇತ್ತು. ಮಂಗಳೂರಿಗೇ ಹೃದಯವಂತಿಕೆ ಕೊಟ್ಟ ಅವರು ಅಲ್ಲೇ ಇದ್ದರು.

ನಾನು ಕ್ಯಾಮೆರಾ ಕ್ಲಿಕ್ಕಿಸುತ್ತಾ ಹೋದೆ.

ಮನುಷ್ಯರಿಗೆ ಹೃದಯ ಕೊಡಬಹುದು ಆದರೆ ತಂತ್ರಜ್ಞಾನದ ನಾಗಾಲೋಟದಲ್ಲಿ ತಾನೂ ಇನ್ನೊಂದು ಮೆಷಿನ್ ಮಾತ್ರವಾಗಿರುವ ಸಮಾಜಕ್ಕೆ ಹೃದಯ ಕಸಿ ಮಾಡುವುದು ಹೇಗೆ? ಎನ್ನುವುದು ತಲೆಯಲ್ಲಿ ಸುತ್ತಿ ಸುಳಿಯಲಾರಂಭಿಸಿತು.

ಹೊರಡಲು ಕಾರು ಸಜ್ಜಾಯಿತು. ಒಂದಷ್ಟು ದೂರ ಸಾಗಿರಬಹುದೇನೋ..

“ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ..”

-ಎಂದು ಅವರ ಸಮಾಧಿಯ ಮೇಲೆ ಇದ್ದ ಮಾತು ಕಾರಿನ ಚಕ್ರದಂತೆಯೇ ನನ್ನೊಳಗೆ ಸುತ್ತಲಾರಂಭಿಸಿತು.