ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಆ ಎರಡು ಜೊತೆಚಪ್ಪಲಿಗಳು

ಫಳಕ್ಕನೆ ಒಂದು ಹನಿ ಕಣ್ಣೀರು ಯಾರಿದ್ದರೇನಂತೆ ಎಂದು ಕೆನ್ನೆ ಮೇಲೆ ಜಾರಿಯೇ ಬಿಟ್ಟಿತು

ಆಗಿದ್ದು ಇಷ್ಟೇ-

ಅದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ
ನಾನೇ ನಿರ್ವಹಣೆ ಮಾಡುತ್ತಿದ್ದೆ

ವೇದಿಕೆಗೆ ಕರೆಯಲು ಎಲ್ಲಾ ಅತಿಥಿಗಳೂ ಬಂದಿದ್ದಾರೋ ಎಂದು ನೋಡಲು ಬಂದವನು
ಮತ್ತೆ ವೇದಿಕೆ ಹತ್ತಲು ಹೋಗುತ್ತಿದ್ದೆ

ಆಗ.. ಆಗ.. ಕಣ್ಣಿಗೆ ಕಾಣಿಸಿಕೊಂಡುಬಿಟ್ಟಿತ್ತು ಆ ಎರಡು ಜೊತೆ ಚಪ್ಪಲಿಗಳು

ಎರಡು ಜೊತೆ ಹವಾಯ್ ಚಪ್ಪಲಿಗಳು ನುಗ್ಗಾಗಿ ಒಂದು ಮೂಲೆಯಲ್ಲಿ ಬಿದ್ದಿತ್ತು

ಯಾರದ್ದು ಈ ಚಪ್ಪಲಿ ಎಂದು ಕೇಳಲು ಬಾಯಿ ತೆರೆದೆ
ತಕ್ಷಣ ಹೊಳೆದು ಹೋಯಿತು

‘ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೋ
ಶಿವನೇ ನಿನ್ನಾಟ ಬಲ್ಲವರು ಯಾರವರೋ..’

ಎಂದು ತಂಬೂರಿ ಮೀಟುತ್ತಾ ಬೋರಮ್ಮ ಏರು ಕಂಠದಲ್ಲಿ ಆ ಶಿವನನ್ನು ಮೆಚ್ಚಿಸುತ್ತಿದ್ದರು

ಪಕ್ಕದಲ್ಲಿ ತಂಬೂರಿ ಜವರಯ್ಯ ಕಂಜರಕ್ಕೆ ಸಣ್ಣ ಪೆಟ್ಟು ಕೊಡುತ್ತಾ ಸಾಥ್ ನೀಡಿದ್ದರು

ವಸ್ತುಷಃ ಇನ್ನೊಂದೇ ಲೋಕಕ್ಕೆ ಪ್ರತಿಯೊಬ್ಬರನ್ನೂ ಸೆಳೆದೊಯ್ಯುತ್ತಿದ್ದ,
ನಾದದ ನದಿಯೊಂದು ಹರಿಯುವಂತೆ ಮಾಡಿದ್ದ ತಂಬೂರಿ ಜವರಯ್ಯ ಹಾಗೂ ಬೋರಮ್ಮನವರ ಚಪ್ಪಲಿಗಳು ಅವು

ಯಾಕೋ ನನಗೆ ಮತ್ತೆ ವೇದಿಕೆಗೆ ಹೆಜ್ಜೆಯಿಡುವ ಮನಸ್ಸೇ ಬರಲಿಲ್ಲ

ನಾದದ ಶ್ರೀಮಂತಿಕೆಯನ್ನೇ ಕಂಠದಲ್ಲಿ ಮೊಗೆದಿಟ್ಟುಕೊಂಡಿದ್ದ ದಂಪತಿಗಳ ಚಪ್ಪಲಿಗಳು ಮಾತ್ರ
ತಮ್ಮ ಕಡು ದುಃಖದ ಕಥೆಗಳನ್ನು ಹೇಳುತ್ತಾ ಬಿದ್ದಿದ್ದವು

ಇಡೀ ರಾತ್ರಿ ಎಂದರೆ ರಾತ್ರಿ, ಇಡೀ ಬೆಳಗು ಎಂದರೆ ಬೆಳಗು
ಇಲ್ಲ ಹಗಲೂ ರಾತ್ರಿ ಹಾಡಿ ಎಂದರೂ ಒಂದೇ ಸಮನೆ ಹಾಡುವ

‘ಇಲ್ಲೀಗೆ ಹರ ಹರ, ಇಲ್ಲೀಗೆ ಶಿವ ಶಿವ’
ಎಂದು ಮುಗಿತಾಯ ಮಾಡಲು ಗೊತ್ತಿಲ್ಲದ ಜೀವಗಳು ಅಲ್ಲಿ ಹೊಸ ಲೋಕ ಸೃಷ್ಟಿಸುತ್ತಾ ಕುಳಿತಿದ್ದವು

ರಾಗಿ ಕಲ್ಲಿನ ಮೇಲೆ ಚೆಲ್ಲೀದೆ ನಮ್ಮ ಹಾಡು
ಬಲ್ಲಂತ ಜಾಣರು ಬರಕೊಳ್ಳಿ। ನಮ ಹಾಡ
ಬಳ್ಳ ತಕ್ಕೊಂಡು ಆಳಕೊಳ್ಳಿ.. ಎನ್ನುವ ಹಾಗೆ

ಅವತ್ತೂ ಹೀಗೇ ಆಗಿತ್ತು

ಇಡೀ ಕನ್ನಡ ನಾಡು ನುಡಿಯ ಸಂಭ್ರಮದಲ್ಲಿತ್ತು
ನಾಡಿಗೆ ಗೌರವ ತಂದವರನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪದಕವನ್ನು ಅವರ ಕೊರಳಿಗೆ ಹಾಕಲು ಸಜ್ಜಾಗಿತ್ತು

ಆಗ ಅದೇ ಸಂಜೆ ನಾನು ಸುಳ್ಯದ ಕಾಡುಮೇಡುಗಳ ಒಳಗಿರುವ ಚಂದ್ರಗಿರಿ ಅಂಬು ಅವರ ಮನೆಯಲ್ಲಿದ್ದೆ

ಮನೆ ಎಂದರೆ ಮನೆ ಅಷ್ಟೇ
ಅದನ್ನು ಗುಡಿಸಲು ಎಂದರೆ ಗುಡಿಸಲು
ಎರಡೂ ಅಲ್ಲ ಅಂದರೆ ಎರಡೂ ಅಲ್ಲ ಎನ್ನುವ ಪರಿಸ್ಥಿತಿ ಅಲ್ಲಿತ್ತು.

ಒಂದು ಕಾಲಕ್ಕೆ ಕಣ್ಣ ಮುಂದೆ ಯಕ್ಷ ಕಿಂಕರರನ್ನು ತಂದು ನಿಲ್ಲಿಸುತ್ತಿದ್ದ
ದೇವ ದಾನವರನ್ನು ತಮ್ಮ ಧೀಂಗಿಣದಲ್ಲಿ ಧರೆಗಿಳಿಸಿಬಿಡುತ್ತಿದ್ದ
ಒಂದೇ ಒಂದು ಅಟ್ಟಹಾಸದಲ್ಲಿ ಅಷ್ಟೂ ಖಳರನ್ನು ನೆನಪಿಸಿಬಿಡುತ್ತಿದ್ದ ಅಂಬು ಹಣ್ಣಾಗಿ ಮಲಗಿದ್ದರು

ನಾಡು ಸಂಭ್ರಮದಲ್ಲಿತ್ತು
ಇನ್ನು ನಾನು ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ ಎನ್ನುವುದು ಅವರಿಗೆ ಗೊತ್ತಾಗಿ ಹೋಗಿತ್ತು
ಬಣ್ಣ ಕಳಚುವ ಸಮಯ ಸನ್ನಿಹಿತವಾಗಿತ್ತು

ನಾನು ಅವರ ಜೊತೆ ಒಂದೆರಡು ಮಾತು ಆಡುತ್ತಾ
‘ಅಜ್ಜಾ ನಿಮಗೆ ಬಂದ ರಾಜ್ಯೋತ್ಸವ ಪದಕ ಎಲ್ಲಿ’ ಎಂದೆ

ಅವರ ಕಣ್ಣು ಆಗಲೇ ಮಬ್ಬಾಗಿ ಹೋಗಿತ್ತು
ಹಾಗಾಗಿ ನನಗೆ ಅಲ್ಲಿ ಯಾವ ಭಾವನೆಯಿತ್ತೋ ಖಂಡಿತಾ ಓದಲಾಗಲಿಲ್ಲ

ಅದು ಎಂದೋ ಮಾರಿಯಾಯ್ತು ಎಂದರು
ನಾನು ಶಾಕ್ ಹೊಡೆದು ಕುಳಿತೆ

ಯಾಕಜ್ಜಾ ಎನ್ನುವ ನನ್ನ ದನಿ ನನಗೇ ಕೇಳಿಸದಷ್ಟು ಕ್ಷೀಣವಾಗಿತ್ತು

‘ಅದರಲ್ಲಿ ಬಂಗಾರದ ಲೇಪ ಇರುತ್ತಪ್ಪಾ ಅದನ್ನ ಮಾರಿ ಒಂದು ತಿಂಗಳು ಹೆಚ್ಚು ಬದುಕಿದೆ’ ಎಂದರು

ಅದೇ ವೇಳೆ ಅಂದರೆ ಅದೇ ವೇಳೆಗೆ ಸರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಹಲವು ಕಲಾವಿದರ ಕೊರಳಿಗೆ ಅದೇ ಬಂಗಾರದ ಲೇಪವಿರುವ ಪದಕ ತೊಡಿಸುತ್ತಿದ್ದರು

ಯಾಕೋ ನನಗೆ ವೇದಿಕೆಯಲ್ಲಿ ಸಂಭ್ರಮ ಪಡುತ್ತಾ ಇದ್ದವರ ಭವಿಷ್ಯವನ್ನು ಕಣ್ಣಾರೆ ಕಾಣುತ್ತಿದ್ದೇನೆ ಎನಿಸಿ ಮರಗಟ್ಟಿದೆ

ಇನ್ನೊಂದು ಸಲ ಹೀಗಾಯ್ತು

ಎಲಿಸವ್ವ ಮಾದರ ಬಂದಿದ್ದರು

ಬಾರೆ ನವುಲ ಹಕ್ಕಿ ಸರಸೋತಿ …
ಎಂದು ಆಕೆ ದನಿ ತೆಗೆದರೆ ಹಾಡುತ್ತಿರುವ ಆಕೆಯೇ ಸರಸೋತಿ ಎನಿಸಿ ಹೋಗಿತ್ತು

ಅಂತಹ ಎಲಿಸವ್ವ ಒಮ್ಮೆ ಮದುವೆ ಮನೆಯಲ್ಲಿ ಸೋಬಾನದ ಪದಗಳನ್ನು ಹೇಳುತ್ತಾ ಕುಳಿತಿದ್ದರು

‘ಗಟ್ಟಿ ಮೇಳ.. ಗಟ್ಟಿ ಮೇಳ’ ಎಂದದ್ದಷ್ಟೇ ಅವರಿಗೆ ಗೊತ್ತು ಆಮೇಲೆ ಏನಾಯ್ತು ಎನ್ನುವುದೇ ಅವರಿಗೆ ಗೊತ್ತಾಗಲಿಲ್ಲ

ಗೊತ್ತಾಗುವ ಸಮಯ ಬಂದಾಗ ಆಕೆಯ ಒಂದು ಕಣ್ಣೇ ಹೋಗಿತ್ತು

ಮಾಂಗಲ್ಯ ಕಟ್ಟುವ ವೇಳೆಗೆ ಜನ ಅಕ್ಷತೆ ಕಾಳು ತೂರಿದ್ದರು
ಹಾಡುತ್ತಾ ಕುಳಿತ ಎಲಿಸವ್ವನ ಕಣ್ಣಿನತ್ತ ಆ ಕಾಳುಗಳು ತೂರಿ ಬಂದವು

‘ಯಾಕವ್ವಾ ಯಾರೂ ದವಾಖಾನಿಗೆ ಕರಕೊಂಡು ಹೋಗ್ಲಿಲ್ವಾ’ ಅಂದೆ
‘ಕರಕೊಂಡು ಹೋಗೋದಕ್ಕೆ ರಗಡ್ ಮಂದಿ ಆದಾರ
ಆದರೆ ಖರ್ಚು ನಿಭಾಯ್ಸೋ ಶಕ್ತಿ ಆ ಹಣಮಪ್ಪ ನಮಗೆ ಕೊಟ್ಟಿಲ್ಲ’ ಎಂದರು

ಎಚ್ ಎಲ್ ನಾಗೇಗೌಡರು ‘ಆದಿವಾಸಿ ಮಹಿಳೆಯರ ಜಾನಪದ ಕಲಾಮೇಳ’ ಮಾಡಬೇಕು ಎಂದು ಮುಂದಾದರು
ಹಗಲೂ ರಾತ್ರಿ ಅದರ ರೂಪು ರೇಷೆ ಸಿದ್ಧಮಾಡಿಕೊಟ್ಟೆ

ಆಗ ಒಂದಷ್ಟು ದಿನ ಜೋಗತಿಯೊಬ್ಬಳ ಜೊತೆ ಓಡಾಡಬೇಕಾಯಿತು
‘ಅಣ್ಣಾ ಮಾಸಾಶನ ಸಿಗಬೋದ’ ಅಂದಳು
‘ಯಾಕವ್ವಾ’ ಅಂದೆ
‘ಮೈ ಮಾರಿಕೊಳ್ಳೋದಾದ್ರೂ ನಿಲ್ಲಿಸ್ತೀನಿ ಅಣ್ಣಾ’ ಎಂದು ಕಣ್ಣೀರಾದಳು

‘ಜಾನಪದ ಜಂಗಮ’ ಎನ್ನುವ ಬಿರುದನ್ನೇ ಇತ್ತರು ಎಸ್ ಕೆ ಕರೀಂ ಖಾನ್ ಅಜ್ಜನಿಗೆ

ಬೀದಿ ಬೀದಿಯಲ್ಲಿ, ಸಂತೆ ಸೇರುವಲ್ಲಿ ಜಾನಪದ ಗೀತೆಗಳ ಮೂಲಕವೇ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಿದ ಕಂಠ ಅದು

ನಾನು ಅವರ ಕೋಣೆಯ ಬಾಗಿಲು ತಟ್ಟಿದಾಗ ಅವರೂ ತಮ್ಮ ದಿನಗಳನ್ನು ಲೆಕ್ಕ ಮಾಡುತ್ತಿದ್ದರು

ಹೋಟೆಲ್ ನವರು ಕೊಟ್ಟ ಒಂದು ಕೋಣೆಯಲ್ಲೇ ಬದುಕು ತಳ್ಳುತ್ತಾ ಇದ್ದರು
ಔಷಧಿ ಬೇಕಿತ್ತು ಹಣವಿರಲಿಲ್ಲ

ಅವರ ಜೊತೆ ದಿನಗಟ್ಟಲೆ ಕಾಡು ಕಣಿವೆ ನದಿ ಸಮುದ್ರ ಎಲ್ಲವನ್ನೂ ಸುತ್ತಿದ್ದೆ

ಜೋಶ್ ಬಂದಾಗ ಆ ತಣ್ಣನೆಯ ರಾತ್ರಿಯನ್ನು ಸೀಳುವಂತೆ ಎತ್ತರದ ಕಂಠದಲ್ಲಿ ಹಾಡುವುದು ಕೇಳಿದ್ದೆ

ಅವರು ಈಗ ಒಂದು ಹಸುವಿನಂತೆ ಕಂಗಾಲಾಗಿ ನನ್ನೆಡೆ ನೋಡುತ್ತಿದ್ದರು

‘ಯಾಕೆ ಸರ್ ಸರ್ಕಾರವನ್ನ ಕೇಳಬಹುದಿತ್ತಲ್ಲಾ’ ಎಂದೆ

ಅವರು ಅಂತಹ ನೋವಿನಲ್ಲೂ ನಕ್ಕುಬಿಟ್ಟರು

ಸ್ವಾತಂತ್ರ್ಯ ಹೋರಾಟಗಾರರಿಗಿರುವ ಪಿಂಚಣಿ ಕೇಳಲು ಹೋದೆ
ನೀವು ಹೋರಾಟಗಾರ ಎನ್ನುವುದಕ್ಕೆ ಪ್ರೂಫ್ ಬೇಕು’ ಎಂದರು
‘ಏನು ಮಾಡಬೇಕು ಹೇಳಿ’ ಅಂದೆ
‘ನಿಮ್ಮ ಜೊತೆ ಆ ಕಾಲದಲ್ಲಿ ಹೋರಾಡಿದ ಇಬ್ಬರ ಸಹಿ ಬೇಕು’ ಅಂದರು

‘ಆ ಕಾಲದಲ್ಲಿದ್ದವರ ಪೈಕಿ ಎಲ್ಲರೂ ಸತ್ತು ಎಷ್ಟೋ ವರ್ಷವಾಗಿತ್ತು
ಅವರ ಸಹಿ ಕೇಳುವುದು ಹೇಗೆ’

‘ನಾನು ಎರಡು ಸಹಿ ಕೊಡಲಿಲ್ಲ ಸ್ವಾತಂತ್ರ್ಯ ಹೋರಾಟಗಾರ ಎಂದು ಅನಿಸಿಕೊಳ್ಳಲಿಲ್ಲ
ಪಿಂಚಣಿ ಸಿಗಲಿಲ್ಲ’ ಎಂದರು

ಅದೇ ಅದೇ ಕರೀಂ ಖಾನ್ ಅಜ್ಜನ ಜೊತೆ ಸಮುದ್ರದ ಬದಿಯಲ್ಲಿ, ಬೆಳದಿಂಗಳ ಕೆಳಗೆ ಕುಣುಬಿಯರ ಕಾಲೋನಿಯಲ್ಲಿ ಹೆಜ್ಜೆ ಹಾಕುತ್ತಿದ್ದೆ

ಹಾದೀಲಿ ಹೋಗೋರೆ ಹಾಡೆಂದು ಕಾಡ್ಬೇಡಿ
ಹಾಡಲ್ಲ ನನ್ನ ಒಡಲುರಿ। ದೇವರೇ
ಬೆವರಲ್ಲ ನನ್ನ ಕಣ್ಣೀರು

ಅಂತ ಹಾಡಿದ್ದು ನೆನಪಾಯ್ತು

ಈಗ ಆ ಎರಡು ಚಪ್ಪಲಿಗಳತ್ತ ನೋಡಿದರೆ ಅವೂ ಅದೇ ಹಾಡು ಹಾಡುತ್ತಿದ್ದವು

ಹಾಡಲ್ಲ ನನ್ನ ಒಡಲುರಿ ದೇವರೇ ಅಂತ