ಜಿ.ಎನ್. ಮೋಹನ್ ಕ್ವಾರಂಟೈನ್ ಮೆಲುಕು: ನನ್ನ ಬೊಗಸೆ ಖಾಲಿಯಾಗಿಯೇ ಉಳಿಯಿತು..

ನನ್ನ ಬೊಗಸೆ ಖಾಲಿಯಾಗಿಯೇ ಉಳಿಯಿತು..

ಸಿಕ್ಕಾಪಟ್ಟೆ ಕುಡಿದಿದ್ದೆ
ನಿಲ್ಲಲಾಗುತ್ತಿರಲಿಲ್ಲ.. ತೂರಾಡುತ್ತಿದ್ದೆ..
ಮನೆಗೆ ಬಂದವನೇ ಕೈಗೆ ಸಿಕ್ಕಿದ್ದು ತೆಗೆದುಕೊಂಡು ಅವಳಿಗೆ ಬಡಿಯಲು ಶುರು ಮಾಡಿದೆ.
ಅವಳು ನನ್ನ ಮೇಲೆ ಖಂಡಿತಾ ಕೈಯೆತ್ತಲಿಲ್ಲ
ಚೀರಲಿಲ್ಲ, ನೆರೆಯವರಿಗೆ ಕೇಳಿಸಲೂ ಬಾರದು ಎನ್ನುವಂತೆ ಬಿಕ್ಕಿದಳು..

ನನಗೆ ಅದರ ಕೇರೇ ಇರಲಿಲ್ಲ
ಇದ್ದ ಬುದ್ದಿಯನ್ನು ಬದಿಗೆ ಬಿಸಾಡಿ ಅವಳನ್ನು ಬಡಿಯುತ್ತಾ ಹೋದೆ
ಬಡಿದೇ ಬಡಿದೆ

ಇಷ್ಟೆಲ್ಲಾ ಆಗಿದ್ದು ದೂರದ ಕನಕಪುರದ ಆಚೆಯ ಒಂದು ಹಳ್ಳಿಯಲ್ಲಿ.
ನಾನು ಕುಡುಕ ಗಂಡನ ವೇಷದಲ್ಲಿದ್ದೆ.

ನನ್ನೆದುರು ಇದ್ದಾಕೆ ದಿನವಿಡೀ ದುಡಿದು ಸುಸ್ತಾಗಿ ಹೋಗಿದ್ದ ಹೆಣ್ಣು
ಆಕೆ ಕೂಲಿಯ ಹೆಣ್ಣು,
ಆಕೆ, ಕಾರ್ಖಾನೆಯ ಹೆಣ್ಣು,
ಆಕೆ ಕಾರ್ಪೊರೇಟ್ ಹೆಣ್ಣು,
ಆಕೆ ‘ಹೆಣ್ಣು’

ಅದು ಬೀದಿ ನಾಟಕ, ಸಾಂಸ್ಕೃತಿಕ ಜಾಥಾ ಅದು
ಊರಿಂದೂರಿಗೆ ತಿರುಗುತ್ತಾ, ಹಳ್ಳಿ, ಗಲ್ಲಿ, ಕಚೇರಿ ಎದುರು ಫ್ಯಾಕ್ಟರಿ ಮುಂದೆ ನಾಟಕ ಆಡುತ್ತಾ ಆಡುತ್ತಾ ಬರುತ್ತಿದ್ದೆವು

ಆಗ ನಡೆದು ಹೋಯಿತು ಒಂದು ಅಚ್ಚರಿ.
ನಾನು ಕಲ್ಲಾಗಿ ನಿಂತುಬಿಟ್ಟೆ
ನನ್ನೊಳಗೆ ಅರಿವು ಬಿತ್ತಿದ ಘಟನೆ ಅದು

ಬೀದಿ ನಾಟಕ ಮುಗಿದು ಆದ ನಂತರ ಜಾಥಾದ ಖರ್ಚಿಗಾಗಿ ನಾಟಕ ನೋಡುತ್ತಿದ್ದವರಿಂದಲೇ ಹಣ ಸಂಗ್ರಹಿಸುತ್ತಿದ್ದೆವು.

ನಾಟಕ ಮುಗಿದ ತಕ್ಷಣ ಎಲ್ಲಾ ನಟರೂ ಒಂದು ಟವೆಲ್ ಹಿಡಿದು ದೊಂಬರಾಟದವರ ರೀತಿ ಎಲ್ಲರ ಮುಂದೆ ಒಂದು ಸುತ್ತು ಹಾದು ಬರುತ್ತಿದ್ದೆವು.

ನಾಟಕ ನೋಡಿದವರು ತಮ್ಮಲ್ಲಿದ್ದ ಪುಡಿಗಾಸಿನಿಂದ ಹಿಡಿದು ದೊಡ್ಡ ನೋಟಿನವರೆಗೆ ತಮ್ಮ ಕೈಲಾದಷ್ಟು ಆ ಟವೆಲ್ ನೊಳಗೆ ಸೇರಿಸುತ್ತಿದ್ದರು.

ಆಗ ಆಯಿತು ನೋಡಿ ಈ ಮ್ಯಾಜಿಕ್ ಎಲ್ಲಾ ನಟರೂ ಒಂದೆಡೆ ಸೇರಿ ತಮ್ಮ ಬಳಿ ಸಂಗ್ರಹವಾದ ಹಣವನ್ನು ಕೂಡಿಸಿ ತಂಡಕ್ಕೆ ಕೊಡಲು ಕುಳಿತರು. ನನ್ನ ಟವಲ್ ನಲ್ಲಿ ಒಂದೇ ಒಂದು ಪೈಸೆ ಬಿದ್ದಿರಲಿಲ್ಲ ನಾನೂ ಎಲ್ಲರಂತೆ ಪ್ರತಿಯೊಬ್ಬರೂ ಮುಂದೂ ಟವೆಲ್ ಹಿಡಿದು ತಿರುಗಿದ್ದೆ

ಆದರೆ ಒಬ್ಬರೆಂದರೆ ಒಬ್ಬರೂ ದುಡ್ಡು ಹಾಕಿರಲಿಲ್ಲ.
ನನ್ನ ಕೈನಲ್ಲಿ ಇದ್ದದ್ದು ಖಾಲಿ ಟವೆಲ್ ಮಾತ್ರ

ಆದರೆ ಇನ್ನೂ ಒಂದು ಮ್ಯಾಜಿಕ್ ಆಗಿಹೋಗಿತ್ತು
ಅದು ಇನ್ನೊಂದೇ ಹೊಸ ಪಾಠ

ಅದೇ ಕೂಲಿ ಹೆಣ್ಣಿನ ಮುಂದೆ ಇದ್ದ ಟವೆಲ್ ನಲ್ಲಿ ಇನ್ನಿಲ್ಲದಷ್ಟು ಹಣ.
ಆಕೆಯ ಟವೆಲ್ ಮೀರಿ ದುಡ್ಡು ಆಚೆ ತುಳುಕುತ್ತಿತ್ತು.

ಕೇವಲ ಐದತ್ತು ನಿಮಿಷದಲ್ಲಿ ಜನ ಇತಿಹಾಸ ಬರೆದಿದ್ದರು
ಕುಡುಕನ, ಪೀಡಕನ, ಬುದ್ದಿ ಇಲ್ಲದವನ ಹಣೆಬರಹ ನಿರ್ಧರಿಸಿಬಿಟ್ಟಿದ್ದರು

ಅದೇ ವೇಳೆ ಬದುಕು ಕಟ್ಟಲು ಹೆಣಗಾಡುತ್ತಿದ್ದ ಮಹಿಳೆಯ ಭವಿಷ್ಯಕ್ಕೂ ಕೈ ಜೋಡಿಸಿದ್ದರು.

ಇದನ್ನು ಬರೆದದ್ದು ಆಹಾರ ಇಲಾಖೆಯನ್ನು ಎಡತಾಕಲಾಗದ, ಒಂದಿಷ್ಟು ರೇಷನ್ ಮುಖವನ್ನೂ ನೋಡಲಾಗದ
ಇನ್ನೂ ಹೆಬ್ಬೆಟ್ಟಾಗಿಯೇ ಉಳಿದಿರುವ, ಕಾರ್ಖಾನೆಗಳಲ್ಲಿ ದುಡಿದು ಮಕ್ಕಳ ಕನಸಿಗೆ ಬುನಾದಿ ಹಾಕಿ ಕೊಡುತ್ತಿದ್ದ…

….ಕಣ್ಣೀರಲ್ಲಿ ಕೈ ತೊಳೆದರೂ ಸ್ವಾಭಿಮಾನದಿಂದ ಬದುಕುತ್ತಿದ್ದ
ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದ, ಗೋಡೆಗೆ ಸುಣ್ಣ ಹೊಡೆಯುತ್ತಿದ್ದ..
ಈ ಎಲ್ಲಕ್ಕಿಂತ ಹೆಚ್ಚಾಗಿ ತಾವೂ ಕುಡುಕ ಗಂಡನನ್ನು ಪಡೆದಿದ್ದ, ಒದೆತ ತಿಂದಿದ್ದ ಭಿಕ್ಕಿದ್ದ ಜೀವಗಳು

ಜಗತ್ತು ಗೊತ್ತಿಲ್ಲದ, ಸೈಬರ್ ಲೋಕದಲ್ಲಿ ಉಸಿರೂ ಇಲ್ಲದ, ಯಾರ ಲೆಕ್ಕಕ್ಕೂ ಇಲ್ಲದ ಜೀವಗಳು
ಸಮಯ ಬಂದಾಗ ತಮ್ಮ ‘ಪವಾಡ’ ತೋರಿಸಿದ್ದವು.
ಎಂತಹ ಮಾತಿಗೂ ಮರುಳಾಗದೆ ತಮ್ಮೊಳಗಿಗೆ ತಾವೇ ದಣಿಯಾಗಿದ್ದವು..

ಇನ್ನೊಮ್ಮೆ ಹೀಗೆ ಆಗಿತ್ತು.
‘ಪತ್ರೆ ಸಂಗಪ್ಪ’ ಅಂತ ಒಬ್ಬ ಇದ್ದ. ಬೇಡ ಬೇಡವೆಂದರೂ ಜೀತಕ್ಕೆಳೆದುಕೊಂಡು ಹೋದರು.
ಸಿಕ್ಕ ಪುಟ್ಟ ಕಾರಣಕ್ಕೆ ಚಿತ್ರಹಿಂಸೆ, ಕೊನೆಗೆ ಆತನ ಕೊಲೆಯೇ ಆಗಿ ಹೋಯ್ತು

ಆ ನಾಟಕ ನಡೆಯುತ್ತಿತ್ತು.

ಗೌಡ ಪತ್ರೆ ಸಂಗಪ್ಪನನ್ನು ಒದ್ದು ಬಡಿದು ಮಾಡುತ್ತಿದ್ದ
ಆ ನಾಟಕ ನೋಡುತ್ತಾ ಕುಳಿತಿದ್ದ ಹಣ್ಣು ಹಣ್ಣು ಮುದುಕಿ ‘ಅವನ ಪೊಗರು ನೋಡು..’ ಅಂತ ಎದ್ದೇ ಬಿಟ್ಟಳು.

ಜನ ಎಲ್ಲಾ ಅವಳ ಕಡೆ ತಿರುಗಿದರು.
ಅಜ್ಜಿ ಪುನಃ ದನಿ ಏನೂ ಎತ್ತಲಿಲ್ಲ
ಆದರೆ ಇಡೀ ನಾಟಕದುದ್ದಕ್ಕೂ ಆಕೆಯ ನಿಟುಸಿರು ಕೇಳುತ್ತಿತ್ತು

ಇನ್ನೇನು ನಾಟಕ ಮುಗಿಯುತ್ತಾ ಬಂತು ತನ್ನ ಹತ್ತಿರದಲ್ಲೇ ನಿಂತಿದ್ದ ನಾಟಕ ಮಾಡುತ್ತಿದ್ದ ಒಬ್ಬನನ್ನು ಕರೆದಳು
ಆತ ನಾಟಕ ಮಾಡುತ್ತಿದ್ದ. ಕೈ ಸನ್ನೆ ಮಾಡಿ ಬರಲಾಗುವುದಿಲ್ಲ ಎಂದರೂ ಅಜ್ಜಿ ಸುಮ್ಮನೆ ಬಿಡುತ್ತಿಲ್ಲ
ಅಂತೂ ಮತ್ತೇನಾದರೂ ಅವಾಂತರವಾದರೆ ಎಂದು ಆತ ಯಾರಿಗೂ ಕಾಣದಂತೆ ಅಜ್ಜಿಯ ಬಳಿ ಬಂದ

ಆ ಅಜ್ಜಿ ಸೀರೆಯ ಸೆರಗಿನಲ್ಲಿ ಪಾಪ ತನ್ನ ಮೊಮ್ಮಕ್ಕಳಿಗಾಗಿ ಎಂದು ಕಟ್ಟಿಕೊಂಡಿತ್ತೇನೋ ಒಂದು ಚಾಕಲೇಟ್ ತೆಗೆದು ಕೊಟ್ಟಿತು

ನರಳುತ್ತಾ ಬಿದ್ದಿದ್ದ ಪತ್ರೆ ಸಂಗಪ್ಪನನ್ನ ತೋರಿಸಿದವಳೇ ಅವನಿಗೆ ಕೊಡು ಅಂದಳು.

ನಾಟಕ ನಡೆಯುತ್ತಿತ್ತು. ಇನ್ನೇನು ಗೌಡ ಪತ್ರೆ ಸಂಗಪ್ಪನನ್ನು ಕೊಲೆ ಮಾಡಿಯೇ ಬಿಡಬೇಕು
ಜನ ಉಸಿರುಗಟ್ಟಿ ನೋಡುತ್ತಿದ್ದರು
ಅಂತಹ ಜನಜಂಗುಳಿಯಲ್ಲೂ ಸಾಸಿವೆ ಬಿದ್ದರೆ ಸದ್ದಾಗುವಷ್ಟು ಮೌನ

ಆಗಲೇ ಆ ಅಜ್ಜಿ ದೊಡ್ಡದಾಗಿ ದನಿ ಎತ್ತೇಬಿಟ್ಟಿತು

‘ನಾನು ಕೊಟ್ಟಿದ್ದು ನಿನಗಲ್ಲ ಆ ಸಂಗಪ್ಪನಿಗೆ ಕೊಡು’ ಅಂತ

ಆ ಸಂಗಪ್ಪನೂ, ಆ ಗೌಡನೂ, ಆ ಎಲ್ಲಾ ನಟರೂ ನಾಟಕ ಎನ್ನುವುದನ್ನೂ ಮರೆತು ಇದೇನಪ್ಪಾ ಎಂದು ಅಜ್ಜಿಯ ಕಡೆ ತಿರುಗಿದರು

ಪತ್ರೆ ಸಂಗಪ್ಪನ ಬಳಿ ಹೋಗಿ ಆತ ಚಾಕಲೇಟ್ ಮುಟ್ಟಿಸುವವರೆಗೆ ನಾಟಕ ನಡೆಯಲೇ ಇಲ್ಲ

ಆಮೇಲೆಯೇ ಅಜ್ಜಿ ಸುಮ್ಮನಾಗಿದ್ದು, ನಾಟಕ ಮುಂದುವರೆದಿದ್ದು

‘ಆಕಾಶವಾಣಿಯ ಈರಣ್ಣ’ ಎ ಎಸ್ ಮೂರ್ತಿ ಕಂಚಿನ ಕಂಠದಲ್ಲಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದರು
ಪ್ರತಿಯೊಂದು ಅವಶ್ಯಕ ವಸ್ತುವಿನ ಬೆಲೆ ಆಕಾಶಕ್ಕೇರಿತ್ತು
ಜನರ ಬಡ ಬಾನಲವನ್ನು ಸುಟ್ಟು ಹಾಕಿತ್ತು
ಸೀಮೆಎಣ್ಣೆಯನ್ನೂ ಬಿಟ್ಟಿರಲಿಲ್ಲ

ಎ ಎಸ್ ಮೂರ್ತಿಗಳು ಧಿಕ್ಕಾರ ಧಿಕ್ಕಾರ ಎಂದು ಕೂಗಿದರಷ್ಟೇ
ಬೀದಿ ನಾಟಕದಲ್ಲಿದ್ದ ಅಷ್ಟೂ ಜನರೂ ಮರು ದನಿ ನೀಡಿದರು.
ನೋಡ ನೋಡುತ್ತಾ ಮೆರವಣಿಗೆ ಹೊರಟಿತು ಬೆಲೆ ಇಳಿಸದ ಸರ್ಕಾರದ ವಿರುದ್ಧ

ಮೆರವಣಿಗೆ ಒಂದು ಹಂತಕ್ಕೆ ಬಂದಿತು ಮೂರ್ತಿಗಳು ನೋಡುತ್ತಾರೆ
ತಾವು ಕರೆ ತಂದದ್ದು ೧೩ ಕಲಾವಿದರನ್ನು ಆದರೆ ಅದು ಇಪ್ಪತ್ತಾಗಿ ನಿಂತಿದೆ

ಇದೇನಪ್ಪಾ ಎಂದು ಅಂತಹ ಎ ಎಸ್ ಮೂರ್ತಿಯವರೇ ಬೆರಗಾಗಿ ನೋಡಿದರೆ
ಅವರೆಲ್ಲಾ ನಾಟಕ ನೋಡುತ್ತಾ ಕುಳಿತ ಜನ

ಅವರ ಮನೆಯಲ್ಲೂ ಸೀಮೆ ಎಣ್ಣೆ ಸಮಸ್ಯೆ ಇತ್ತು
ಸರಿ ಇವರು ನಾಟಕದಲ್ಲಿ ತೆಗೆದ ಮೆರವಣಿಗೆಯಲ್ಲಿ ಧಿಕ್ಕಾರ ಕೂಗುತ್ತ ತಾವೂ ಸೇರಿಹೋಗಿದ್ದರು

‘ಕೋಟಿ ಕೋಟಿ ಬಾಧೆಗಳಲ್ಲಿ
ಲಕ್ಷಾಂತರ ನೋವುಗಳಲ್ಲಿ
ನೀ ಹುಟ್ಟಿ ಬೆಳೆದೆಯಮ್ಮ
ನನ್ನ ತಂಗಿ ಅನಸೂಯ..’

ಎಂದು ದನಿ ತೆಗೆದದ್ದು ಮಾಲೂರು ತಾಲೂಕು ಟೇಕಲ್ ಹೋಬಳಿ ಹುಣಸೀಕೋಟೆಯಲ್ಲಿ ನಡೆದ ಅತ್ಯಾಚಾರದ ನಂತರ

ನಟರು ಬೀದಿಗಿಳಿದಿದ್ದರು ಅನಸೂಯಳ ಮೇಲೆ ನಡೆದ ಅತ್ಯಾಚಾರದ ನೋವು ಎಲ್ಲರಿಗೂ ತಟ್ಟಿತ್ತು

‘ಬೆಲ್ಚಿ’ ನಾಟಕ ನಡೆದಿತ್ತು
೧೧ ಜನ ದಲಿತರನ್ನು ಹಾಡಹಗಲೇ ಸುಟ್ಟು ಹಾಕಿದ ಪ್ರಕರಣ ಅದು

ಆ ನಾಟಕದಲ್ಲಿ ಒಂದು ಸಂಭಾಷಣೆ ಬರುತ್ತದೆ
ಈ ಘಟನೆ ನಡೆದ ಎಷ್ಟೋ ಕಾಲದ ನಂತರ ದೊಡ್ಡ ಬೆಂಗಾವಲಲ್ಲಿ ಇಂದಿರಾ ಬರುತ್ತಾರೆ..
ಹೇಗೆ ಬಂದ್ರು ಅಂತೀರಾ
ಆನೆ ಮೇಲೆ ಬಂದ್ಲು.. ಅಂಬಾರೀನಲ್ಲಿ ಬಂದ್ಲು.. ಅಂತ

ಯಾವಾಗ ಆ ಡೈಲಾಗ್ ಬಂತೋ- ಈ ಸಲಾನೂ ಬರ್ತಾಳೇನು ಆಕಿ
ಬರ್ಲಿ ಎಲ್ಲಾ ತಯಾರು ಮಾಡಿ ಇಟ್ಕೊಂಡೇವಿ
ಆಕಿ ಒಂದ್ಕಡಿ.. ಚಷ್ಮಾಒಂದ್ಕಡಿ ಮಾಡ್ತೀವಿ ಅಂತ ಎದ್ದು ನಿಂತೇಬಿಟ್ಟರು

ಇದೇ ನಾಟಕ ನೋಡುತ್ತಿದ್ದ ಮದೀನಾಬಿ ಕಣ್ಣೇರು ಹಾಕುತ್ತಾ ಕುಳಿತಿದ್ದಳು

ಯಾಕವ್ವಾ ಅಂತ ಕೇಳಿದ್ರೆ

‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆಯ
ಕಥೆಯೊಂದ ಹೇಳತೀವಿ
ಸಾರಿ ಸಾರಿ ಹೇಳತೀವಿ
ಕಿವಿಗೊಟ್ಟು ಕೇಳಿರಣ್ಣಾ ನೋವೀನಾ ರಾಗವನ್ನು’
ಅನ್ನುವ ಹಾಡು ಅವಳನ್ನು ಕದಲಿಸಿಹಾಕಿತ್ತು.

ಚಲೋ ಹಾಡು ಹೇಳ್ತೀರಿ ಅರ್ಥ ಆಗೋ ಮಂದಿಗೆ ಅರ್ಥ ಆಗ್ತಾವ ಅಂತ ನಿಟ್ಟುಸಿರಿಟ್ಟಳು

ಪತ್ರೆ ಸಂಗಪ್ಪ ಇನ್ನೊಂದೆಡೆ ಇನ್ನೇನು ಕೊಲೆಯಾಗಲು ಸಜ್ಜಾಗಿದ್ದ
ಊರಿನ ಗೌಡ ಗುಟುರು ಹಾಕುತ್ತಿದ್ದ
ಏನು ಮಾಡ್ಲಿ ಊರಿಗೆ ಹೋದ್ರೆ ಗೌಡ ನನ್ನ ಕೊಲೆ ಮಾಡಿಸಿಬಿಡ್ತಾನೆ ಅಂತ ಭಯದಿಂದ ನಿಟ್ಟುಸಿರಿಟ್ಟ

ಅವನು ಹಾಗೆ ಅಂದ ಅಷ್ಟೇ,

ನಾಟಕ ನೋಡುತ್ತಿದ್ದ ಒಬ್ಬ ಎದ್ದು ನಿಂತೇ ಬಿಟ್ಟ
ಹಸಿಬಿಸಿ ರಕ್ತದ ಹುಡುಗ

‘ಯಾಕೆ ನಾನಿಲ್ವಾ, ಏನು ಮಾಡ್ತಾನೆ ನೋಡೇ ಬಿಡ್ತೀನಿ ನಡಿ ಹೋಗೋಣ’ ಎಂದು ನಿಂತೇ ಬಿಟ್ಟ

ನಾಟಕ ಆಡುತ್ತಿದ್ದವರೂ ನೋಡುತ್ತಿದ್ದವರೂ ಇವನೆಡೆಗೆ ತಿರುಗಿದರು
ಎಲ್ಲರೂ ತನ್ನತ್ತಲೇ ನೋಡುತ್ತಿದ್ದುದನ್ನು ನೋಡಿ ಆತ ಹಾಗೇ ಸುಮ್ಮನೆ ಕುಳಿತ

ನಾಟಕ ಮುಂದುವರೆಯಿತು. ಪತ್ರೆ ಸಂಗಪ್ಪನ ಕೊಲೆಯೂ ಆಯಿತು.
‘ಸಾಯ್ಸಿಬಿಟ್ರಾ ಅಯ್ಯೋ ನನ್ನ ಮಕ್ಕಳಾ ಎಲ್ಲರೂ ಹಂಗೇನಾ..’ ಅಂತ ಕೂಗಿದ

ನಾನು ಮತ್ತೆ ನಿಂತಿದ್ದೆ
ಬೀದಿಯಲ್ಲಿ.

ತುರ್ತು ಪರಿಸ್ಥಿತಿಯ ಕರಾಳ ದಿನಗಳ ಬಗ್ಗೆ ನಾಟಕ
ಪ್ರತೀ ಪೊಲೀಸ್ ಸ್ಟೇಷನ್ ನರಕಕ್ಕೆ ಹೆಬ್ಬಾಗಿಲು ತೆರೆದಿದ್ದವು
ಪೊಲೀಸ್ ಸ್ಟೇಷನ್ ಮಾತಿರಲಿ, ಭಾರತಕ್ಕೆ ಭಾರತವೇ ನರಕವಾಗಿ ಹೋಗಿತ್ತು

‘ಭಾರತ ದರ್ಶನ’ ನಾಟಕ ಬೀದಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತಿತ್ತು
ತುರ್ತು ಪರಿಸ್ಥಿಯನ್ನು ವಿರೋಧಿಸಿದವನ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ
ಮುಖ ಜಜ್ಜಿ ಹಾಕುತ್ತಿದ್ದಾರೆ ಖಾರದ ಪುಡಿ ಎರಚುತ್ತಿದ್ದಾರೆ

ನಾನು ಇನ್ನೇನು ಕೊನೆಯ ಬಾರಿಗೆ ಎನ್ನುವಂತೆ ಲಾಠಿ ಎತ್ತಬೇಕು
ಗುಂಪಿನಿಂದ ಜಿಗಿದ ಒಬ್ಬ ಬೀಸುತ್ತಿದ್ದ ಲಾಠಿಯನ್ನು ಹಿಡಿದೇ ಬಿಟ್ಟ
‘ಅವನ ಮೇಲೆ ಕೈ ಮಾಡಿ ನೋಡು..’ ಅಂತ ಕೆಂಗಣ್ಣು ಬೀರಿದ

ನಾನು ಇದೇನಾಗಿ ಹೋಗುತ್ತಿದೆ ಎಂದು ನೋಡುವಷ್ಟರಲ್ಲಿ ನನ್ನ ಕಾಲರ್ ಪಟ್ಟಿ ಅವನ ಮುಷ್ಟಿಯಲ್ಲಿತ್ತು

ಇವರು ನಾನು ಒಡ್ಡಿದ್ದ ಬೊಗಸೆಗೆ ಚಿಲ್ಲರೆ ಬಿಡಿಗಾಸು ಹಾಕದೆ ಹೋಗಿರಬಹುದು
ಆದರೆ ತಮ್ಮ ನೋವುಗಳನ್ನು ಸುರಿದಿದ್ದರು

ಅವರು ನನ್ನ ಬೊಗಸೆಯತ್ತ ಕಣ್ಣೆತ್ತಿಯೂ ನೋಡದಿರಬಹುದು
ಆದರೆ ಕಣ್ಣೇರು ತುಂಬಿದ್ದರು

ಅವರು ನಾನು ಒಡ್ಡಿದ್ದ ಬೊಗಸೆಯನ್ನು ತಿರಸ್ಕರಿಸಿರಬಹುದು
ಆದರೆ ಅರಿವಿನ ನೋಟವನ್ನು ತುಂಬಿದ್ದರು
—-
ಚಿತ್ರದಲ್ಲಿ ಇರುವುದು ಸಮುದಾಯ ಸಾಂಸ್ಕೃತಿಕ ಜಾಥಾದ ರೂವಾರಿ ಪ್ರಸನ್ನ