ದಿ. ಪುಟ್ಟಣ್ಣಯ್ಯ ಹೆಸರಲ್ಲಿ ಪ್ರತಿ ವರ್ಷ ರೈತ ಪ್ರಶಸ್ತಿ ನೀಡಿ:  ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯ

ಮಂಡ್ಯ,ಡಿಸೆಂಬರ್,23,2021(www.justkannada.in):  ರಾಜ್ಯದಲ್ಲಿ ಮಾಜಿ ಶಾಸಕರು, ರೈತ ಮುಖಂಡರಾದ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಕೊಡುಗೆ ಅಪಾರ. ಹೀಗಾಗಿ ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ಸರ್ಕಾರ ಪ್ರತಿವರ್ಷ ರೈತ ಪ್ರಶಸ್ತಿಯನ್ನು ಘೋಷಿಸಬೇಕು ಎಂದು ವಿಧಾನ ಪರಿಷತ್ ನೂತನ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಮಾಜಿ ಶಾಸಕರು, ರೈತ ಮುಖಂಡರಾದ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಜನ್ಮದಿನದ ಪ್ರಯುಕ್ತ ಕ್ಯಾತನಹಳ್ಳಿಯಲ್ಲಿರುವ ಪುಟ್ಟಣ್ಣಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನಾಡು ಕಂಡ ಅಪ್ರತಿಮ ರೈತ ಹೋರಾಟಗಾರ, ಹಸಿರನ್ನೇ ಉಸಿರಾಗಿಸಿಕೊಂಡು ಜೀವನದುದ್ದಕ್ಕೂ ಹೋರಾಟದಲ್ಲೇ ಬದುಕು ಸವೆಸಿದ ಕೀರ್ತಿ  ಕೆ.ಎಸ್.ಪುಟ್ಟಣ್ಣಯ್ಯನವರಿಗೆ ಸಲ್ಲುತ್ತದೆ. ಅವರ ಹುಟ್ಟುಹಬ್ಬದ ಈ ಸವಿನೆನಪಿನಲ್ಲಿ ಅವರಿಗೆ ನನ್ನ ಕೋಟಿ ನಮನಗಳು. ಹೀಗಾಗಿ ಇಂಥವರ ಹೆಸರಲ್ಲಿ ರೈತ ಪ್ರಶಸ್ತಿಗಳನ್ನು ನೀಡುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ರೈತ ಪ್ರಶಸ್ತಿಯನ್ನು ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ರೈತರ ಸಮಸ್ಯೆಗಳಿಗೆ ದನಿ

ಕ್ಯಾತನಹಳ್ಳಿಯ ರೈತ ಕುಟುಂಬದಿಂದ ಬಂದು ರೈತ ಚಳವಳಿಯಲ್ಲಿ ಆಕರ್ಷಿತರಾಗಿ, ಪ್ರೊ  ನಂಜುಂಡಸ್ವಾಮಿ, ಸುಂದರೇಶ್, ಎಸ್.ಡಿ.ಜಯರಾಂರಂತಹ ದಿಗ್ಗಜರ ಗರಡಿಯಲ್ಲಿ ಪಳಗಿದ್ದ ಪುಟ್ಟಣ್ಣಯ್ಯ ಅವರು ನಾಡಿನುದ್ದಕ್ಕೂ ಆಳುವ ಸರ್ಕಾರಗಳ ವಿರುದ್ಧ ಸಮರ ನಡೆಸಿ ರೈತರ ಬವಣೆ, ದುಃಖ ದುಮ್ಮಾನಗಳಿಗೆ ಧ್ವನಿಯಾಗಿದ್ದರು ಎಂದು ದಿನೇಶ್ ತಿಳಿಸಿದರು.

ಮಾತಿನ ಮೂಲಕ ಸರ್ಕಾರಕ್ಕೆ ಬಿಸಿ

ಅಂದಿನ ಪಾಂಡವಪುರ ಹಾಗೂ ಈಗಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಇಡೀ ನಾಡಿನ ರೈತ ಪ್ರತಿನಿಧಿಯಾಗಿ ರೈತರ ಸಮಸ್ಯೆಯನ್ನು ತಮ್ಮ ವಾಗ್ಚಾತುರ್ಯದ ಮೂಲಕ ಸರ್ವರ ಗಮನ‌ ಸೆಳೆದು  ಬಿಡಿಬಿಡಿಯಾಗಿ ಸಿಕ್ಕ ಸದಾವಕಾಶವನ್ನು ಬಳಸಿಕೊಂಡು ಸರ್ಕಾರಕ್ಕೆ ಬಿಸಿ‌ ಮುಟ್ಟಿಸಿ ಸಮಸ್ಯೆಗಳ ಬಗ್ಗೆ ತಕ್ಷಣ ಬೆಳಕು ಚೆಲ್ಲುವ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಇದು ನಮಗೆ ಈಗ ಮಾದರಿಯಾಗಿದೆ ಎಂದರು.

ಸ್ಫೂರ್ತಿದಾಯಕ ರೈತ ನಾಯಕ

ಕಾವೇರಿ, ಕೃಷ್ಣ, ಮಹದಾಯಿ ಸೇರಿದಂತೆ ಕನ್ನಡ ನಾಡಿನ‌ ನೆಲ, ಜಲ, ಭಾಷೆಗಳ ವಿಷಯದಲ್ಲಿ ಸದಾ ಮುಂಚೂಣಿ ನಾಯಕರಾಗಿದ್ದ ಶ್ರೀಯುತರು ಹಾಕಿಕೊಟ್ಟ ಮಾರ್ಗ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಇಂತಹವರ ಆದರ್ಶಿನೀಯ ಬದುಕನ್ನು ನೆನೆಯುತ್ತ ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಹಾಗೂ ಅವರು ಹುಟ್ಟಿದ ದಿನವೇ, ಅನ್ನದಾತರ ರೈತ ದಿನ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಶುಭ ದಿನದಂದು ಕೆ. ಎಸ್. ಪುಟ್ಟಣ್ಣಯ್ಯನವರನ್ನು  ನೆನೆಯತ್ತ ಸಮಸ್ತ ರೈತ ಕುಲಕೆ ರೈತರ ದಿನದ ಶುಭಾಶಯ ಕೋರುತ್ತೆನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುನೀತಾ ಪುಟ್ಟಣ್ಣಯ್ಯ ಅವರು, ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆಂಪುಗೌಡರು, ತಾಲೂಕು ಅಧ್ಯಕ್ಷರಾದ ಹರೀಶ್ ರವರು ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

Key words: Give – farmer’s award -every year – name –Puttannaiah- MLC-Dinesh Bulligowda