ಚತುರ್ಥಿ ಮೇಲೂ ನೆರೆನೆರಳು

kannada t-shirts

ಬೆಂಗಳೂರು:ಆ-31: ದೇಶಾದ್ಯಂತ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ಗಣೇಶ ಚತುರ್ಥಿಗೆ ಈ ವರ್ಷ ರಾಜ್ಯದಲ್ಲಿ ಪ್ರವಾಹದ ಕರಾಳ ಛಾಯೆ ಆವರಿಸಿದೆ. ಬೆಳಗಾವಿ, ವಿಜಯಪುರ, ಗದಗ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ ಸೇರಿ 22 ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದಾಗಿ ಜನ ಜೀವನ ದುಸ್ತರವಾಗಿದ್ದು, ಗೌರಿ ಗಣೇಶ ಹಬ್ಬದ ಸಡಗರವೂ ಮಾಯವಾಗಿದೆ. ಪ್ರತಿ ವರ್ಷ ಗಲ್ಲಿಗಲ್ಲಿಗಳಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಹಬ್ಬ ಆಚರಿಸುತ್ತಿದ್ದ ಬೆಳಗಾವಿಯಲ್ಲೂ ಮಂಕು ಕವಿದಿದೆ. ಈ ಮೊದಲು ಬೆಳಗಾವಿ ನಗರವೊಂದರಲ್ಲೇ 378ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಲಕ್ಷಾಂತರ ಜನ ಬರುತ್ತಿದ್ದರು. ಆದರೆ, ಈ ಬಾರಿ ಮಹಾರಾಷ್ಟ್ರದಲ್ಲೂ ದೊಡ್ಡ ಪ್ರಮಾಣದ ಮಳೆಯಾಗಿ ಲಕ್ಷಾಂತರ ಜನ ಮನೆ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಕೈಯಲ್ಲಿ ಬಿಡಿಗಾಸೂ ಇಲ್ಲದೆ ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟಿದ್ದಾರೆ. ಗಡಿ ಭಾಗದಲ್ಲಿ ಸಾವಿರಾರು ಜನ ನಿರಾಶ್ರಿತರ ಕೇಂದ್ರಗಳಲ್ಲಿದ್ದಾರೆ.

ಬೆಳಗಾವಿ, ವಿಜಯಪುರ, ಹಾವೇರಿ, ಗದಗ, ಬಾಗಲ ಕೋಟೆಯಲ್ಲೂ ಸಾವಿರಾರು ಮನೆಗಳು ನೆಲಸಮವಾಗಿವೆ. ಮನೆಯಲ್ಲಿ ಗಣೇಶನನ್ನು ತಂದು ಪ್ರತಿಷ್ಠಾಪಿಸುವಷ್ಟು ಅನುಕೂಲ ಇಲ್ಲ. ಇದನ್ನು ಮನಗಂಡ ಗಣೇಶ ಮಂಡಳಿಗಳು ಊರಿಗೊಂದು, ಓಣಿಗೊಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸರಳವಾಗಿ ಆಚರಿಸಲು, ಉಳಿಕೆ ಹಣವನ್ನು ನೆರೆ ಸಂತ್ರಸ್ತರಿಗೆ ಬಳಸಲು ನಿರ್ಧರಿಸಿವೆ. ಹುಬ್ಬಳ್ಳಿ-ಧಾರವಾಡದಲ್ಲೂ ಸರಳವಾಗಿ ಆಚರಿಸಲು ಅನೇಕ ಸಂಘ-ಸಂಸ್ಥೆಗಳು ತೀರ್ವನಿಸಿವೆ.

ವ್ಯಾಪಾರ-ವಹಿವಾಟು ಕ್ಷೀಣ

ಮಾರಾಟಕ್ಕೆಂದು ಒಂದೆರಡು ತಿಂಗಳ ಹಿಂದೆಯೇ ತಯಾರಿಸಿಟ್ಟಿದ್ದ ಗಣಪತಿ ಮೂರ್ತಿಗಳು ಹಲವೆಡೆ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಲಾಭದ ನಿರೀಕ್ಷೆಯಲ್ಲಿದ್ದ ಕಲಾಕಾರರಿಗೆ ಬಿಡಿಗಾಸೂ ಸಿಕ್ಕಿಲ್ಲ. ಸರಳವಾಗಿ ಗಣೇಶ ಹಬ್ಬ ಆಚರಿಸುತ್ತಿರುವುದರಿಂದ ವ್ಯಾಪಾರ-ವಹಿವಾಟು ಕ್ಷೀಣಿಸುವ ಸಾಧ್ಯತೆಗಳಿವೆ. ಗಣೇಶ ಉತ್ಸವಕ್ಕೆಂದು ಗೋವಾ, ಮಹಾರಾಷ್ಟ್ರಗಳಿಂದ ಬರುತ್ತಿದ್ದ ಜನರು ಎರಡ್ಮೂರು ದಿನ ಹೋಟೆಲ್, ಲಾಡ್ಜ್​ಗಳಲ್ಲಿ ಇರುತ್ತಿದ್ದರು. ಈಗ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಸ್ಥಳೀಯ ವ್ಯಾಪಾರ-ವಹಿವಾಟು ಕ್ಷೀಣಿಸಬಹುದು ಎಂದು ವರ್ತಕರು ಹೇಳುತ್ತಾರೆ.

ಚತುರ್ಥಿ ಮೇಲೂ ನೆರೆನೆರಳು
Ganesh festival,North karnataka,Flood effect

website developers in mysore