ಅಪಘಾತದಲ್ಲಿ ಮಡಿದ ಸಂತ್ರಸ್ತೆ ಸಹೋದರಿಗೆ ಬೆಂಗಳೂರು ವಿವಿ ವತಿಯಿಂದ ಉಚಿತ ಶಿಕ್ಷಣ..

ಬೆಂಗಳೂರು, ನವೆಂಬರ್,1, 2022 (www.justkannada.in): ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಶಿಲ್ಪಶ್ರೀ ಎಂಬ ಹೆಸರಿನ, ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿನಿಯ ತಂಗಿಗೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಸ್ನಾತಕೋತ್ತರ ಶಿಕ್ಷಣವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.

ಪ್ರಸ್ತುತ ಪದವಿ ಓದುತ್ತಿರುವ ಮೃತ ಶಿಲ್ಪಶ್ರೀ ಅವರ ಸಹೋದರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಉಚಿತವಾಗಿ ಸ್ನಾತಕೋತ್ತರ ಪದವಿ ಶಿಕ್ಷಣ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳಿಂದ ಒಂದು ದಿನದ ವೇತನವನ್ನು ಸಂತ್ರಸ್ತೆಯ ಕುಟುಂಬಸ್ಥರಿಗೆ ಹಣಕಾಸಿನ ನೆರವನ್ನು ನೀಡಲು ಸಿಂಡಿಕೇಟ್ ನಿರ್ಧರಿಸಲಾಗಿದೆ.

ಈ ಸಂಬಂಧ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಲಾದ ಡಾ. ಜಯಕರ ಎಸ್.ಎಂ. ಅವರು, “ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ನೀಡುವುದು ಕಡ್ಡಾಯವಲ್ಲ. ನಾವು ಎಲ್ಲರಲ್ಲಿಯೂ ಮನವಿ ಮಾಡುತ್ತೇವೆ. ಯಾರಿಗೆ ಒಂದು ದಿನದ ವೇತನ ನೀಡುವುದು ಇಷ್ಟವೋ ಅವರು ನೀಡಬಹುದು. ಸಿಂಡಿಕೇಟ್‌ ನ ಎಲ್ಲಾ ಸದಸ್ಯರೂ ಸಹ ಈ ಉದ್ದೇಶಕ್ಕಾಗಿ ತಮ್ಮ ಸಭಾ ಭತ್ಯೆಯನ್ನು ದಾನ ನೀಡುತ್ತಿದ್ದಾರೆ,” ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿಯ ಕುಟುಂಬದವರಿಗೆ ರೂ.೧.೫ ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಸಿಂಡಿಕೇಟ್ ಸದಸ್ಯರು ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಷ್ಟು ದೊಡ್ಡ ಮೊತ್ತ ಪರಿಹಾರವಾಗಿ ನೀಡುವುದಕ್ಕೆ ವಿಶ್ವವಿದ್ಯಾಲಯದಲ್ಲಿ ಅವಕಾಶವಿಲ್ಲ ಎಂದು ಮನವೊಲಿಸಿದರು, ಎಂದು ಜಯಕರ ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ, ವಿಶ್ವವಿದ್ಯಾಲಯವು ಶಿಲ್ಪಶ್ರೀ ಅವರ ಕುಟುಂಬಕ್ಕೆ ಪರಿಹಾರ ನೀಡಲು ವಿಶೇಷ ಅನುಮತಿಯನ್ನು ಕೋರಿ ಉನ್ನತ ಶಿಕ್ಷಣ ಇಲಾಖೆಗೆ ಬರೆಯಲಿದೆ.

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದ  ಶಿಲ್ಪಶ್ರೀ ಎಂಬ ವಿದ್ಯಾರ್ಥಿನಿ ಅಕ್ಟೋಬರ್ 13ರಂದು ಬಿಎಂಟಿಸಿ ಬಸ್ ಅಡಿ ಸಿಲುಕಿ ಮೃತಪಟ್ಟಿದ್ದರು. ಅದಾದ ನಂತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಟನೆಗಳು ನಡೆದವು. ೧೩ ದಿನಗಳು ಆಸ್ಪತ್ರೆಯಲ್ಲಿದ್ದ ಶಿಲ್ಪಶ್ರೀ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Free education – Bangalore University – sister – accident victim.