ಭಾರತದ ಹಿಂದಿನ ಒಲಿಂಪಿಕ್ಸ್ ಪದಕ ವಿಜೇತರು ಈಗ ಏನು ಮಾಡುತ್ತಿದ್ದಾರೆ ಗೊತ್ತೆ..?

kannada t-shirts

ನವದೆಹಲಿ, ಆಗಸ್ಟ್ 9, 2021(www.justkannada.in): ವಿಶ್ವದ ಅತ್ಯಂತ ಪ್ರತಿಷ್ಠಿತ ಹಾಗೂ ಅತ್ಯುನ್ನತ ಕ್ರೀಡಾಕೂಟವೆಂದೇ ಪರಿಗಣಿಸಲ್ಪಡುವ ಒಲಿಂಪಿಕ್ಸ್ ಕ್ರೀಡಾಕೂಟ ೧೮೯೬ರಲ್ಲಿ ಆರಂಭವಾಯಿತು. ವಿಶ್ವದ ಇತರೆ ರಾಷ್ಟ್ರಗಳ ಜೊತೆ, ಭಾರತವೂ ಸಹ ಪ್ರತಿಯೊಂದು ಕ್ರೀಡೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದೆ.

ಆದರೆ ಈವರಗೆ ಭಾರತ, ಟೋಕ್ಯೊ 2020 ಒಲಂಪಿಕ್ಸ್ ಹೊರತುಪಡಿಸಿದಂತೆ ವಿವಿಧ ಒಲಂಪಿಕ್ಸ್ ಕ್ರೀಡಾಕೂಟಗಳಿಂದ ಕೇವಲ ೨೮ ಪದಕಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಗೆದ್ದ ಪದಕಗಳ ಸಂಖ್ಯೆ ಹೆಚ್ಚಿಲ್ಲದಿದ್ದರೂ ಸಹ ಭಾರತದ ಕ್ರೀಡಾಪಟುಗಳು ತಮ್ಮ ಚಾರಿತ್ರಿಕ ಪ್ರದರ್ಶನದ ಮೂಲಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ತಮ್ಮದೇ ಆದ ಛಾಪನ್ನು ಸೃಷ್ಟಿಸಿದ್ದಾರೆ.

ವಿವಿಧ ಒಲಿಂಪಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿದ ಭಾರತದ ಕ್ರೀಡಾಪಟುಗಳು ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂದು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ:

ಲಿಯಾಂಡರ್ ಪೇಸ್:

ಭಾರತದ ಟೆನ್ನಿಸ್ ಕ್ರೀಡಾಪಟು ಲಿಂಯಾಡರ್ ಪೇಸ್ ೧೯೯೬ರಲ್ಲಿ ಅಟ್ಲಾಂಟಾ ಬೇಸಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದು ಟೆನ್ನಿಸ್ ಕ್ರೀಡೆಯಲ್ಲಿ ಭಾರತಕ್ಕೆ ಸಂದಂತಹ ಮೊಟ್ಟ ಮೊದಲ ಒಲಿಂಪಿಕ್ಸ್ ಪದಕ ಹಾಗೂ ಅಟ್ಲಾಂಟಾ ಕ್ರೀಡಾಕೂಟದಲ್ಲಿ ಭಾರತ ಗಳಿಸಿದಂತಹ ಏಕೈಕ ಪದಕವಾಗಿತ್ತು. ೧೯೮೦ ನಂತರ, ಅಂದರೆ ಸುಮಾರು ೧೬ ವರ್ಷಗಳ ಸುದೀರ್ಘ ಅವಧಿಯ ನಂತರ ಪೇಸ್ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಒಲಿಂಪಿಕ್ಸ್ ಯಶಸ್ಸಿನ ನಂತರ ಲಿಯಾಂಡರ್ ಪೇಸ್, ವಿವಿಧ ಕ್ರೀಡಾಕೂಟಗಳಲ್ಲಿ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ಭಾಗವಹಿಸಿ ಹಲವು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದಿದ್ದಾರೆ. ಅವರಿಗೆ ಭಾರತ ಸರ್ಕಾರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪದ್ಮಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹಾಗೂ ಅರ್ಜುನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ ಪೇಸ್ ಹರ್ಯಾಣ ರಾಜ್ಯ ಸರ್ಕಾರದ ಕ್ರೀಡಾ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ಣಂ ಮಲ್ಲೇಶ್ವರಿ:

ಕರ್ಣಂ ಮಲ್ಲೇಶ್ವರಿ ಸಿಡ್ನಿಯಲ್ಲಿ ನಡೆದಂತಹ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ೫೪ ಕೆಜಿ ವಿಭಾಗದ ತೂಕ ಎತ್ತುವ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಮೊಟ್ಟ ಮೊದಲ ಮಹಿಳಾ ಒಲಿಂಪಿಕ್ಸ್ ಪದಕ ವಿಜೇತೆ ಎನ್ನುವ ಗೌರವಕ್ಕೆ ಪಾತ್ರರಾದರು.

ಒಲಿಂಪಿಕ್ಸ್ ನಂತರ ಆಕೆ ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಆಕೆ ದೇಶದ ಯುವಜನರನ್ನು ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಗಳಲ್ಲಿ ಪ್ರತಿನಿಧಿಸಲು ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜ್ಯವರ್ಧನ್ ಸಿಂಗ್ ರಾಥೋರ್

ರಾಜ್ಯವರ್ಧನ್ ಸಿಂಗ್ ರಾಥೋರ್ ೨೦೦೪ರಲ್ಲಿ ಅಥೆನ್ಸನಲ್ಲಿ ನಡೆದಂತಹ ಒಲಿಂಪಿಕ್ಸ್ ನಲ್ಲಿ ಪುರುಷರ ಡಬಲ್ ಟ್ರಾö್ಯಪ್ ಷೂಟಿಂಗ್‌ ನಲ್ಲಿ ಬೆಳ್ಳಿ ಪದಕದ ವಿಜೇತರಾಗಿದ್ದರು. ಇವರು ಭಾರತದ ಮೊಟ್ಟ ಮೊದಲ ಒಲಿಂಪಿಕ್ಸ್ ಪದಕ ವಿಜೇತರೆನಿಸಿಕೊಂಡರು.

ರಾಥೋರ್ ಮೇ ೨೦೧೯ರವರೆಗೆ ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಅವರು ಲೋಕಸಭಾ ಸದಸ್ಯರಾಗಿದ್ದಾರೆ.

ಅಭಿನವ್ ಬಿಂದ್ರಾ

ಅಭಿನವ್ ಬಿಂದ್ರಾ ೨೦೦೮ರಲ್ಲಿ ಬೀಜಿಂಗ್‌ ನಲ್ಲಿ ನಡೆದಂತಹ ಒಲಿಂಪಿಕ್ಸ್ ನಲ್ಲಿ ಪುರುಷರ ೧೦ ಮೀ. ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕವನ್ನು ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಬಿಂದ್ರಾ ಕೇವಲ ಶೂಟರ್ ಅಷ್ಟೇ ಅಲ್ಲದೇ ಉದ್ಯಮಿಯೂ ಆಗಿದ್ದಾರೆ. ಅವರು ಕ್ರೀಡೆಗಳಲ್ಲಿ ತಂತ್ರಜ್ಞಾನವನ್ನು ಪರಿಚಯಿಸುವ ಕೆಲಸದಲ್ಲಿ ತೊಡಗಿರುವ ಉದ್ಯಮ ಅಭಿನವ್ ಫ್ಯೂಚರಿಸ್ಟಿಕ್ಸ್ ಪ್ರೈ. ಲಿ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ನಿವೃತ್ತರಾದ ನಂತರ ಅಭಿನವ್ ಬಿಂದ್ರಾ ಭಾರತದ ಕ್ರೀಡಾಪಟುಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜೇAದ್ರ ಸಿಂಗ್

೨೦೦೮ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ವಿಜೇಂದ್ರ ಸಿಂಗ್ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದರು. ನಂತರ ಆತ ವಿವಿಧ ಟೆಲಿವಿಷನ್ ಷೋಗಳಲ್ಲಿ ಭಾಗವಹಿಸಲಾರಂಭಿಸಿದರು.

ನAತರ ಅವರು ವೃತ್ತಿಪರ ಬಾಕ್ಸರ್ ಆಗಲು ನಿರ್ಧರಿಸಿದರು. ಜೊತೆಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ೨೦೧೯ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ದಕ್ಷಿಣ ದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸಿದರು. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಲಿಲ್ಲ.

ಗಗನ್ ನಾರಂಗ್

ಗಗನ್ ನಾರಂಗ್ ೨೦೧೨ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಪುರುಷರ ೧೦ ಮೀ. ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು. ಪ್ರಸ್ತುತ ಗಗನ್, ಅವರದೇ ಆದ ಅಕಾಡೆಮಿಯನ್ನು ನಡೆಸುತ್ತಿದ್ದು, ಈ ವರ್ಷದ ಟೋಕ್ಯೋ ಒಲಿಂಪಿಕ್ಸ್ ಗೆ  ತಮ್ಮ ಅಕಾಡೆಮಿಯಿಂದ ಆರು ಜನರನ್ನು ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯ ಕುಮಾರ್

ವಿಜಯ್ ಕುಮಾರ್ ೨೦೧೨ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪುರುಷರ ೨೫ ಮೀ ರ್ಯಾ್ಪಿಡ್ ಪಿಸ್ತೂಲ್ ಷೂಟಿಂಗ್‌ ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಪ್ರಸ್ತುತ ಅವರು ಹಿಮಾಚಲ ಪ್ರದೇಶದಲ್ಲಿ ಡಿಎಸ್‌ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯೋಗೇಶ್ವರ್ ದತ್

ಯೋಗೇಶ್ವರ್ ದತ್ ೨೦೧೨ರ ಲಂಡನ್ ಒಲಿಂಪಿಕ್ಸ್ ನಲ್ಲಿ ೬೦ ಕೆಜಿ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಪ್ರಸ್ತುತ ಅವರು ತಮ್ಮದೇ ಸ್ವಂತ ಕುಸ್ತಿ ಅಕಾಡೆಮಿಯನ್ನು ನಡೆಸುತ್ತಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಆಸಕ್ತರನ್ನು ತರಬೇತುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೊತೆಗೆ ಅವರು ‘ಲರ್ನ್ ರಷ್ಯಾ ರಷ್ಯನ್’ ಎಂಬ ಉಪಕ್ರಮವನ್ನೂ ಕೈಗೊಂಡಿದ್ದಾರೆ.

ಸೈನಾ ನೇಹ್ವಾಲ್

ಸೈನಾ ನೇಹ್ವಾಲ್ ೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದರು.

ಪ್ರಸ್ತುತ ಆಕೆ ವಿವಿಧ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ೨೦೧೮ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಯೂ ಸಹ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಮೇರಿ ಕೋಂ

ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಂ, ಬಾಕ್ಸಿಂಗ್‌ನಲ್ಲಿ ೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟು ಹೆಮ್ಮೆಯನ್ನು ತಂದರು.

ಪ್ರಸ್ತುತ ಅವರು ಟೋಕ್ಯೋ ೨೦೨೦ ಒಲಿಂಪಿಕ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರೆಸಿದ್ದಾರೆ.

ಸಾಕ್ಷಿ ಮಲ್ಲಿಕ್

೨೦೧೬ರ ರಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಸಾಕ್ಷಿ ಮಲ್ಲಿಕ್ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ದೊರಿಕಿಸಿಕೊಟ್ಟರು. ಪ್ರಸ್ತುತ ಆಕೆ ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ, ಜೆಎಸ್‌ಡಬ್ಯೂ ಕ್ರೀಡಾ ಉತ್ಕೃಷ್ಟತಾ ಕಾರ್ಯಕ್ರಮದೊಂದಿಗೆ ಸಹಯೋಗವನ್ನು ಹೊಂದಿದ್ದಾರೆ.

ಪಿವಿ ಸಿಂಧು

ಪಿವಿ ಸಿಂಧು ೨೦೧೬ರ ರಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಬ್ಯಾಡ್ಮಿಂಟ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಡುವ ಮೂಲಕ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಭಾನುವಾರ ಟೋಕ್ಯೊದಲ್ಲಿ ನಡೆದಂತಹ ಒಲಿಂಪಿಕ್ಸ್ನಲ್ಲಿ ಆಕೆ ಚೀನಾದ ಹೀ ಬಿಂಗ್‌ಜಿಯೊ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದು ಎರಡನೆಯ ಪದಕವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧು ಪ್ರಸ್ತುತ ಅಂತರಾಷ್ಟ್ರೀಯ ಮಟ್ಟದ ವಿವಿಧ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: former Olympics- medalists – India- now- know – doing.

website developers in mysore