ಪೇಜಾವರ ಶ್ರೀಗಳ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಎಂ.ಬಿ ಪಾಟೀಲ್….

ವಿಜಯಪುರ,ಆ,2,2019(www.justkannada.in): ಲಿಂಗಾಯತರು ಹಿಂದೂಗಳೇ ಆಗಿದ್ದಾರೆ. ಈ ಸಂಬಂಧ ಯಾವುದೇ ಚರ್ಚೆಗೆ ನಾನು ಸಿದ್ಧ ಎಂದು  ಪಂಥಾಹ್ವಾನ ನೀಡಿದ್ದ  ಉಡುಪಿ ಮಠದ ಪೇಜಾವರ ಶ್ರೀಗಳ ವಿರುದ್ದ ಮಾಜಿ ಸಚಿವ ಎಂ,ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ. ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್  ಪೇಜಾವರ ಶ್ರೀಗಳ ವಿರುದ್ದ ಹರಿಹಾಯ್ದಿದ್ದಾರೆ.

ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ   ಎಂ. ಬಿ. ಪಾಟೀಲ್, ದಲಿತರೊಂದಿಗೆ ಭೋಜನ ಮಾಡಿ, ದಲಿತ ಮಠಾಧಿಪತಿಯನ್ನು ನಿಮ್ಮ ಮಠಗಳಿಗೆ ನೇಮಿಸಿ. ಹೋಗಲಿ ಲಿಂಗಾಯತರನ್ನಾದರೂ ಮಠಾಧೀಶರನ್ನಾಗಿ ಮಾಡಲಿ ಎಂದು ಪೇಜಾವರ ಶ್ರೀಗಳಿಗೆ ಸವಾಲು ಹಾಕಿದರು.

ಹಾಗೆಯೇ ಪೇಜಾವರ ಶ್ರೀಗಳು ಕರೆದ ಕಡೆ ಹೋಗಲಿ ಅವರೇನು ಪ್ರಧಾನಿಯಾ? ಹೈಕಮಾಂಡಾ? ಚರ್ಚೆಗೆ ಪಂಥಾಹ್ವಾನ ಕೊಡಲು ಇವರು ಯಾರು? ಎಂದು ಕಿಡಿಕಾರಿದರು.

ಕಳೆದ ಮೂರು ದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಲಿಂಗಾಯತರು ಹಿಂದೂಗಳೇ ಆಗಿದ್ದಾರೆ.ಲಿಂಗ, ಇಷ್ಟಲಿಂಗ, ಶಿವನನ್ನು  ಆರಾಧನೆ ಮಾಡುವ ಎಲ್ಲರೂ ಹಿಂದೂಗಳೇ ಆಗಿದ್ದಾರೆ. ವರ್ಣಾಶ್ರಮವನ್ನು ಒಪ್ಪಲಿ, ಒಪ್ಪದೇ ಇರಲಿ ಶಿವನ ಆರಾಧನೆ ಮಾಡಿದರೆ ಹಿಂದೂಗಳಾಗುತ್ತಾರೆ. ಹಿಂದೂಗಳೆಲ್ಲರೂ ಸಹೋದರರಂತೆ ಇರಬೇಕು. ಈ ವಿಚಾರದ ಬಗ್ಗೆ ನನ್ನ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದೇನೆ ಎಂದಿದ್ದರು.

ಹಾಗೆಯೇ ಯಾವುದೇ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನನ್ನೊಂದಿಗೆ ಸಂವಾದ ನಡೆಸುವ ಧೈರ್ಯ ಯಾರಿಗೂ ಇಲ್ಲ. ಪುಸ್ತಕ ಬರೆಯುತ್ತೇನೆ, ಪತ್ರದ ಮೂಲಕ ಚರ್ಚೆ ಮಾಡುತ್ತೇನೆ ಎನ್ನುತ್ತಾರೆ. ಪುಸ್ತಕ ಕಳುಹಿಸಿಕೊಡಲಿ, ಉತ್ತರ ನೀಡಲು ನಾನು ಸಿದ್ಧನಿದ್ದೇನೆ. ಅದೆಲ್ಲವೂ ದೀರ್ಘಕಾಲದ ಪ್ರಕ್ರಿಯೆ. ಮುಖಾಮುಖಿಯಾಗಿ ಸಂವಾದ ಮಾಡುವುದು ಒಳ್ಳೆಯದ್ದು. ನಾನು ಚಾತುರ್ಮಾಸ ವ್ರತ ಮಾಡುತ್ತಿದ್ದೇನೆ. ಮೈಸೂರಿನ ಯಾವುದಾದರೂ ಸ್ಥಳಕ್ಕೆ ಬಂದು ಸಂವಾದದಲ್ಲಿ ಪಾಲ್ಗೊಳ್ಳಲು ನಾನು ಸಿದ್ಧನಿದ್ದೇನೆ  ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಅಧ್ಯಕ್ಷ ಜಾಮದಾರ್, ಸಾಣೇಹಳ್ಳಿ ಶ್ರೀ, ಶಾಸಕ ಎಂ.ಬಿ.ಪಾಟೀಲ್‌ ಅವರಿಗೆ  ಪೇಜಾವರ ಶ್ರೀಗಳು ಸವಾಲು ಹಾಕಿದ್ದರು.

Key words: Former minister- MB Patil-outrage- against –pejavar shree