ಬಿಜೆಪಿ ಸೇರ್ಪಡೆ ವದಂತಿಗೆ ತೆರೆ ಎಳೆದ ಮಾಜಿ ಸಚಿವ ಜಿ.ಟಿ ದೇವೇಗೌಡ: ಹುಣಸೂರಿನಲ್ಲಿ ಪುತ್ರನ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಸೆ,9,2019(www.justkannada.in): ಬಿಜೆಪಿಗೆ ಬರುವಂತೆ ನನ್ನನ್ನ ಯಾರೂ ಕರೆದಿಲ್ಲ. ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎನ್ನುವ ಮೂಲಕ ಮಾಜಿ ಸಚಿವ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಬಿಜೆಪಿ ಸೇರ್ಪಡೆ ಕುರಿತ ವದಂತಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ಸಿಎಂ ನಿವಾಸಕ್ಕೆ ಭೇಟಿ ನೀಡಿ ಸಿಎಂ ಬಿಎಸ್  ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮಾಜಿ ಸಚಿವ ಜಿ.ಟಿ ದೇವೇಗೌಡ ಚರ್ಚೆ ನಡೆಸಿದರು.  ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಕಾಮಗಾರಿಗಳಿಗೆ ತಡೆಯಾಗಿದೆ. ಹೀಗಾಗಿ ಸಿಎಂ ಬಿಎಸ್ ವೈ ಭೇಟಿಯಾಗಿ ಮಾಹಿತಿ ನೀಡಿದ್ದೇನೆ. ಸಿಎಂ ಬಿಎಸ್ ವೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡ, ನನ್ನನ್ನ ಬಿಜೆಪಿಗೆ ಬರುವಂತೆ ಯಾರು ಕರೆದಿಲ್ಲ. ನಾನು ಬಿಜೆಪಿಗೆಹೋಗುತ್ತೇನೆ ಎಂದು ಹೇಳಿಲ್ಲ. ನನಗೆ ತುಂಬಾ ನೋವಾಗಿದೆ. ಹೀಗಾಗಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ಧೇನೆ. ಮೂರುವರೆ ವರ್ಷಗಳ ತನಕ ಏನು ಹೇಳುವುದಿಲ್ಲ. ನಾನು ಬೇರೆ ಪಕ್ಷ ಸೇರ್ಪಡೆಯಾಗುವ ವಿಚಾರವೇ ಇಲ್ಲ. ಜನರು ವೋಟು ಕೊಟ್ಟು ಬೆಳೆಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಕೆಲಸ ಮಾಡುತ್ತೇನೆ ಎಂದರು.

ಹುಣಸೂರಿನಲ್ಲಿ ಪುತ್ರ ಸ್ಪರ್ಧೆ ವಿಚಾರ ಕುರಿತು ಮಾತನಾಡಿದ ಜಿ.ಟಿ ದೇವೇಗೌಡರು,  ನನ್ನ ಮಗ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ವಿ.ಸೋಮಣ್ಣ ನನ್ನ ಸ್ನೇಹಿತರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ. ಹೀಗಾಗಿ ಭೇಟಿಯಾಗಿದೆ. ಇದಕ್ಕೆ ಬೇರೆ ಅರ್ಥ ಬೇಡ ಎಂದರು.

ಇನ್ನು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕಾನೂನಾತ್ಮಕವಾಗಿ ವ್ಯವಹಾರ ಮಾಡಿದ್ದಾರೆ. ಹೀಗಾಗಿ ಅವರು ಹೊರಬರುವ ವಿಶ್ವಾಸವಿದೆ. ಡಿಕೆ ಶಿವಕುಮಾರ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ತಿಳಿಸಿದರು.

Key words: Former minister -GT Deve Gowda – meet-cm bs yeddyurappa-clearify-BJP- joining