ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ- ಬಿಜೆಪಿ ನಾಯಕರ ಹೇಳಿಕೆಗೆ  ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿರುಗೇಟು….

ಬೆಂಗಳೂರು,ಡಿ,27,2019(www.justkannada.in): ಕನಕಪುರದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ಹಿನ್ನೆಲೆ ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ ಸಚಿವ ಕೆ.ಎಸ್ ಈಶ್ವರಪ್ಪ ಸೇರಿ ಬಿಜೆಪಿ ನಾಯಕರಿಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ಪ್ರಜಾತಂತ್ರದ ಭದ್ರ ಬುನಾದಿಯಾದ ಸಮಾನತೆ ಸರ್ವಧರ್ಮ ಸಹಿಷ್ಣತೆಯಲ್ಲಿ ನಂಬಿಕೆ ಇಟ್ಟವನು ನಾನು.  ನನ್ನ ಕನಕಪುರ ಕ್ಷೇತ್ರದಲ್ಲಿ ಎಲ್ಲಾ ಜಾತಿ ಧರ್ಮದವರಿದ್ದಾರೆ. ಹೀಗಾಗಿ ಅವರ ಭಾವನೆ  ಗೌರವಿಸುವುದು ನನ್ನ ಧರ್ಮ. ಅದ್ದರಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ  ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ಬಿಜೆಪಿ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ಕನಕಪುರದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಶಿಲಾನ್ಯಾಸ ನೆರವೇರಿಸಿದ ಹಿನ್ನೆಲೆ ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದರು.  ನಮ್ಮ ಪವಿತ್ರ ಭಾರತ ದೇಶದಲ್ಲಿ ಹುಟ್ಟಿದ ಪ್ರಭು ಶ್ರೀರಾಮನ ಭವ್ಯಮಂದಿರ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನವರು ತಮ್ಮ ನಾಯಕಿಯನ್ನ ಮೆಚ್ಚಿಸಲು ತಮ್ಮದೇ ಹಣದಲ್ಲಿ ಯೇಸುವಿನ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ.  ಇನ್ನು ಇವರು ಕೆಪಿಸಿಸಿ ಅಧ್ಯಕ್ಷರಾಗುವುದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಸ್ವತಃ ಸಿದ್ಧರಾಮಯ್ಯರಿಂದಲೂ ತಡೆಯಲು ಆಗಲ್ಲ ಎಂದು ಲೇವಡಿ ಮಾಡಿದ್ದರು.

Key words: Former minister- DK Sivakumar- tong-BJP leaders-twitter