ನಾನು ಜೋತಿಷ್ಯಗಾರನಲ್ಲ ನಾನೋಬ್ಬ ಆಶಾವಾದಿ: ಸನ್ಮಾನ ಸ್ವೀಕರಿಸಿ ಮೈಸೂರು ವಕೀಲರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್…..

ಮೈಸೂರು,ನ,27,2019(www.justkannada.in): ನಾನು ಜೋತಿಷ್ಯಗಾರನಲ್ಲ ನಾನೋಬ್ಬ ಆಶಾವಾದಿ. ನಾನು ಭವಿಷ್ಯ ನುಡಿಯಲ್ಲ ರಾಜ್ಯಕ್ಕೆ ಒಳ್ಳೆದಾಗಲಿ ಅಂತ ಬಯಸುತ್ತೇನೆ ಎಂದು ರಾಜ್ಯ ರಾಜಕಾರಣದ ಬಗ್ಗೆ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು.

ಇಂದು ಮೈಸೂರು ವಕೀಲರ ಸಂಘಕ್ಕೆ  ಮಾಜಿ ಸಚಿವ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಈ ವೇಳೆ  ಮೈಸೂರು ವಕೀಲರ ಸಂಘದ ಸದಸ್ಯರು ಮಾಜಿ ಸಚಿವ  ಡಿಕೆ ಶಿವಕುಮಾರ್ ಗೆ ಸನ್ಮಾನ ಮಾಡಿದರು. ಇಡಿ ವಿಚಾರದಲ್ಲಿ  ತಮಗೆ ಬೆಂಬಲ ನೀಡಿದ್ದ ಹಿನ್ನೆಲೆ ಡಿ.ಕೆ ಶಿವಕುಮಾರ್ ವಕೀಲರ ಸಂಘಕ್ಕೆ  ಕೃತಜ್ಞತೆ ಸಲ್ಲಿಸಿದರು.

ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಕಷ್ಟ ಕಾಲದಲ್ಲಿದ್ದಾಗ ವಕೀಲರುಗಳಲ್ಲಿ ಮೊದಲು  ದನಿ ಎತ್ತಿದವರು ಮೈಸೂರು ವಕೀಲರ ಸಂಘ. ಇದನ್ನ ನಾನು ಎಂದೂ ಮರೆಯುವುದಿಲ್ಲ. ಕಾಲ ಮತ್ತು ನ್ಯಾಯ ಸಮಾಜಕ್ಕೆ ಉತ್ತರ ಕೊಡಲಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕು. ನಾವೇ ಮಾಡಿದ ಕಾನೂನಿಗೆ  ಗೌರವ ಕೊಡಬೇಕು‌. ನಾನು ಆರೋಪಗಳಿಗೆ ಹೆದರಿದವನಲ್ಲ. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಇಲ್ಲಿಗೆ ಬಂದಿದ್ದೇನೆ. ನಿಮಗೆ ಆದ ತೊಂದರೆ ಎಂದು ನನ್ನ ಪರ ಹೋರಾಟ ಮಾಡಿದ್ದೀರಿ. ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ  ಎಂದರು.

ನಾನು ಜೈಲಿನಲ್ಲಿದ್ದಾಗ  ನನ್ನ ಸ್ವಕ್ಷೇತ್ರ ರಾಮನಗರ, ಕನಕಪುರದಲ್ಲಿ ನನ್ನ ಪರವಾಗಿ ನಡೆದ ಪ್ರತಿಭಟನೆಗಿಂತ ಮೈಸೂರಿನಲ್ಲಿ ನಡೆದ ಪ್ರತಿಭಟನೆ ವಿಶೇಷವಾದದ್ದು. ನನ್ನ ಕಷ್ಟ ಕಾಲದಲ್ಲಿ ಮೈಸೂರಿನ ವಕೀಲರು ನನ್ನ ಪರ ನಿಂತರು. ಇದಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಇದನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ನಾನು ಜೋತಿಷ್ಯಗಾರನಲ್ಲ ನಾನೋಬ್ಬ ಆಶಾವಾದಿ. ಸರ್ಕಾರದ ಅವಧಿ ಚುನಾವಣೆ ಬಗ್ಗೆ ಹಲವು ನಾಯಕರು ಮಾತನಾಡೋದನ್ನ ನೋಡಿದ್ದೇನೆ. ನಾನು ಭವಿಷ್ಯ ನುಡಿಯಲ್ಲ ರಾಜ್ಯಕ್ಕೆ ಒಳ್ಳೆದಾಗಲಿ ಅಂತ ಬಯಸುತ್ತೇನೆ. ಸ್ಚಾರ್ಥ ಬಿಟ್ಟು ರಾಜ್ಯದ ವಿಚಾರದಲ್ಲಿ ಚಿಂತನೆ ಆಗಬೇಕು. ರಾಜ್ಯಕ್ಕೆ ಗೌರವ ಸಿಗಬೇಕು, ಸಂವಿಧಾನಕ್ಕೆ ಗೌರವ ಸಿಗಬೇಕು. ರಾಜಕಾರಣಿಗಳಿಗೂ ಗೌರವ ಸಿಗಬೇಕು. ಇತ್ತೀಚೆಗೆ ರಾಜಕಾರಣಿಗಳಿಗೆ ಗೌರವ ಸಿಗುತ್ತಿಲ್ಲ. ಅದು ಆಗಲಿ ಅಂತ ಬಯಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Former Minister- DK Sivakumar- thanked – Mysore Lawyers Association.