ಸಿದ್ಧರಾಮಯ್ಯ ಅವಧಿಯ ಹಗರಣಗಳ ತನಿಖೆಗೆ ಸಿದ್ಧ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.

ಮೈಸೂರು,ಸೆಪ್ಟಂಬರ್,12,2022(www.justkannada.in):  ಸಿದ್ಧರಾಮಯ್ಯ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆಗೆ ಸಿದ್ಧರಿದ್ದೇವೆ. ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರನ್ನ ಒಳಗೆ ಕೂರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಕುರಿತು ತನಿಖೆ ನಡೆಸಲಾಗುವುದು.  ಅರ್ಕಾವತಿ ರಿಡೊ,  ಹಾಸಿಗೆ ಹಗರಣ ಇಂಧನ ಇಲಾಖೆ ಹಗರಣ, ಎಲ್ಲಾ ಹಗರಣ ಮುಚ್ಚಿಡುವ ಕೆಲಸವನ್ನ ಸಿದ್ಧರಾಮಯ್ಯ ಮಾಡುತ್ತಿದ್ದಾರೆ.  ಎಲ್ಲಾ ಹಗರಣ ಹೊರ ತೆಗೆಯುವ ಕೆಲಸ ನಾವು ಮಾಡುತ್ತೇವೆ.  ವಿಪಕ್ಷದಲ್ಲಿದ್ದಾಗ ಹಗರಣದ ವಿರುದ್ಧ ನಾವು ಧ್ವನಿ ಎತ್ತಿದವು. ಆದರೆ ಸಿದ್ದರಾಮಯ್ಯ ತನಿಖೆ ಮಾಡಿಸದೇ ಎಲ್ಲವನ್ನೂ ಮುಚ್ಚಿಟ್ಟರು ಎಂದು ಆರೋಪಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಪಿಎಸ್ ಐ ನೇಮಕಾತಿ ಅಕ್ರಮ ಹೊರಬಂತು. ಕೂಡಲೇ ನಾವು ತನಿಖೆಗೆ ಆದೇಶಿಸಿದೆವು. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕ್ರಮಕ್ಕೆ ಮುಂದಾಗಿದ್ದೇವೆ. ಸಮಾಜವಾದಿ ಎನ್ನುವ ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಏಕೆ ನೈತಿಕತೆ ಪ್ರದರ್ಶನ ಮಾಡಲಿಲ್ಲ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಇವರು ಏನು ಮಾಡಿದರು? ಸಿದ್ದರಾಮಯ್ಯ ಸರ್ಕಾರದ ಅವಧಿಯ ಹಗರಣಗಳನ್ನ ಬಚ್ಚಿಟ್ಟಿದ್ದಾರೆ.ಅದನ್ನ ಬಿಚ್ಚಿಡುವ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದರು.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ನಳಿನ್ ಕುಮಾರ್ ಕಟೀಲ್, ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಏಕೆ ಬೇಲ್ ಮೇಲೆ ಇದ್ದಾರೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ‌ ಏಕೆ ಬೇಲ್‌ ಮೇಲೆ ಇದ್ದಾರೆ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಏಕೆ ಬೇಲ್ ಮೇಲೆ ಇದ್ದಾರೆಂದು ಪ್ರಶ್ನಿಸಿದರು.

40% ಕಮೀಷನ್ ಆರೋಪ ವಿಚಾರ ಕುರಿತು ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ನಳಿನ್ ಕುಮಾರ್ ಕಟಿಲ್, ಈ ಬಗ್ಗೆ ಸಿದ್ದರಾಮಯ್ಯ ಬಳಿ ದಾಖಲಾತಿಗಳಿದ್ದರೆ ಬಿಡುಗಡೆ ಮಾಡಲಿ. ಆದರೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ರಫೆಲ್ ಹಗರಣದಲ್ಲಿ ಕಾಂಗ್ರೆಸ್ ಏನು ಹೇಳುತ್ತಿತ್ತು. ಆದರೆ, ತನಿಖೆ ಬಳಿಕ ಏನಾಯ್ತು. ಸಿದ್ದರಾಮಯ್ಯ ಬಳಿ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

Key words: former CM-Siddaramaiah- scandals- BJP -State -President -Naleen Kumar Kateel.