ನಾನು ಸೋತಿದ್ದೇನೆ. ಅವರ ಅಪ್ಪ ಸೋತಿಲ್ವಾ, ಮಗ ಸೋತಿಲ್ವಾ, ಅಣ್ಣ ಸೋತಿಲ್ವಾ?- ಹೆಚ್ ಡಿಕೆ ವಿರುದ್ಧ ಸಿದ್ಧರಾಮಯ್ಯ ಗರಂ.

ಬೆಂಗಳೂರು,ಜನವರಿ,22,2022(www.justkannada.in):  ಟ್ವಿಟ್ಟರ್ ನಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಲೇವಡಿ ಮಾಡಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ.‌ಅವರ ಭಾಷೆ ಅವರ ಸಂಸ್ಕೃತಿ ತೋರಿಸುತ್ತೆ. ಚುನಾವಣೆಯಲ್ಲಿ ಸೋಲು ಗೆಲುವು ನಿರ್ಧಾರ ಮಾಡುವುದು ಮತದಾರ. ಮತದಾರ ಕೊಟ್ಟ ತೀರ್ಪನ್ನ ನಾವು ಸ್ವೀಕಾರ ಮಾಡಬೇಕು.ನಾನು ಸೋತಿದ್ದೇನೆ. ಅವರ ಅಪ್ಪ ಸೋತಿಲ್ವಾ, ಮಗ ಸೋತಿಲ್ವಾ,ಅಣ್ಣ ಸೋತಿಲ್ವಾ? ದೇವೇಗೌಡರು, ರೇವಣ್ಣ ಸೋತಿಲ್ವಾ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಅಂತಿಮ.‌ ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ರು ಅಂತಾನೇ ಗೊತ್ತಿಲ್ಲ.‌ ನಾನೇಕೆ ಇವರ ಮುಂದೆ ಹೋಗಿ ಕೈ ಕಟ್ಟಿ ನಿಲ್ಲಲಿ. ಕಣ್ಣೀರು ಹಾಕಲಿ. ಈಗ ರಾಜ್ಯದ ಜನರ ಮುಂದೆ ಕಣ್ಣಿರು ಹಾಕ್ತಿರುವುದು ಯಾರೆಂದು ಗೊತ್ತಿದೆ. ನಾನೇಕೆ ಕಣ್ಣಿರು ಹಾಕಲಿ. ಇವರ ಭಾಷೆ ಇವರ ರಾಜಕೀಯ ಸಂಸ್ಕೃತಿ ತೋರಿಸುತ್ತೆ ಎಂದು ಸಿದ್ಧರಾಮಯ್ಯ ಟೀಕಿಸಿದರು.

ಇದೇ ವೇಳೆ ಸರ್ಕಾರದ ಕೆಲ ಸಲಹೆಗಳನ್ನ ನೀಡಿದ ಸಿದ್ಧರಾಮಯ್ಯ, ವಿಕೆಂಡ್ ಕರ್ಪ್ಯೂ ನಿನ್ನೆ ವಾಪಸು ಪಡೆದಿದ್ದಾರೆ.‌ ತೆರಿಗೆ ಈಗ ಏರಿಕೆ ಮಾಡುವುದು ಸರಿಯಲ್ಲ. ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಿ. ಜನಸಾಮಾನ್ಯರ ಮೇಲೆ ತೆರಿಗೆ ಹಾಕಬೇಡಿ. ಈಗಾಗಲೇ ಕರೋನದಿಂದ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಸಣ್ಣಪುಟ್ಟ ಆದಾಯ ಇರೋರಿಗೆ  ತುಂಬಾ ಕಷ್ಟವಾಗಿದೆ. ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಇಂಧನ ಮಂತ್ರಿ ಹೇಳಿದ್ದಾರೆ.‌ ಯಾವುದೇ ಕಾರಣಕ್ಕೂ ವಿದ್ಯುತ್ ದರ, ಕುಡಿಯುವ ನೀರಿನ ದರ ಏರಿಕೆ ಮಾಡಬಾರದು ಎಂದಿದ್ದಾರೆ.

ತಮಿಳುನಾಡಿನ‌ ಹೊಗೇನಕಲ್ ಯೋಜನೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ಈ ಬಗ್ಗೆ ಕಾನೂನು ತಜ್ಙರನ್ನ ಸರ್ಕಾರ ಸಂಪರ್ಕಿಸಬೇಕು. ತಮಿಳುನಾಡು ಯೋಜನಾ ವರದಿ ಸಿದ್ಧ ಮಾಡ್ತಾ ಇದೆ‌. ಕೇಂದ್ರ ಅದನ್ನ ಒಪ್ಪ ಬಾರದು. ಅದಕ್ಕೆ ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸ ಬೇಕು. ಮೇಕೆದಾಟು ವಿಚಾರವಾಗಿ ಇನ್ನೂ ೭ ದಿನ ಪಾದಯಾತ್ರೆ ಬಾಕಿ ಇದೆ. ಮೇಕೆದಾಟು ವಿಚಾರವಾಗಿ ಸುಪ್ರಿಂ ಕೋರ್ಟ್ ನಲ್ಲಿ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ನ್ಯಾಯಾಧಿಕರಣ ತೀರ್ಪು ನೀಡಿದೆ ಎಂದು ತಿಳಿಸಿದರು.

Key words: former cm-Siddaramaiah –outrage- H.D kumaraswamy