ನಟ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ.

ಬೆಂಗಳೂರು,ನವೆಂಬರ್,1,2021(www.justkannada.in):  ಹೃದಯಾಘಾತದಿಂದ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ಯಾವುದೇ ಪ್ರಶಸ್ತಿ,ಗೌರವಕ್ಕಿಂತಲೂ ಅಭಿಮಾನ ದೊಡ್ಡದು. ನಟ ಪುನೀತ್ ರಾಜ್ ಕುಮಾರ್ ಜನರಿಂದ ಗಳಿಸಿರುವ ಅಭಿಮಾನ ದೊಡ್ಡದು. ಪುನೀತ್ ಬದುಕಿದ್ದರೇ ತಮ್ಮ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತಿದ್ದರು. ಹೀಗಾಗಿ ಪುನೀತ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹಿಸಿದ್ದಾರೆ.

ಇನ್ನು ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಟ ಪುನೀತ್​ ರಾಜ್​ಕುಮಾರ್​ ರದ್ದು ಸಾಯುವ ವಯಸ್ಸಲ್ಲ. ಪುನೀತ್ ಪ್ರತಿಭಾವಂತ ನಟ, ಕಲೆ ರಕ್ತಗತವಾಗಿ ಬಂದಿತ್ತು. ಡಾ.ರಾಜ್​ಕುಮಾರ್ ದೇಶ ಕಂಡ ಅತ್ಯಂತ ಶ್ರೇಷ್ಠ ನಟ. ರಾಜ್​ಕುಮಾರ್ ​ಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಸಿಕ್ಕಿತ್ತು. ಇತ್ತೀಚೆಗೆ ರಜಿನಿಕಾಂತ್​ ಗೆ ದಾದಾಸಾಹೇಬ್​ ಫಾಲ್ಕೆ ಸಿಕ್ಕಿದೆ. ಸೂಪರ್​ಸ್ಟಾರ್ ರಜಿನಿಕಾಂತ್​ ಕೂಡ ಕರ್ನಾಟಕದವರೇ. ಡಾ. ರಾಜ್​ಕುಮಾರ್​ ಗಿದ್ದ ಎಲ್ಲಾ ಗುಣಗಳು ಪುನೀತ್​ ಗಿತ್ತು. ಅಧಿಕಾರ ಬರುತ್ತೆ ಹೋಗುತ್ತೆ, ಯಾವುದೂ ಶಾಶ್ವತವಲ್ಲ. ನಾವು ಗಳಿಸಿದ ಗೌರವ ಮೌಲ್ಯಯುತವಾಗಿರಬೇಕು. ಆ ಮೌಲ್ಯವನ್ನು ರಾಜ್​ಕುಮಾರ್, ಅವರ ಕುಟುಂಬ ನೀಡಿತ್ತು. ಚಿಕ್ಕ ವಯಸ್ಸಿನಲ್ಲೇ ಅಪಾರ ಪ್ರೀತಿ ಗಳಿಸಿದ್ದ ನಟ ಪುನೀತ್​. 20 ಲಕ್ಷ ಜನರು ಪುನೀತ್​ ಅಂತಿಮ ದರ್ಶನ ಪಡೆದಿದ್ದಾರೆ. ಅಂತಿಮ ದರ್ಶನಕ್ಕೆ ಬಂದಿದ್ದ ಬಹಳ ಜನ ಕಣ್ಣೀರಿಟ್ಟಿದ್ದಾರೆ ಎಂದು ಹೇಳಿದರು.

Key words: Former CM –Siddaramaiah- demands -Center – Padma Shri award –actor- Puneet Raj Kumar