ಕರ್ನಾಟಕ ಕಟ್ಟುವಲ್ಲಿ  ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಪಾತ್ರ ಹಿರಿದು-ಸಿಎಂ ಬಸವರಾಜ ಬೊಮ್ಮಾಯಿ.

kannada t-shirts

ಬೆಂಗಳೂರು, ಆಗಸ್ಟ್ 20,2021(www.justkannada.in):  ಕರ್ನಾಟಕದ ನಾಮಕರಣದಿಂದ ಹಿಡಿದು ಕರ್ನಾಟಕ ಕಟ್ಟುವಲ್ಲಿ  ಮಾಜಿ ಮುಖ್ಯಮಂತ್ರಿ ದಿವಂಗತ  ದೇವರಾಜ ಅರಸು ಅವರ ಪಾತ್ರ ಹಿರಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ  ದೇವರಾಜ ಅರಸು ಅವರ 106 ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಕನ್ನಡ ನಾಡು ಕಂಡಂತಹ ಧೀಮಂತ ನಾಯಕರು, ಜನಪರ, ಹಿಂದುಳಿದ ಮತ್ತು ರೈತಪರ ಮುಖ್ಯಮಂತ್ರಿ ದೇವರಾಜ ಅರಸು. ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವಿದು. ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ. ಹಿಂದುಳಿದ ವರ್ಗಗಳ ಏಳಿಗೆಗಾಗಿ, ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಕೆಲಸ ಮಾಡಬೇಕು. ವಿಶೇಷವಾಗಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವ ಸಂಕಲ್ಪವನ್ನು ಮಾಡುವ ದಿನ ಇದು ಎಂದು ಭಾವಿಸಿದ್ದೇನೆ ಎಂದರು.

ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ನಮ್ಮೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಕರ್ನಾಟಕದಲ್ಲಿ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಹಲವಾರು ನಾಯಕರನ್ನು  ಬೆಳೆಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ. ಅವರ ಹೆಜ್ಜೆ ಗುರುತುಗಳು ಕರ್ನಾಟಕದ ಭೂಮಿಯಲ್ಲಿ ಶಾಶ್ವತವಾಗಿದೆ. ಅವರ ಹೆಸರಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವರ ವಿಚಾರಧಾರೆಗಳು ಪಕ್ಷಾತೀತವಾಗಿ, ಸರ್ವ ಸಮ್ಮತವಾಗಿ ಒಪ್ಪುವಂಥ ನಾಯಕರು ಎಂದು ನುಡಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

Key words: Former CM- Devaraja arsu- build -karnataka-CM -Basavaraja Bommai.

website developers in mysore