ಐದು ಜಿಲ್ಲೆಗಳಿಗೆ ಮಹಾಮಳೆ ಸಂಕಷ್ಟ: ಉತ್ತರದಲ್ಲಿ ಕೃಷ್ಣೆ ಕಣ್ಣೀರು!

ಬೆಂಗಳೂರು:ಆ-5: ಮಹಾರಾಷ್ಟ್ರದಲ್ಲಿ ಚಂಡಿ ಹಿಡಿದಂತೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಯ ಜತೆ ಮಲಪ್ರಭಾ, ಘಟಪ್ರಭಾ ನದಿಗಳೂ ರೌದ್ರಾವತಾರ ತಾಳಿವೆ. ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಪರಿಣಾಮ ರಾಜ್ಯದ ಐದು ಜಿಲ್ಲೆಗಳು ಅಕ್ಷರಶಃ ತತ್ತರಿಸಿದ್ದು, ನೂರಾರು ಗ್ರಾಮಗಳಿಗೆ ಮುಳುಗಡೆ ಆತಂಕ ಎದುರಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯ ಶೇ.90 ತುಂಬಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಇದರಿಂದ ರಾಜ್ಯದ ಗಡಿಯಂಚಿನ ಗ್ರಾಮಗಳೂ ಸೇರಿದಂತೆ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಸುನಾಮಿ ಸ್ಥಿತಿ ಎದುರಾಗಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿವೆ.

ಬೆಳಗಾವಿ ಕಂಗಾಲು: ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆಯಿಂದಾಗಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ ವ್ಯಾಪ್ತಿಯ ನದಿತೀರದ ಹಳ್ಳಿಗಳಲ್ಲಿ ಪ್ರವಾಹದ ಪರಿಸ್ಥಿತಿ ಇದೆ.

ರೈಲು ಸಂಚಾರ ರದ್ದು: ಬೆಳಗಾವಿಯ ಖಾನಾಪುರ ತಾಲೂಕಿನ ಲೋಂಡಾ-ತಿನೈ ಘಾಟ್ ಮಾರ್ಗದ ನಡುವಿನ ರೈಲು ಹಳಿ ಅಡಿಯಲ್ಲಿರುವ ಭೂಮಿ ಭಾನುವಾರ ಮಧ್ಯಾಹ್ನ 12ರ ಸುಮಾರಿಗೆ ಕುಸಿದಿದೆ. ಇದರಿಂದ ರೈಲು ಸಂಚಾರಕ್ಕೆ ತೊಡಕು ಉಂಟಾಗಿದ್ದು, ಹುಬ್ಬಳ್ಳಿಯಿಂದ ಗೋವಾ ಮಾರ್ಗವಾಗಿ ಸಂಚರಿಸುವ ಎಲ್ಲ ರೈಲುಗಳ ಪ್ರಯಾಣ ರದ್ದುಗೊಳಿಸಲಾಗಿದೆ.

80 ಹಳ್ಳಿಗಳಿಗೆ ಆತಂಕ

ಮಹಾರಾಷ್ಟ್ರದ ಜಲಾಶಯಗಳಿಂದ ಹರಿದುಬರುವ ನೀರಿನ ಪ್ರಮಾಣ 3 ಲಕ್ಷ ಕ್ಯೂಸೆಕ್ ದಾಟಿದರೆ ಕೃಷ್ಣಾ ನದಿ ತೀರದಲ್ಲಿರುವ 80 ಹಳ್ಳಿಗಳ 1.68 ಲಕ್ಷ ಜನರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ರಾಜ್ಯದ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.

ಇಂದು ಬಿಎಸ್​ವೈ ಭೇಟಿ

ಸಂಕಷ್ಟಕ್ಕೆ ಸಿಲುಕಿರುವ ಕೃಷ್ಣಾ ನದಿ ತೀರದ ಜಿಲ್ಲೆಗಳಲ್ಲಿ ಸಿಎಂ ಯಡಿಯೂರಪ್ಪ ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರವಾಹ ಪೀಡಿತ 5 ಜಿಲ್ಲೆಗಳ ಜಿಲ್ಲಾಧಿಕಾರಿ ಗಳ ಜತೆ ಅವರು ತುರ್ತು ಸಭೆ ನಡೆಸಿದರು.

ಯಾದಗಿರಿಗೆ ಮುಳುಗಡೆ ಆಘಾತ

ಆಲಮಟ್ಟಿ ಜಲಾಶಯದಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಸುರಪುರ, ಶಹಾಪುರ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಕಲಬುರಗಿ- ಯಾದಗಿರಿ-ರಾಯಚೂರು ಸಂಪರ್ಕ ಕಡಿತಗೊಂಡಿದೆ.

ಬಾಗಲಕೋಟೆ ಸ್ಥಿತಿ ಗಂಭೀರ

ಕೃಷ್ಣೆ ಹಾಗೂ ಘಟಪ್ರಭೆ ಉಕ್ಕಿ ಹರಿಯುತ್ತಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಮೂರು ಗ್ರಾಮಗಳ ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೊಷಣೆ ಮಾಡಿದ್ದಾರೆ.

ರಾಯಚೂರು ಗ್ರಾಮಗಳು ತತ್ತರ

ಕ್ಷಣಕ್ಷಣಕ್ಕೂ ಕೃಷ್ಣೆ ಪಾತ್ರದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ 12ಕ್ಕೂ ಹೆಚ್ಚು ಗ್ರಾಮಗಳು ಭಾಗಶಃ ಪ್ರವಾಹಕ್ಕೆ ತುತ್ತಾಗಿವೆ. ಮುತ್ತೂರ ನಡುಗಡ್ಡೆಯಲ್ಲಿಯ 26 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಕೃಪೆ:ವಿಜಯವಾಣಿ

ಐದು ಜಿಲ್ಲೆಗಳಿಗೆ ಮಹಾಮಳೆ ಸಂಕಷ್ಟ: ಉತ್ತರದಲ್ಲಿ ಕೃಷ್ಣೆ ಕಣ್ಣೀರು!
floods-hit-north-karnataka-cm-to-undertake-aerial-survey