ಫೋನಿ ಚಂಡಮಾರುತಕ್ಕೆ ಐವರು ಬಲಿ: ಆಂಧ್ರದಲ್ಲಿ 20 ಮನೆಗಳಿಗೆ ಹಾನಿ

ಒಡಿಶಾ,ಮೇ,2,2019(www.justkannada.in) ಗಂಟೆಗೆ 180ರಿಂದ 200 ಕಿ.ಮೀಟರ್ ಗಳಲ್ಲಿ ಬೀಸುತ್ತಿರುವ  ‘ಫೋನಿ’ ಚಂಡಮಾರುತ  ಒಡಿಶಾದ ಪುರಿ ಕರಾವಳಿ ಭಾಗಕ್ಕೆ ಅಪ್ಪಳಿಸಿದ್ದು ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಫೋನಿ ಆರ್ಭಟಕ್ಕೆ ಒಡಿಶಾದಲ್ಲಿ ಐವರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಡಿಶಾದ ಕರಾವಳಿ ತೀರ ಸೇರಿದಂತೆ ಪುರಿಯ ಸುತ್ತ ಮುತ್ತಲಿನಲ್ಲಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪುರಿ ಭುವನೇಶ್ವರ, ಗಂಜಾಮ್‌ ಮತ್ತು ಬಾಲಸೋರ್‌ನಲ್ಲಿ  ಬಿರುಗಾಳಿ ಸಹಿತ ವರುಣನ ಆರ್ಭಟ ಜೋರಾಗಿದ್ದು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಪುರಿಯಲ್ಲಿ ಕಳೆದ 24 ಗಂಟೆಯಲ್ಲಿ 146 ಎಂಎಂ ಮಳೆಯಾಗಿದೆ. ಪುರಿಯಲ್ಲಿ ಮನೆಕುಸಿದು ಇಬ್ಬರು ಮೃತಪಟ್ಟಿದ್ದಾರೆ. ವಿವಿಧ ಕಡೆಗಳಲ್ಲಿ ಒಟ್ಟು ಐದು ಮಂದಿ ಸಾವನ್ನಪ್ಪಿದ್ದಾರೆ.

ಭುವನೇಶ್ವರ ಸೇರಿದಂತೆ ಕರಾವಳಿ ತೀರದ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕವನ್ನು ನಿಲ್ಲಿಸಲಾಗಿದೆ. ಬಸ್‌ ಸಂಚಾರ, ರೈಲು ಸಂಚಾರ ಮತ್ತು ವಿಮಾನ ಸಂಚಾರವನ್ನು ನಿಲ್ಲಿಸಲಾಗಿದೆ. ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇನ್ನು ಫೋನಿ ಚಂಡಮಾರುತದ ಅಬ್ಬರ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳಕ್ಕೂ ತಟ್ಟಿದೆ. ಆಂದ್ರ ಪ್ರದೇಶದ ಶ್ರೀಕಾಕುಳಂ ನಲ್ಲಿ 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಪಶ್ಚಿಮಬಂಗಾಳದಲ್ಲಿ ಫೋನಿ ಆರ್ಭಟದಿಂದಾಗಿ ಕೊಲ್ಕತ್ತಾ ಏರ್ ಪೋರ್ಟ್ ನಲ್ಲಿ ಸಂಜೆ 6 ಗಂಟೆಯಿಂದ ಬೆಳಿಗ್ಗೆ 8ಗಂಟೆ ವರೆಗೆ  ವಿಮಾನ ಹಾರಾಟ ಬಂದ್ ಮಾಡಲಾಗಿದೆ. ಹಾಗೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ರ್ಯಾಲಿಯನ್ನು ರದ್ಧು ಮಾಡಲಾಗಿದೆ.

Key words: Five -killed – Phony –storm-Damage – 20 houses – Andhra Pradesh