ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ: ಮುಂದಿನ ಕ್ಯಾಬಿನೆಟ್ ನಲ್ಲಿ ಅಧಿಕೃತ ಆದೇಶ-ಸಿಎಂ ಸಿದ್ಧರಾಮಯ್ಯ ಘೋಷಣೆ.

ಬೆಂಗಳೂರು,ಮೇ,20,2023(www.justkannada.in):  ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಲು ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಇಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ 8 ಸಚಿವರು ಪಾಲ್ಗೊಂಡಿದ್ದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, , ಆರ್ಥಿಕ ದಿವಾಳಿಯಾಗದಂತೆ 5 ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಕಟ್ಟು ನಿಟ್ಟಾಗಿ ತೆರಿಗೆಯನ್ನು ವಸೂಲಿ ಮಾಡಿ ಗ್ಯಾರಂಟಿ ಜಾರಿ ಮಾಡಲಾಗುವುದು. ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ​​ ವಿದ್ಯುತ್​ ನೀಡುತ್ತೇವೆ. ಇದಕ್ಕೆ ಸುಮಾರು ತಿಂಗಳಿಗೆ 1200 ಕೋಟಿ ರೂ.ಆಗಲಿದೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 200 ರೂ. ಹಾಕಲಾಗುವುದು. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ, ಈ ವರ್ಷದ ಪದವೀಧರ, ಪಿಎಚ್​ ಡಿ, ಎಂಬಿಬಿಎಸ್ ಪದವೀದರ ನಿರುದ್ಯೋಗಿಗಳಿಗೆ ಎರಡೂವರೆ ವರ್ಷಗಳ ವರೆಗೆ ತಿಂಗಳಿಗೆ ಮೂರು ಸಾವಿರ ರೂ. ನೀಡಲಾಗುವುದು. ಈ ನಡುವೆ ಉದ್ಯೋಗ ಸಿಕ್ಕರೆ ಯುವ ನಿಧಿ ನೀಡಲಾಗುವುದಿಲ್ಲ. ಡಿಪ್ಲೊಮಾ ಪಾಸ್ ಮಾಡಿದ ನಿರುದ್ಯೋಗಿಗಳಿಗೆ ಒಂದೂವರೆ ಸಾವಿರ ರೂ ನೀಡುತ್ತೇವೆ. ಎಲ್ಲಾ ಸರ್ಕಾರಿ ಬಸ್ ​ನಲ್ಲಿ ಪ್ರಯಾಣಿಸುವ  ರಾಜ್ಯದ ಮಹಿಳೆಯರಿಗೆ ಫ್ರೀ ಪಾಸ್ ನೀಡಲಾಗುವುದು ಎಂದು ತಿಳಿಸಿದರು.

ಈ ಕುರಿತು ಇಂದು ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಮುಂದೆ ಚರ್ಚೆ ಮಾಡಿ ಜಾರಿ ಮಾಡೇ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಣಾಳಿಕೆಯಲ್ಲಿ ಜನರಿಗೆ ಅನೇಕ ಭರವಸೆಗಳನ್ನು ಕೊಟ್ಟಿದ್ದೆವು. ಇದು ಕೇವಲ ಒಂದು ವರ್ಷದಲ್ಲಿ ಈಡೇರಿಸುವ ಭರವಸೆ ಅಲ್ಲ. ಅಲ್ಲದೇ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ಮೊದಲ ಸಂಪುಟದಲ್ಲಿ 5 ಗ್ಯಾರಂಟಿ ಜಾರಿ ಬಗ್ಗೆ ಹೇಳಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಕಳೆದ ಬಾರಿ ನಾವು 158 ಭರವಸೆಗಳನ್ನು ಈಡೇರಿಸಿದ್ದೆವು. ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು ಎಂದರು.

ನಮ್ಮ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿ ಆಗಬಹುದು, ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರೂ. ಬರುತ್ತದೆ.  ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಧನ ಬಂದಿಲ್ಲ.  ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ.  ನ್ಯಾಯಯುತವಾಗಿ ಕರ್ನಾಟಕಕ್ಕೆ ಸಿಗಬೇಕಿದ್ದ 5495 ಕೋಟಿ ರೂ.ವನ್ನು ಬಿಜೆಪಿ ರಾಜ್ಯ ಸರ್ಕಾರ ಕೇಳಿಲ್ಲ. ರಾಜ್ಯದ ಸಂಸದರು ಕೇಳಿಲ್ಲ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಸಿಎಂ ಸಿದ‍್ಧರಾಮಯ್ಯ ಕಿಡಿಕಾರಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ 155 ಲಕ್ಷ ಕೋಟಿ ರೂ. ಆಗಿದೆ ಎಂದು ಸಿಎಂ ಸಿದ್ಧರಾಮಯ್ಯ ಆರೋಪಿಸಿದರು.

Key words: five -guarantee –schemes- CM –Siddaramaiah- announced