ಸರ್ಕಾರದ ಸೌಲಭ್ಯಗಳನ್ನು ನೇಕಾರರಿಗೆ ತಲುಪಿಸಲು ಮೊದಲ ಆದ್ಯತೆ : ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ.

ಬೆಂಗಳೂರು,ಆಗಸ್ಟ್,11,2021(www.justkannada.in):  ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸೌಲಭ್ಯಗಳನ್ನು ನೇಕಾರರಿಗೆ ತಲುಪಿಸಲು ಹಾಗೂ ಜವಳಿ ನೀತಿಯ ಅನುಷ್ಠಾನಕ್ಕೆ ಹಾಗೂ ರಾಜ್ಯದ ಜವಳಿಗೆ ಬ್ರಾಂಡ್ ಕಲ್ಪಿಸಲು ಪ್ರಮುಖ ಆದ್ಯತೆ ನೀಡಬೇಕೆಂದು ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಸೂಚಿಸಿದರು.

ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಸಚಿವರಾದ  ಶಂಕರ ಪಾಟೀಲ ಮುನೇನಕೊಪ್ಪ ಅವರು ಕೈಮಗ್ಗ ಮತ್ತು ಜವಳಿ ಇಲಾಖೆಯು ಹಿರಿಯ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಪ್ರಥಮ ಸಭೆ ನಡೆಸಿ, ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ದೇಶದ ರೇಷ್ಮೆ ಉತ್ಪಾದನೆಯಲ್ಲಿ ಶೇ. 49ರಷ್ಟು ಹಾಗೂ ಉಣ್ಣೆ ಉತ್ಪಾದನೆಯಲ್ಲಿ ಶೇ. 12ರಷ್ಟು ಕರ್ನಾಟಕ ರಾಜ್ಯವು ಕೊಡುಗೆ ನೀಡುತ್ತಿದೆ. ಆದರೆ ರಾಜ್ಯದ ಜವಳಿ ಇಲಾಖೆ ಹಿಂದುಳಿದಿರುವುದು ಶೋಚನೀಯ ಸ್ಥಿತಿ ಎಂದು ವಿಷಾದ ವ್ಯಕ್ತಪಡಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯದ ಜವಳಿ ಉದ್ಯಮವನ್ನು ಪುನಶ್ಚೇತನಗೊಳಿಸಲು ಹೊಸ ಯೋಜನೆಗಳು, ನೀತಿ-ನಿರೂಪಣೆಗಳನ್ನು ರೂಪಿಸಿ ಜವಳಿ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಾದರಿ ರಾಜ್ಯವನ್ನಾಗಿ ಮಾಡಲು ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಕ್ರಮವಹಿಸಬೇಕೆಂದು ಸೂಚಿಸಿದರು.

ಪ್ರಧಾನಮಂತ್ರಿಗಳಾದ  ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜವಳಿ ಕ್ಷೇತ್ರದ ಪುನಶ್ಚೇತನಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸುವ ಹಾಗೂ ರಾಜ್ಯದಲ್ಲಿರುವ ಜವಳಿ ಪಾರ್ಕ್ಗಳ ಅನುಷ್ಠಾನಕ್ಕೆ ಕ್ರಮವಹಿಸಬೇಕೆಂದು ಸೂಚಿಸಿದರು.
ಈ ಸಭೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರಾದ ಶ್ರೀ ಉಪೇಂದ್ರ ಪ್ರತಾಪ್ ಸಿಂಗ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಸಕ್ಕರೆ ಇಲಾಖೆಯ ಪ್ರಗತಿ ಪರಿಶೀಲನೆ:

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರ ರೈತರಿಗೆ ಬರಬೇಕಾದ ಬಾಕಿ ಹಣವನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಮೊದಲ ಆದ್ಯತೆ ನೀಡಿ, ಸಕ್ಕರೆ ಕಾರ್ಖಾನೆಗಳ ಯಾವುದೇ ಲಾಭಿಗೆ ಮಣಿಯದಿರಿ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರ ಸ್ವೀಕರಿಸಿ, ಮೊದಲ ಬಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ದೇಶದಲ್ಲಿ ಸಕ್ಕರೆ ಉತ್ಪಾದನೆ ಮಾಡುವ ರಾಜ್ಯದಲ್ಲಿ ಕರ್ನಾಟಕ 3ನೇ ಸ್ಥಾನ ಪಡೆದಿದೆ. ಕಬ್ಬು ಬೆಳೆಗೆ ಪೂರಕ ನೈಸರ್ಗಿಕ ವಾತಾವರಣ & ಕಾರ್ಖಾನೆ ಸ್ಥಾಪನೆಗೆ ಪ್ರೋತ್ಸಾಹದಾಯಕ ಅಂಶಗಳಿರುವ ಕಾರಣ ಪ್ರತಿವರ್ಷ ಹೊಸ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುತ್ತಿವೆ, ಇದು ಉತ್ತಮ ಬೆಳವಣಿಗೆ. ಆದರೆ
ರೈತರು ಸರಬರಾಜು ಮಾಡಿದ ಕಬ್ಬುಗೆ ಸಕ್ಕರೆ ಕಾರ್ಖಾನೆಗಳು ಸಮಯಕ್ಕೆ ಸರಿಯಾಗಿ ಹಣ ನೀಡುವಂತೆ ಮಾಡಲು ಸಕ್ಕರೆ ಕಾರ್ಖಾನೆಗಳ ಮೇಲೆ ರಾಜ್ಯ ಸರ್ಕಾರ ಬಿಗಿಯಾದ ಕಾನೂನು ರೂಪಿಸಬೇಕಾದ ಅವಶ್ಯಕತೆ ಇದೆ ಎಂಬ ಅಂಶ, ನನ್ನ ಗಮನಕ್ಕೆ ಬಂದಿದೆ.

ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತರಾಗಿ ಮಹಾರಾಷ್ಟ್ರ ಮಾದರಿಯಲ್ಲಿ ನಿಯಮಗಳನ್ನು ರೂಪಿಸಿ, ಸರ್ಕಾರದ ಮಟ್ಟದಲ್ಲಿ ಈ ನಿಯಮಗಳು ಕಾರ್ಯಗತಗೊಳಿಸಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಆಯುಕ್ತರಾದ ಶಿವಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

key words:  first priority – deliver- government facilities – weavers-
Minister -Sankara B. Patila Munanakoppa