ಭಾರತೀಯ ಅಂಚೆ ಇಲಾಖೆಯಿಂದ ಮೊಟ್ಟ ಮೊದಲ ಬಾರಿಗೆ ಗುಜರಾತ್‌ ನಲ್ಲಿ ಪ್ರಾಯೋಗಿಕವಾಗಿ ಡ್ರೋನ್ ಬಳಸಿ ಅಂಚೆ ವಿತರಣೆ..

ಅಹಮದಾಬಾದ್, ಮೇ 30, 2022 (www.justkannada.in): ಇದೇ ಮೊಟ್ಟ ಮೊದಲ ಬಾರಿಗೆ ಅಂಚೆ ಇಲಾಖೆಯು ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಪ್ರಾಯೋಗಿಕ ಯೋಜನೆಯಡಿ ಡ್ರೋನ್ ಬಳಸಿ ಅಂಚೆಯನ್ನು ಯಶಸ್ವಿಯಾಗಿ ತಲುಪಿಸಿತು. ಭಾನುವಾರದಂದು ನಡೆದ ಈ ಪ್ರಯೋಗದಲ್ಲಿ ೨೫ ನಿಮಿಷದಲ್ಲಿ ೪೬ ಕಿ.ಮೀ.ಗಳನ್ನು ಡ್ರೋನ್ ಕ್ರಮಿಸಿದೆ.

ಅಹಮದಾಬಾದ್‌ ನ ಪ್ರೆಸ್ ಇನ್‌ ಫರ್ಮೇಶನ್ ಬ್ಯೂರೊ ಹೊರಡಿಸಿರುವ ಒಂದು ಪತ್ರಿಕಾ ಪ್ರಟಕಣೆಯ ಪ್ರಕಾರ, ಈ ಅಂಚೆಯನ್ನು, ಕೇಂದ್ರ ಸಂವಹನಾ ಸಚಿವಾಲಯದ ಮಾರ್ಗದರ್ಶನದಡಿ ಅಂಚೆ ಇಲಾಖೆಯು, ಹಬೇ ಗ್ರಾಮದಿಂದ, ಕಚ್ ಜಿಲ್ಲೆಯ ಬಚಾವು ತಾಲೂಕಿನಲ್ಲಿರುವ ನೇರ್ ಗ್ರಾಮಕ್ಕೆ ಡ್ರೋನ್ ಮೂಲಕ ಅಂಚೆಯನ್ನು ತಲುಪಿಸಿತು.

“ಈ ಪ್ರಾಯೋಗಿಕ ಯೋಜನೆಯ ಯಶಸ್ಸಿನೊಂದಿಗೆ ಭವಿಷ್ಯದಲ್ಲಿ ಅಂಚೆಯನ್ನು ಡ್ರೋನ್ ಮೂಲಕ ತಲುಪಿಸುವುದು ಸಾಧ್ಯವಾಗಲಿದೆ,” ಎನ್ನಲಾಗಿದೆ. ಪಿಐಬಿ ಹೇಳಿಕೆಯ ಪ್ರಕಾರ, ಆಧುನಿಕ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಭಾರತೀಯ ಅಂಚೆ ಇಲಾಖೆಯು ಇದೇ ಮೊಟ್ಟ ಮೊದಲ ಬಾರಿಗೆ ದೇಶದ ಅಂಚೆ ಇತಿಹಾಸದಲ್ಲಿ ಈ ಪ್ರಯೋಗವನ್ನು ನಡೆಸಿದೆ.

ಪತ್ರಿಕಾ ಪ್ರಕಟಣೆಯ ಪ್ರಕಾರ, ಅಂಚೆ ಮೂಲಕ ಕಳುಹಿಸಿದ ಪಾರ್ಸೆಲ್, ೪೬ ಕಿ.ಮೀ.ಗಳ ದೂರದಲ್ಲಿರುವ ಸ್ಥಳಕ್ಕೆ ತಲುಪಲು ೨೫ ನಿಮಿಷಗಳನ್ನು ತೆಗೆದುಕೊಂಡಿತು. ಕೇಂದ್ರ ಸಂವಹನಾ ಸಚಿವ ದೇವುಸಿನ್ಹ್ ಚೌಹಾಣ್ ಅವರ ಟ್ವಿಟರ್ ಸಂದೇಶವೊಂದರ ಪ್ರಕಾರ, ಅದೊಂದು ಔಷಧಗಳ ಪಾರ್ಸೆಲ್ ಆಗಿತ್ತು. ಈ ಪ್ರಯೋಗದಿಂದ ಡ್ರೋನ್‌ ಗಳನ್ನು ಬಳಸಿ ಅಂಚೆ ತಲುಪಿಸುವ ನಿರ್ಧಿಷ್ಟವಾದ ವೆಚ್ಚಗಳು ಹಾಗೂ ಎರಡು ಕೇಂದ್ರಗಳ ನಡುವಿನ ಭೌಗೋಳಿಕ ಸ್ಥಳದ ಜೊತೆಗೆ, ಸಂಭವನೀಯ ಅಡೆತಡೆಗಳು ಒಳಗೊಂಡಂತೆ ವಿತರಣೆಯ ಪ್ರಕ್ರಿಯೆಯ ಸಂದರ್ಭದಲ್ಲಿ ಸಿಬ್ಬಂದಿಗಳ ನಡುವಿನ ಸಂಭವನೀಯ ಸಂಯೋಜನೆಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲು ನೆರವಾಯಿತು. ಈ ಪ್ರಯೋಗ ವಾಣಿಜ್ಯವಾಗಿ ಯಶಸ್ವಿಯಾದರೆ ಅಂಚೆ ಪಾರ್ಸೆಲ್‌ಗಳ ವಿತರಣಾ ಸೇವೆಗಳು ವೇಗಗೊಳ್ಳಲಿದೆ, ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚೌಹಾಣ್ ಅವರು ಶನಿವಾರದಂದು ತಮ್ಮ ಟ್ವೀಟ್ ನಲ್ಲಿ, “ದೇಶ ಡ್ರೋನ್ ಮಹೋತ್ಸವ ೨೦೨೨ನ್ನು ಆಚರಿಸಿತು, ಅಂಚೆ ಇಲಾಖೆಯು ಗುಜರಾತ್‌ ನ ಕಚ್‌ ಗೆ ಡ್ರೋನ್ ಬಳಸಿ ಪಾರ್ಸೆಲ್‌ ಗಳನ್ನು ತಲುಪಿಸುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು. ಈ ಡ್ರೋನ್, ವಾಯಮಾರ್ಗವಾಗಿ ಔಷಧಗಳ ಪಾರ್ಸೆಲ್ ಅನ್ನು ೪೬ ಕಿ.ಮೀ.ಗಳ ದೂರವನ್ನು ೩೦ ನಿಮಿಷಗಳಲ್ಲಿ ಕ್ರಮಿಸಿತು,” ಎಂದು ವಿವರಿಸಿದ್ದಾರೆ. ಪ್ರಧಾನಿ ಮೋದಿಯವರು ಶುಕ್ರವಾರದಂದು ದೇಶದ ಅತೀ ದೊಡ್ಡ ಡ್ರೋನ್ ಹಬ್ಬ ‘ಭಾರತ ಡ್ರೋನ್ ಮಹೋತ್ಸವ ೨೦೨೨’ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಭವಿಷ್ಯದಲ್ಲಿ ಕೃಷಿ, ಕ್ರೀಡೆಗಳು, ರಕ್ಷಣಾ ಪಡೆಗಳು ಹಾಗೂ ನೈಸರ್ಗಿಕ ವಿಕೋಪಗಳ ನಿರ್ವಹಣೆಯಲ್ಲಿ ಡ್ರೋನ್‌ ಗಳ ಬಳಕೆ ಸಾಮಾನ್ಯವಾಗಲಿದೆ,” ಎಂದು ಅಭಿಪ್ರಾಯ ಪಟ್ಟರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  first- post – Indian Postal Department – Gujarat – drone -delivery.