ತಹಶೀಲ್ದಾರ್, ವಿಎ, ಆರ್‌ ಐ ವಿರುದ್ಧ ಎಫ್ ಐಆರ್ ವಿಚಾರ: ಮನವಿ ಪರಿಶೀಲಿಸಿ ಕಾ‌ನೂನು ಕ್ರಮ-ಮೈಸೂರು ಡಿಸಿ ಬಗಾದಿ ಗೌತಮ್.

ಮೈಸೂರು,12,2022(www.justkannada.in):  ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಲು ಸಂಚು ಆರೋಪದ ಮೇಲೆ ತಹಸೀಲ್ದಾರ್, ವಿ.ಎ ಹಾಗೂ RI ಸೇರಿ ಐವರ ವಿರುದ್ದ FIR ದಾಖಲಾಗಿರುವ ಕುರಿತು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ   ಮೈಸೂರಿನಲ್ಲಿ ಕಂದಾಯ v/s ಪೊಲೀಸ್ ಇಲಾಖೆ  ನಡುವೆ ಸಂಘರ್ಷ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕಂದಾಯ ಇಲಾಖೆ ನೌಕರರು ನನಗೆ ಮನವಿ ಕೊಟ್ಟಿದ್ದಾರೆ.  ಮನವಿಯನ್ನು ಪರಿಶೀಲಿಸಿ ಕಾ‌ನೂನು ಕ್ರಮ ಕೈಗೊಳ್ಳುತ್ತೇವೆ.  ಎಫ್‌ಐಆರ್ ಆಗಿರುವ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ.  ಪರಿಶೀಲನೆ ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಈಗ ಮನವಿ ಸಲ್ಲಿಕೆಯಾಗಿದೆ.  ಅದು ಯಾವ ಪ್ರಕರಣ, ಯಾವ ಹಂತದಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳದೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಪೊಲೀಸ್ ಇಲಾಖೆಯವರೂ ಸರ್ಕಾರಿ ನೌಕರರೇ ಆಗಿದ್ದು ನಿಯಮಾನುಸಾರ ನಡೆದುಕೊಳ್ಳಬೇಕಿದೆ. ಎಲ್ಲದರ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

ವಿನಃಕಾರಣ ನನ್ನ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ- ತಹಸೀಲ್ದಾರ್ ಗಿರೀಶ್.

ಈ ಕುರಿತು ಮಾತನಾಡಿರುವ ತಹಸೀಲ್ದಾರ್ ಗಿರೀಶ್, ವಿನಃಕಾರಣ ನನ್ನ ಮೇಲೆ ಎಫ್‌ ಐಆರ್ ದಾಖಲು ಮಾಡಿದ್ದಾರೆ. ಪೌತಿ ಖಾತೆ ಪ್ರಕರಣದಲ್ಲಿ ತಹಸೀಲ್ದಾರ್ ಪಾತ್ರ ಇರುವುದಿಲ್ಲ.  ವಿಎ, ಆರ್‌ಐ ತಪ್ಪು ಮಾಡಿದ್ದರೆ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಬಹುದಿತ್ತು.  ನಾನೇ ತಪ್ಪು ಮಾಡಿದ್ದರೆ ಜಿಲ್ಲಾಧಿಕಾರಿಗೆ ದೂರು ಕೊಡಬಹುದಿತ್ತು.  ಆದರೆ ಯಾರ ಗಮನಕ್ಕೂ ತಾರದೆ ಎಫ್‌ ಐಆರ್ ದಾಖಲು ಮಾಡಿದ್ದಾರೆ. ನನ್ನ ಕೆಲಸ ಸಹಿಸಲಾರದೆ ಎಫ್‌ಐಆರ್‌ಗೆ ಹೆಸರು ಸೇರಿಸಿದ್ದಾರೆ. ಕಂದಾಯ ಇಲಾಖೆ ನಿಯಮಗಳ ಪ್ರಕಾರ ಪೊಲೀಸರು ಸಿವಿಲ್ ಪ್ರಕರಣಗಳಿಗೆ ಮಧ್ಯಪ್ರವೇಶ ಮಾಡುವಂತಿಲ್ಲ. ಯಾರ ಪ್ರಭಾವ ಕೆಲಸ ಮಾಡಿದೆ ಎಂಬುದನ್ನು ನಾನು ತಿಳಿದುಕೊಳ್ಳಬೇಕು. ಇದುವರೆಗೂ ನನಗೆ ಪೊಲೀಸ್ ಇಲಾಖೆ ಅಥವಾ ಕೋರ್ಟ್‌ನಿಂದ ಮಾಹಿತಿ ಬಂದಿಲ್ಲ. ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

Key words: FIR -case –against- Tehsildar-appeals – legal action-Mysore DC -Bagadi Gautam