ಸಕ್ಕರೆ ಕಾಯಿಲೆ ವಿರುದ್ಧ ಸಮರ – ಶಾಸಕ ಎಸ್.ಎ ರಾಮದಾಸ್

ಮೈಸೂರು,ಜನವರಿ,28,2023(www.justkannada.in):  ದೈನಂದಿನ ಬದುಕಿನ ಒತ್ತಡದಿಂದಾಗಿ ಇಂದು ಸಕ್ಕರೆ ಕಾಯಿಲೆ ವ್ಯಾಪಕವಾಗಿ ಹರಡಿದ್ದು, ಅದರ ವಿರುದ್ಧ ಸಮರ ಸಾರುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 48ನೇ ವಾರ್ಡ್ ವ್ಯಾಪ್ತಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸರ್ಕಾರಿ ಸವಲತ್ತುಗಳ ಅದಾಲತ್, ವಾರ್ಡಿನ ಸಮಸ್ಯೆಗಳ ಪರಿಹಾರ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಎಸ್.ಎ ರಾಮದಾಸ್ ಮಾತನಾಡಿದರು.

ಆರೋಗ್ಯ ಇಲಾಖೆಯವರು ನಡೆಸಿದ ಸರ್ವೇ ಪ್ರಕಾರ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಸರಿಸುಮಾರು 60ಸಾವಿರ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತುರುವುದು ಕಂಡುಬಂದಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಈ ಕಾಯಿಲೆ ವಿರುದ್ಧ ನಾವು ಸಮರ ಸಾರಲೇಬೇಕಿದೆ. ಆ ಕಾರಣಕ್ಕಾಗಿ ಮುಂದಿನ ಐದು ವರ್ಷಗಳ ಕಾಲ ಈ ಕುರಿತಾದ ಆರೋಗ್ಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.

ಸರ್ಕಾರಿ ಸವಲತ್ತುಗಳ ಉಪಯೋಗ ಪಡೆದುಕೊಳ್ಳಿ. ಅಂತೆಯೇ, ನಿಮ್ಮ ಮಕ್ಕಳಿಗೆ ಕೆಲಸ‌ ಬೇಕಿದಲ್ಲಿ ಫೆ.14ರಂದು ವಸ್ತು ಪ್ರದರ್ಶನ ಆವರಣದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ತಿಳಿಸಿ.‌ ನೂರಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಅಂದಿನ ಮೇಳದಲ್ಲಿ ಭಾಗವಹಿಸುತ್ತಿವೆ. ಅದರ ಪ್ರಯೋಜನ ಮಕ್ಕಳಿಗೆ ಸಿಗಬೇಕು ಎಂದು ತಿಳಿಸಿದರು.

ಸಮಸ್ಯೆಗೆ ಪರಿಹಾರ ಕೇಳಿಕೊಂಡು ನೀವು ಸರ್ಕಾರಿ ಕಚೇರಿಗೆ ಹೋಗುವ ಬದಲಾಗಿ ಸಮಸ್ಯೆ ಬಗೆಹರಿಸಲು ಸರ್ಕಾರಿ ಕಚೇರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದಿವೆ. ಇದರ ಸದುಪಯೋಗ ಆಗಬೇಕು. ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಅದಾಲತ್ ಕಾರ್ಯಕ್ರಮ ರೂಪಿಸಿದ್ದು, ನೀರು, ಒಳಚರಂಡಿ, ಅರಣ್ಯ, ರಸ್ತೆ, ಆರೋಗ್ಯ, ವಿದ್ಯುತ್, ಶಿಕ್ಷಣ, ಕಾರ್ಮಿಕರು ಸೇರಿದಂತೆ ೨೦ ಇಲಾಖೆಗಳ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಯನ್ನು ಯೋಜನೆಯಲ್ಲಿ ಜೋಡಿಸಿಕೊಂಡು ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸವಲತ್ತುಗಳಿಗಾಗಿ ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸುವ ಸಲುವಾಗಿಯೇ ಈ ಮಾದರಿಯ ಕಾರ್ಯಕ್ರಮವನ್ನು ಕ್ಷೇತ್ರದಾದ್ಯಂತ ೧೯ ದಿನಗಳ ಕಾಲ ಆಯೋಜಿಸಲಾಗಿದೆ.  ಎಲ್ಲಾ ಬಗೆಯ ಸವಲತ್ತುಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದ್ದು, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಪಾಲಿಕೆ ಸದಸ್ಯೆ ಶೋಭಾ ಮತ್ತಿತರರು ಉಪಸ್ಥಿತರಿದ್ದರು.

Key words: Fight- against- diabetes – MLA- SA Ramdas